* ಕೆವಿಜಿ ಆಯುರ್ವೇದ ಆಸ್ಪತ್ರೆ ತಜ್ಷ ವೈದ್ಯರಿಂದ ತಪಾಸಣೆ
* ಇಎನ್ಟಿ
* ಕೀಲು ಮತ್ತು ಎಲುಬು ತಪಾಸಣೆ
ಪುತ್ತೂರು: ಭಕ್ತರ ಆವಶ್ಯಕತೆಗಳಿಗೆ ತಕ್ಕಂತೆ ಪ್ರತಿ ತಿಂಗಳು ಒಂದೊಂದು ವಿಶೇಷ ಚಿಕಿತ್ಸೆಗಳನ್ನು ಅಳವಡಿಸಿಕೊಂಡು ಬರುತ್ತಾ, ಸತತ ಎಂಟನೇ ತಿಂಗಳಿನತ್ತಾ ಸಾಗುತ್ತಿರುವ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯುವ ಉಚಿತ ವೈದ್ಯಕೀಯ ಶಿಬಿರವು ನ.6ರಂದು ನಡೆಯಲಿದೆ. ಈ ಬಾರಿಯ ಶಿಬಿರದಲ್ಲಿ ವಿಶೇಷವಾಗಿ ಸುಳ್ಯ ಕೆವಿಜಿ ಆಯುರ್ವೇದ ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಚಿಕಿತ್ಸೆ ನಡೆಸುವುದಾಗಿ ಪೂರ್ವಬಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ನವಚೇತನಾ ಯುವಕ ಮಂಡಲ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸಹಯೋಗದಲ್ಲಿ ಪ್ರತಿ ತಿಂಗಳು ದೇವಸ್ಥಾನದ ಭಕ್ತರಿಗಾಗಿ ಉಚಿತ ವೈದ್ಯಕೀಯ ಚಿಕಿತ್ಸೆ ಹಾಗೂ ಔಷಧಿ ವಿತರಣೆ ಕಳೆದ ಏಳು ತಿಂಗಳುಗಳಿಂದ ನಡೆಯುತ್ತಿದೆ. ಪ್ರತಿ ತಿಂಗಳ ಪ್ರಥಮ ಆದಿತ್ಯವಾರ ನಡೆಯುವ ಶಿಬಿರದಲ್ಲಿ ಜನತೆಗೆ ತಮ್ಮ ಆರೋಗ್ಯ ರಕ್ಷಣೆಗಾಗಿ ಆವಶ್ಯಕವಾಗಿರುವ ವಿಶೇಷವಾದ ಒಂದೊಂದು ಚಿಕಿತ್ಸಾ ಸೌಲಭ್ಯಗಳನ್ನು ಅಳವಡಿಸುತ್ತಾ ಶಿಬಿರವು ಜನರ ಮೆಚ್ಚುಗೆ ಪಡೆಯುತ್ತಾ ಯಶಸ್ವಿಯಾಗಿ ಎಂಟನೇ ತಿಂಗಳಿನತ್ತ ಸಾಗುತ್ತಿದೆ. ವಿವಿಧ ಖಾಯಿಲೆಗಳಿಗೆ ಸಂಬಂಧಿಸಿದಂತೆ ವಿಶೇಷ ವೈದ್ಯರ ಮೂಲಕ ಜನತೆಗೆ ಉಚಿತವಾಗಿ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಶಿಬಿರದಲ್ಲಿ ಚಿಕಿತ್ಸೆ ಹಾಗೂ ಅವರಿಗೆ ಒಂದು ತಿಂಗಳಿಗೆ ಬೇಕಾಗುವಂತಹ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಉಚಿತ ಚಿಕಿತ್ಸೆ, ಔಷಧಿಗಳ ಜೊತೆಗೆ ಊಟ, ಉಪಹಾರಗಳು ಶಿಬಿರಾರ್ಥಿಗಳಿಗೆ ದೊರೆಯುತ್ತಿದೆ. ವಿವಿಧ ವಿಭಾಗಗಳ ವೈದ್ಯರುಗಳು ಶಿಬಿರದಲ್ಲಿ ಉಚಿತ ಚಿಕಿತ್ಸೆ ನೀಡುವಲ್ಲಿ ಕೈಜೋಡಿಸಿಕೊಳ್ಳುತ್ತಿದ್ದು ಶಿಬಿರವು ಇನ್ನಷ್ಟು ಮಹತ್ವ ಪಡೆಯುತ್ತಿದೆ.
ಈ ಬಾರಿಯ ಶಿಬಿರದಲ್ಲಿ ಪ್ರತಿಷ್ಠಿತ ಸುಳ್ಯದ ಕೆವಿಜಿ ಆರ್ಯುರ್ವೇದ ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಆಯುರ್ವೇದ ವೈದ್ಯಕೀಯ ತಪಾಸಣೆ ವಿಶೇಷವಾಗಿ ನಡೆಯಲಿದೆ. ಜೊತೆಗೆ ಕೀಲು ಮತ್ತು ಎಲುಬು ವೈದ್ಯಕೀಯ ತಪಾಸಣೆ, ಇಎನ್ಟಿ ವೈದ್ಯಕೀಯ ತಪಾಸಣೆ, ಎಲುಬು ಸಾಂದ್ರತೆಯ ಪರೀಕ್ಷೆ, ತಜ್ಞರಿಂದ ವೈದ್ಯಕೀಯ ತಪಾಸಣೆ, ಇಸಿಜಿ, ಮಧುಮೇಹ ರಕ್ತಪರೀಕ್ಷೆ ಹಾಗೂ ಉಚಿತ ಔಷಧಿಗಳ ವಿತರಣೆಯು ನಡೆಯಲಿದೆ. ಶಿಬಿರದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಬೂಸ್ಟರ್ ಡೋಸ್ ಲಸಿಕೆ ವಿತರಣೆ ಮತ್ತು ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆಯುಷ್ಮಾನ್ ಆರೋಗ್ಯ ಭಾರತ್ ಕಾರ್ಡ್ ಯೋಜನೆಯ ನೋಂದಣಿ ಸೌಲಭ್ಯಗಳನ್ನು ಭಕ್ತಾದಿಗಳಿಗೆ ಒದಗಿಸಲಾಗುವುದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ತಿಳಿಸಿದರು.
ಶಿಬಿರದಲ್ಲಿ ಭಾಗವಹಿಸುವ ವೈದ್ಯರು:
ಸುಳ್ಯದ ಕೆವಿಜಿ ಆಯುರ್ವೇದ ಆಸ್ಪತ್ರೆಯ ತಜ್ಞವೈದ್ಯರುಗಳಾದ ಡಾ. ವೇಣು, ಡಾ. ವಿಜಯಲಕ್ಷ್ಮಿ ಪಿ.ಬಿ., ಡಾ. ಭಾಗ್ಯೇಶ್ ಕೆ., ಡಾ. ಅವಿನಾಶ್ ಕೆ.ವಿ., ಡಾ. ಜಯಶ್ರೀ ಭಟ್ ಹಾಗೂ ಕಿರಿಯ ವೈದ್ಯರ ತಂಡದಿಂದ ವಿಶೇಷವಾಗಿ ಆಯುರ್ವೇದ ತಪಾಸಣೆ ನಡೆಯಲಿದೆ. ಜೊತೆಗೆ ತಜ್ಞ ವೈದ್ಯರಾದ ಡಾ.ಸುರೇಶ್ ಪುತ್ತೂರಾಯ, ಕೀಲು ಮತ್ತು ಎಲುಬು ತಜ್ಞ ವೈದ್ಯ ಡಾ. ಸಚಿನ್ ಶಂಕರ್ ಹಾರಕೆರೆ, ಇಎನ್ಟಿ ತಜ್ಞ ವೈದ್ಯೆ ಡಾ. ಅರ್ಚನಾ, ಆಯುರ್ವೇದ ತಜ್ಞ ವೈದ್ಯರಾದ ಡಾ. ಸಾಯಿ ಪ್ರಕಾಶ್, ಡಾ. ದೀಕ್ಷಾ, ಡಾ. ಧನ್ಯರವರು ತಪಾಸಣೆಯನ್ನು ನಡೆಸಿಕೊಡಲಿದ್ದಾರೆ.
ವೈದ್ಯರ ಸೂಚನೆಯಂತೆ ಅವಶ್ಯಕತೆ ಇರುವ ಶಿಬಿರಾರ್ಥಿಗಳಿಗೆ ಸ್ಕ್ಯಾನ್, TMT, ಎಕ್ಸರೇ, Echo. ಪರೀಕ್ಷೆಗಳನ್ನು ದರ್ಬೆ ಉಷಾ ಸ್ಕ್ಯಾನ್ ಸೆಂಟರ್ನಲ್ಲಿ ಹಾಗೂ ಸಿಟಿ ಸ್ಕ್ಯಾನ್, ಎಂಆರ್ಐ ಸ್ಕ್ಯಾನ್ಗಳನ್ನು ತೆಂಕಿಲದಲ್ಲಿರುವ ಪುತ್ತೂರು ಡಯಾಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ನಲ್ಲಿ ರಿಯಾಯಿತಿ ದರದಲ್ಲಿ ನಡೆಸಲಾಗುವುದು. ಶಿಬಿರವು ಬೆಳಿಗ್ಗೆ 9.30ರಿಂದ ಪ್ರಾರಂಭಗೊಂಡು ಮಧ್ಯಾಹ್ನ 1 ಗಂಟೆಯ ತನಕ ನಡೆಯಲಿದೆ. ಭಾಗವಹಿಸುವ ಭಕ್ತಾದಿಗಳು 11 ಗಂಟೆಯ ಒಳಗಾಗಿ ಟೋಕನ್ ಪಡೆದುಕೊಳ್ಳುವಂತೆ ಆರೋಗ್ಯ ರಕ್ಷಾ ಸಮಿತಿಯವರು ತಿಳಿಸಿದ್ದಾರೆ.
ಕೊಡುಗೆಗಳು:
ಶಿಬಿರಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಿಮ ರೆಫ್ರಿಜರೇಷನ್ ನ ಮಾಲಕರಾದ ರಾಜೇಶ್ ಯುರವರು ರೋಗಿಗಳನು ಪರೀಕ್ಷಿಸುವ ವೈದ್ಯಕೀಯ ಮಂಚ ಮತ್ತು ಬೆಡ್, ವೀಲ್ಚೇರ್ ಹಾಗೂ ದರ್ಬೆ ನವರತ್ನ ಎಲೆಕ್ಟ್ರಿಕಲ್ಸ್ನ ಮಾಲಕ ರತನ್ ಸಿಂಗ್ರವರು ಮಾಸ್ಕ್ ಮತ್ತು ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ ಎಂದು ಸಮಿತಿಯವರು ತಿಳಿಸಿದ್ದಾರೆ.
ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಇಳಂತಾಜೆ, ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ದೇವಸ್ಥಾನ ಉತ್ಸವ ಸಮಿತಿ ಉಪಾಧ್ಯಕ್ಷ ಭೀಮಯ್ಯ ಭಟ್, ಸಂಪ್ಯ ನವಚೇತನ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್., ಮುಕ್ರಂಪಾಡಿ ಶ್ರೀಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಸೋಮಶೇಖರ ರೈ ಇಳಂತಾಜೆ, ಕೃಷ್ಣಪ್ಪ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದಯ ಕುಮಾರ್ ರೈ ಸಂಪ್ಯ ಸ್ವಾಗತಿಸಿ, ಹರಿಣಿ ಪುತ್ತೂರಾಯ ವಂದಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು.