- ಕರಾವಳಿಯ ಉತ್ಪನ್ನಗಳಿಗೂ ವೇದಿಕೆ
- ಸುದ್ದಿ, ಸಂಜೀವಿನಿ ಒಕ್ಕೂಟ ಸೇರಿದಂತೆ ಹಲವು ಸ್ಟಾಲ್ ಗಳು ಭಾಗಿ
ಪುತ್ತೂರು: ಎರಡು ವರ್ಷಗಳ ಬಳಿಕ ಮತ್ತೊಮ್ಮೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ ಆಯೋಜನೆಗೊಂಡಿದೆ. ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಪೈಕಿ ಬೆಂಗಳೂರು ಕೃಷಿ ವಿವಿ ದಕ್ಷಿಣ ಕನ್ನಡ ಜಿಲ್ಲೆಗೆ ಹತ್ತಿರದಲ್ಲಿರುವುದರಿಂದ, ಈ ಕೃಷಿ ಮೇಳ ಜಿಲ್ಲೆಯ ಕೃಷಿಕರಿಗೆ ಹೆಚ್ಚು ಉಪಯುಕ್ತವಾಗಿದೆ.
800ಕ್ಕೂ ಅಧಿಕ ಮಳಿಗೆ, ವಿಶಾಲ ಜಾಗದಲ್ಲಿ ಬೆಳೆದು ನಿಂತಿರುವ ವೈವಿಧ್ಯ ಬೆಳೆಗಳು, ಬೆಂಗಳೂರೆಂಬ ದಟ್ಟ ಪಟ್ಟಣದ ನಡುವೆ ಬೆಳೆದು ನಿಂತಿರುವ ಅರಣ್ಯ ಪ್ರದೇಶ. ಇವೆಲ್ಲವನ್ನು ಆಸ್ವಾದಿಸುತ್ತಾ ಸಾಗುತ್ತಿದ್ದರೆ ಕಣ್ಣಿಗೆ ಹಬ್ಬ. ದೇಹ ಸುಸ್ತಾದರೂ, ಮತ್ತಷ್ಟು ಸುತ್ತಾಡಲು ಹಾತೊರೆಯುವ ಮನಸ್ಸು. ಮುಗಿಯದಷ್ಟು ವಿಸ್ತಾರಕ್ಕೆ ನಿಂತಿರುವ ಕೃಷಿ ಮೇಳ, ಕೃಷಿಕರಿಗೆ ಹೊಸ ಅನುಭವ ನೀಡುವುದರಲ್ಲಿ ಎರಡು ಮಾತಿಲ್ಲ. ಇದರ ನಡುವೆ ವಿಚಾರ ಸಂಕಿರಣ, ಯುವ ರೈತರನ್ನು ಗುರುತಿಸುವ ಕಾಯಕ, ಕೃಷಿಕರ ಅನುಭವ ಕಥೆಗಳು ಹೀಗೆ ವೇದಿಕೆಯಲ್ಲೂ ಕೃಷಿಯನ್ನು ಉತ್ತೇಜಿಸುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿತ್ತು.
ಕೃಷಿ ಮೇಳಕ್ಕೆ ಹೊರಟು ನಿಂತವರಲ್ಲಿ, ಬೆಂಗಳೂರಿನ ಕೃಷಿ ಮೇಳದಿಂದ ದಕ್ಷಿಣ ಕನ್ನಡದ ಕೃಷಿಕರಿಗೇನಾದರೂ ಪ್ರಯೋಜನವಾದೀತೇ ಎಂಬ ಪ್ರಶ್ನೆ ಸಹಜವಾಗಿ ಕೇಳಿ ಬರುತ್ತಿರುತ್ತದೆ. ದಕ್ಷಿಣ ಕನ್ನಡದ ಕೃಷಿಯ ದೃಷ್ಟಿಯಿಂದ ನೋಡಿದಾಗ – ಹೌದಲ್ವ ಎಂದು ಅನಿಸುತ್ತದೆ. ಆದರೆ ಒಮ್ಮೆ ಕೃಷಿ ಮೇಳಕ್ಕೆ ಭೇಟಿ ನೀಡಿದಾಗ, ವಾಸ್ತವ ಅರಿವಾಗುತ್ತದೆ. ಬೆಂಗಳೂರಿನ ಹೃದಯ ಭಾಗದಲ್ಲಿ ಹಮ್ಮಿಕೊಳ್ಳುವ ಕೃಷಿ ಮೇಳದಲ್ಲಿ ಅಡಿಕೆ, ತೆಂಗು, ಕಾಳುಮೆಣಸು, ಬಾಳೆ ಹೀಗೆ ಈ ಭಾಗದ ಕೃಷಿ ಪದ್ಧತಿಯನ್ನು ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ. ಇನ್ನಷ್ಟು ಸಮೃದ್ಧವಾಗಿ, ಹೆಚ್ಚು ಇಳುವರಿ ಪಡೆಯುವ ವಿಧಾನ, ಹೊಸ ತಳಿಗಳ ಬಗ್ಗೆಯೂ ಪ್ರಾತ್ಯಕ್ಷಿಕೆ ನಡೆಯಿತು. ಕರಾವಳಿಯ ಪ್ರಮುಖ ಉತ್ಪನ್ನಗಳ ಮಳಿಗೆ ಅಲ್ಲಿ ಸ್ಥಾನ ಪಡೆದಿವೆ. ಕರಾವಳಿಯ ನರ್ಸರಿಗಳ ಉತ್ಪನ್ನಗಳು ಮಾರಲ್ಪಡುತ್ತವೆ. ಅಂದರೆ ಮೇಳದಿಂದ ಕೃಷಿಕರಿಗೆ ಪ್ರಯೋಜನ ಸಿಗುವ ಜೊತೆಗೆ ಜಿಲ್ಲೆಯ ಕೃಷಿಗೆ ಮಾರುಕಟ್ಟೆ ವೇದಿಕೆಯೂ ತೆರೆದುಕೊಂಡಿದೆ. ಕರಾವಳಿಯಲ್ಲಿ ಹೊಸ ಬೆಳೆ, ಕೃಷ್ಯುತ್ಪನ್ನ ಬೆಳೆಯಲು ಅವಕಾಶ ಇದೆ ಎನ್ನುವುದನ್ನು ಪರಿಚಯಿಸುವ ಪ್ರಯತ್ನ ನಡೆದಿದೆ.
ಬಸ್ ವ್ಯವಸ್ಥೆ: ನೂರಾರು ಎಕರೆ ಜಾಗದಲ್ಲಿ ಹರಡಿಕೊಂಡಿರುವ ವಿಶಾಲ ಪ್ರದೇಶ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ. ಇಲ್ಲಿನ ಮುಖ್ಯದ್ವಾರದಿಂದ ಮೇಳದ ಆವರಣ ತಲುಪಲು 3-4 ಕಿಲೋ ಮೀಟರ್ ದೂರ ಸಾಗಬೇಕು. ದೂರದೂರಿನಿಂದ ಬರುವ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತವಾಗಿ ಬಸ್ ಪ್ರಯಾಣದ ವ್ಯವಸ್ಥೆಯನ್ನು ಮುಖ್ಯದ್ವಾರದಲ್ಲೇ ಮಾಡಲಾಗಿತ್ತು. ಖಾಸಗಿ ವಾಹನಗಳಿಗೆ ಕೃಷಿಮೇಳದ ಪಕ್ಕದಲ್ಲೇ ಸುವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.
ಕೃಷಿಯಲ್ಲಿ ನವೋದ್ಯಮ ಧ್ಯೇಯವಾಕ್ಯ: ಬೆಂಗಳೂರು ಜಿಕೆವಿಕೆ ಕೃಷಿ ಮೇಳದ ಈ ಬಾರಿಯ ಧ್ಯೇಯವಾಕ್ಯ ಕೃಷಿಯಲ್ಲಿ ನವೋದ್ಯಮ. ನವೋದ್ಯಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಟ್ಟು ಮೇಳ ಕಾರ್ಯತತ್ಪರವಾಗಿತ್ತು. ಜೊತೆಗೆ ವಿಚಾರ ಸಂಕಿರಣದ ವೇದಿಕೆಯಲ್ಲಿ ಕೃಷಿಯಲ್ಲಿ ಉದ್ಯಮ ಮಾಡಿ ಯಶಸ್ವಿಯಾದ ಸಾಧಕರ ಕಥೆಯನ್ನು ಅವರಿಂದಲೇ ಕೇಳಿ ತಿಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಜೇನು ಕೃಷಿಯಲ್ಲಿ ಸುಮಾರು 15 ಕೋಟಿ ರೂ.ನಷ್ಟು ಆದಾಯ ಗಳಿಸಿರುವ ಮಧುಕೇಶ್ವರ್ ಅವರು, ಜೇನುಕೃಷಿಯ ಜೊತೆಗೆ ಜೇನು ವಿಷ, ರಾಯಲ್ ಜೆಲ್ಲಿ, ಜೇನು ಕಚ್ಚಿಸುವ ಔಷಧಿ ಮೊದಲಾದ ವಿಷಯಗಳತ್ತ ಬೆಳಕು ಚೆಲ್ಲಿದರು. ಇಂದಿರಾ ಫುಡ್ ಪ್ರೈ.ಲಿ.ನ ವಿಜಯ್ ತಮ್ಮ ಉದ್ಯಮ ಬೆಳೆದು ಬಂದ ಬಗೆಯನ್ನು ವಿವರಿಸಿದರು. ರಘು ಅವರು ಸಹಕಾರಿ ತತ್ವದಡಿ ಸಿರಿಧಾನ್ಯ ಬೆಳೆಸಿ, ಮಾರಾಟ ಗಳಿಸಿದ ಬಗ್ಗೆ ಮಾತನಾಡಿದರು. ಪಾಟೀಲ್ ಅವರು ತಮ್ಮ ಉದ್ಯಮದ ಯಶೋಗಾಥೆಯನ್ನು ಸಭೆಯ ಮುಂದಿಟ್ಟರು.
ಮೇಳಗಳ ವೈಭವ
ಬೆಂಗಳೂರು ಜಿಕೆವಿಕೆ ಆವರಣದಲ್ಲಿ ನಡೆದ ಕೃಷಿಮೇಳದಲ್ಲಿ ಕೃಷಿಗೆ ಸಂಬಂಧಪಟ್ಟ ಮಳಿಗೆಗಳ ಜೊತೆಗೆ ಕೃಷಿಕರಿಗೆ, ವಿದ್ಯಾರ್ಥಿಗಳಿಗೆ ಅಗತ್ಯ ಪರಿಕರಗಳ ಮಳಿಗೆಗಳು ಇದ್ದವು. ಪ್ರಮುಖವಾಗಿ ಗುರುತಿಸುವುದಾದರೆ, ಎನ್.ಆರ್.ಎಲ್.ಎಂ. ಯೋಜನೆಯ ಅಮಿತಾ ಎಲ್ ಸಮಗ್ರ ಸಂಜೀವಿನಿ ಐವರ್ನಾಡು ಒಕ್ಕೂಟ ಹಾಗೂ ಮುರುಳ್ಯ ನಾಗಶ್ರೀ ಸಂಜೀವಿನಿ ಒಕ್ಕೂಟದ ಸದಸ್ಯೆಯರು ಜೇನುತುಪ್ಪ ಹಾಗೂ ಅಕ್ಕಿರೊಟ್ಟಿಯ ಸ್ಟಾಲ್ ಹಾಕಿದ್ದರು. ಸುದ್ದಿ ಬಿಡುಗಡೆ ಪತ್ರಿಕೆ, ಮಾಧ್ಯಮ ಹಾಗೂ ಸುದ್ದಿ ಕೃಷಿ ಕೇಂದ್ರದ ಸ್ಟಾಲ್ ಹಾಕಲಾಗಿತ್ತು. ಕಾಸರಗೋಡಿನ ತಂಡ ಚುಚ್ಚದ ಜೇನು ಅಥವಾ ಮೊಜೆಂಟಿ ಜೇನು ಹಾಗೂ ಅದರ ಜೇನು ತುಪ್ಪದ ಮಳಿಗೆ ಗಮನ ಸೆಳೆಯಿತು. ಉಪ್ಪಿನಂಗಡಿಯ ಕಾಟೇಜ್ ಇಂಡಸ್ಟ್ರೀಯ ಅಗ್ರೀ ಹ್ಯಾಂಡ್ ಟೂಲ್, ಕ್ರಾಫ್ಟ್, ಆರ್ಗಾನಿಕ್ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿತ್ತು. ಜ್ಯಾಕ್ ಅನಿಲ್ ಅವರ ಪುತ್ತೂರಿನ ಅದ್ಭುತ ಹಲಸು ಭಾರೀ ಪ್ರಮಾಣದಲ್ಲಿ ಮಾರಾಟಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಇಂತಹ ಇನ್ನಷ್ಟು ಮಳಿಗೆಗಳು ಕೃಷಿಮೇಳದಲ್ಲಿದ್ದವು. ಇನ್ನೂ ಕೆಲವೆಡೆ ದೇಸೀ ಉತ್ಪನ್ನಗಳು, ಸಾವಯವ ಉತ್ಪನ್ನಗಳು ವಿಶೇಷವಾಗಿ ಗ್ರಾಹಕರನ್ನು ಆಕರ್ಷಿಸುತ್ತಿದ್ದವು.