





ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ತೃತೀಯ ಬಿಸ್ಸಿ ವಿದ್ಯಾರ್ಥಿಗಳು ರಚಿಸಿದ `ಫಿಲೋ ಸಿಂಚನ’ ಎಂಬ ಹಸ್ತಪ್ರತಿ ಸಂಚಿಕೆಯು ಇತ್ತೀಚೆಗೆ ಅನಾವರಣಗೊಂಡಿತು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಹಸ್ತಪ್ರತಿ ಸಂಚಿಕೆಯನ್ನು ಉದ್ಘಾಟನೆಗೊಳಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ ವಿದ್ಯಾರ್ಥಿಗಳು ಉತ್ತಮ ಗುಣವನ್ನು ಹೊಂದಬೇಕು ಹಾಗೂ ಓದುವುದರಲ್ಲಿ, ಬರೆಯುವುದರಲ್ಲಿ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಸಮಯವನ್ನು ಹರಟೆ, ಮೋಜಿನಲ್ಲಿಯೇ ಕಳೆಯುತ್ತಾ ಕಳೆದು ಹೋಗುವ ಬದಲು ಹಸ್ತಪ್ರತಿ ಸಂಚಿಕೆಯ ರಚನೆಯಂತಹ ರಚನಾತ್ಮಕ ಕ್ರಿಯೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಾಗಬೇಕು ಎಂದರು.
ಕಾಲೇಜಿನ ಉಪ ಪ್ರಾಂಶುಪಾಲ ಮತ್ತು ಆಂತರಿಕ ಗುಣಮಟ್ಟ ಕೋಶದ ನಿರ್ದೇಶಕರಾದ ಡಾ|ಎ.ಪಿ ರಾಧಾಕೃಷ್ಣರವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯ, ಓದು, ಬರವಣಿಗೆಗಳ ಕುರಿತು ಆಸಕ್ತಿ ಹುಟ್ಟಲು, ಅಭಿರುಚಿ ಹೆಚ್ಚಿಸಲು ಹಸ್ತಪ್ರತಿ ಸಂಚಿಕೆಗಳ ರಚನೆಯಂತಹ ಕಾರ್ಯಗಳು ಪ್ರೇರಣೆ ಕೊಡುತ್ತದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ|ವಿಜಯಕುಮಾರ್ ಮೊಳೆಯಾರ್‌ರವರು ಹಸ್ತಪ್ರತಿ ಸಂಚಿಕೆಯ ರಚನೆಯಲ್ಲಿ ವಿದ್ಯಾರ್ಥಿಗಳು ತೋರಿದ ಆಸಕ್ತಿಯನ್ನು ಶ್ಲಾಘಿಸಿದರು. ವಿದ್ಯಾರ್ಥಿನಿಯರಾದ ತನ್ವಿ ಮತ್ತು ಶಾಲಿನಿ ಪ್ರಾರ್ಥಿಸಿದರು. ರೇಶ್ಮಾ ವಂದಿಸಿದರು. ಸೋಮಿತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.











