ಉಪ್ಪಿನಂಗಡಿ: ತಣ್ಣೀರುಪಂಥ ಹಾಲು ಉತ್ಪಾದಕರ ಸಹಕಾರ ಸಂಘವು ಕರ್ನಾಟಕ ರಾಜ್ಯದಲ್ಲಿಯೇ ಐಎಸ್ಒ ಮಾನ್ಯತೆ ಪಡೆದ ಏಕೈಕ ಹಾಲು ಉತ್ಪಾದಕರ ಸಹಕಾರಿ ಸಂಘವಾಗಿದ್ದು, ಹಲವು ಪ್ರಥಮಗಳ ಸಾಧನೆಯೊಂದಿಗೆ ಸದಸ್ಯರಿಗೂ ಕೂಡಾ ಉತ್ತಮ ಸೌಲಭ್ಯವನ್ನು ಈ ಸಂಘ ನೀಡುತ್ತಿದೆ. 2021-22ನೇ ಅವಧಿಯಲ್ಲಿ ಸಂಘವು 43,29,386.74 ರೂ. ಲಾಭ ಗಳಿಸಿದ್ದು, ಇದರಲ್ಲಿ 23,28,374 ರೂ.ವನ್ನು ರೈತರಿಗೆ ಬೋನಸ್ ಆಗಿ ನೀಡಿದೆ ಎಂದು ಸಂಘದ ಅಧ್ಯಕ್ಷ ಬಿ. ನಿರಂಜನ್ ತಿಳಿಸಿದರು.
ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಹೈನುಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇಲ್ಲಿ ಹಾಲು ಹಾಕುವ ಸಂಘದ ಸದಸ್ಯರಿಗೆ ಪ್ರತಿ ಲೀಟರ್ಗೆ ಒಂದು ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ಸಂಘದ ವತಿಯಿಂದ ನೀಡಲಾಗುತ್ತಿದೆ. ಈ ಸಂಘದಲ್ಲಿ ಬಿಟ್ಟರೆ ಇಂತಹ ಯೋಜನೆ ದ.ಕ. ಹಾಗೂ ಉಡುಪಿ ಜಿಲ್ಲೆಯ ಯಾವುದೇ ಸಂಘದಲ್ಲಿ ಇಲ್ಲ. ಅಲ್ಲದೆ, ಸಂಘದ ಸದಸ್ಯರ ಕಲ್ಯಾಣ ನಿಧಿಯನ್ನು ಸ್ಥಾಪಿಸಿ ಇದರಲ್ಲಿ ಸಂಘದ ಸಕ್ರೀಯ ಸದಸ್ಯರ ಪತಿ ಹಾಗೂ ಪತ್ನಿಗೆ ಆಸ್ಪತ್ರೆಯ ವೆಚ್ಚಗಳ ರಶೀದಿಯನ್ನು ಪಾವತಿಸಿದ್ದಲ್ಲಿ ಒಟ್ಟು ಮೊತ್ತದ ಶೇ.10ರಿಂದ 15ರಷ್ಟು ಸಂಘದ ಸದಸ್ಯರ ಕಲ್ಯಾಣ ನಿಧಿಯಿಂದ ಪಾವತಿಸಲಾಗುತ್ತದೆ. ಅಲ್ಲದೇ, ಮನೆ ಹಾನಿ, ಪ್ರಕೃತಿ ವಿಕೋಪದಂತಹ ಸಮಸ್ಯೆಗಳಿಗೆ ಸದಸ್ಯರು ಸಿಲುಕಿಕೊಂಡರೆ ಅಂತಹ ಸದಸ್ಯರಿಗೆ ಈ ನಿಧಿಯಿಂದ ಧನ ಸಹಾಯ ಮಾಡಲಾಗುತ್ತಿದೆ. ಇದರೊಂದಿಗೆ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನೂ ನೀಡಲಾಗುತ್ತದೆ. ಕಳೆದ ಸಾಲಿನಲ್ಲಿ 25 ಸಾವಿರ ರೂಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಸುಮಾರು 2 ಲಕ್ಷ ರೂ.ಗಳನ್ನು ಸಕ್ರೀಯ ಸದಸ್ಯರಿಗೆ ಸದಸ್ಯರ ಕಲ್ಯಾಣ ನಿಧಿಯಿಂದ ನೀಡಲಾಗಿದೆ ಎಂದರು.
2002-03ನೇ ಸಾಲಿನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮವಾಗಿ ಬಿ.ಎಂ.ಸಿ. (ಹಾಲು ಶೀತಲೀಕರಣ ಘಟಕ) ಅಳವಡಿಸಿದ ಸಂಘ ನಮ್ಮದಾಗಿದ್ದು, ಮೊದಲಿದ್ದ 5 ಸಾವಿರ ಲೀ. ಸಾಮರ್ಥ್ಯದ ಕೂಲರ್ ಅನ್ನು ತೆಗೆದು ಈಗ 8 ಸಾವಿರ ಲೀಟರ್ ಸಾಮರ್ಥ್ಯದ ಕೂಲರ್ ಅನ್ನು ಅಳವಡಿಸಲಾಗಿದೆ. ಸಂಘದ ದಿನವಹಿ ಹಾಲಿನ ಸಂಗ್ರಹಣೆ 6709 ಲೀಟರ್ಗಳಾಗಿದ್ದು, ಉಳಿದ ಹಾಲನ್ನು ಬೇರೆ ಸಂಘದಿAದ ತರಿಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಕೂಲರ್ಗೆ ಬೇಕಾದ 8 ಸಾವಿರ ಲೀ. ಹಾಲನ್ನು ಇದೇ ಸಂಘದಿಂದಲೇ ಭರಿಸಬೇಕು ಎನ್ನುವ ಗುರಿಯಿದೆ ಎಂದ ಬಿ. ನಿರಂಜನ್, ಇಲ್ಲಿ ವಿಲಿಯಂ ಲೋಬೋ ಎಂಬವರು ದಿನಕ್ಕೆ 240 ಲೀಟರ್ ಹಾಲನ್ನು ಸಂಘಕ್ಕೆ ಪೂರೈಸುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸಂಘದ ಹಾಲು ಪೂರೈಸುವವರಲ್ಲಿ ಅವರೇ ಮೊದಲಿಗರಾಗಿದ್ದಾರೆ. ನಮ್ಮ ಸಂಘದ ವ್ಯಾಪ್ತಿಯಲ್ಲಿ ಹೆಚ್ಚಿನ ಮುಸ್ಲಿಮ್ ಕುಟುಂಬಗಳು ಕೂಡಾ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿವೆ ಎಂದರು.
ಸಂಘಕ್ಕೆ 8.52 ಎಕರೆ ಜಮೀನಿದ್ದು, ಅದರಲ್ಲಿ 8 ಬಗೆಯ ವಿವಿಧ ಹುಲ್ಲಿನ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿಂದ ನಮ್ಮ ರಾಜ್ಯದ ಬೇರೆ ಬೇರೆ ಹಾಲು ಉತ್ಪಾದಕರ ಒಕ್ಕೂಟದ ಸದಸ್ಯರಿಗೆ ಹುಲ್ಲಿನ ನಾಟಿ ತುಂಡುಗಳನ್ನು ಸರಬರಾಜು ಮಾಡಲಾಗುತ್ತದೆ. ಅಲ್ಲದೆ, ಇದರಲ್ಲಿ 1300 ಅಡಿಕೆ ಗಿಡಗಳನ್ನು ಬೆಳೆಸಲಾಗಿದೆ. 2022ರ ಮಾರ್ಚ್ ಗೆ ಸಂಘವು ಒಟ್ಟು 1,01,08,058.47 ರೂ. ಕ್ಷೇಮ ನಿಧಿಯನ್ನು ಹೊಂದಿದೆ. ಸಂಘದ ಹಲವು ಸಾಧನೆಗಳಿಗಾಗಿ ಹಲವು ಪ್ರಶಸ್ತಿಗಳು ಸಂಘಕ್ಕೆ ಬಂದಿದ್ದು, ಸಂಘದ ಪ್ರಗತಿಗೆ ಸಂಘದ ಸದಸ್ಯರು, ನಿರ್ದೇಶಕರು, ಸಿಬ್ಬಂದಿ ವರ್ಗವೇ ಕಾರಣ ಎಂದು ನಿರಂಜನ್ ಬಿ. ತಿಳಿಸಿದರು.
ಬಯಲು ಸೀಮೆ ಹಾಗೂ ಮಲೆನಾಡಿಗೆ ಹೋಲಿಸಿದರೆ ಕರಾವಳಿ ಭಾಗದಲ್ಲಿ ಹಾಲಿನ ಉತ್ಪಾದನಾ ವೆಚ್ಚ ಅಧಿಕವಾಗಿದೆ. ಇಲ್ಲಿ 10 ಲೀಟರ್ ಹಾಲು ಉತ್ಪಾದಿಸಬೇಕಾದರೆ 212.80ರೂ. ಹಿಂಡಿಗೆ, 5.50 ರೂ. ಲವಣಮಿಶ್ರಣಕ್ಕೆ, 90 ರೂ. ಹುಲ್ಲಿಗೆ, 10 ರೂ. ವೈದ್ಯಕೀಯ ವೆಚ್ಚ, 3 ರೂ. ಸಾಗಾಣಿಕಾ ವೆಚ್ಚ, 10 ರೂ. ಕೂಲಿ ಹಾಗೂ ಇತರೆ 50 ರೂ.ವನ್ನು ಲೆಕ್ಕಚಾರ ಹಾಕಿದಾಗ 381.30 ರೂ. ಖರ್ಚು ಬೀಳುತ್ತದೆ. ಆದ್ದರಿಂದ ಈ ಭಾಗಕ್ಕೆ ದನ ಕರು ಹಾಕಿದ ನಾಲ್ಕು ತಿಂಗಳು ಪ್ರತಿ ಲೀಟರ್ಗೆ 38.13 ರೂ. ಹಾಗೂ ಬಳಿಕ ದಿನಗಳಲ್ಲಿ ಪ್ರತಿ ಲೀಟರ್ಗೆ 45 ರೂ. ನೀಡಿದಾಗ ಮಾತ್ರ ಹೈನುಗಾರಿಕೆ ಲಾಭದಾಯಕವಾಗಲು ಸಾಧ್ಯ. ಆದ್ದರಿಂದ ಸರಕಾರ ಈ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಬಿ.ನಿರಂಜನ್ ತಿಳಿಸಿದರಲ್ಲದೆ, ಈ ಬಗ್ಗೆ ಸಂಘದ ವತಿಯಿಂದಲೂ ಸರಕಾರಕ್ಕೆ ಮನವಿ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಉಪಾಧ್ಯಕ್ಷ ಪಿ. ಜಯರಾಜ್ ಹೆಗ್ಡೆ, ನಿರ್ದೇಶಕರಾದ ಜನಾರ್ದನ ಗೌಡ, ಬಿ. ತಿಮ್ಮಪ್ಪ ಸಾಲಿಯಾನ್, ಜೋನ್ ಫೆಲಿಕ್ಸ್ ಲೋಬೋ, ತಿರುಮಲೇಶ್ವರ ಪ್ರಸನ್ನ ಭಟ್, ದಿನೇಶ್ ಗೌಡ, ಸೇಸಪ್ಪ ಸಾಲ್ಯಾನ್, ಪಿ.ಸಿ. ನಾಯ್ಕ, ಶೂರ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಜ್ ಉಪಸ್ಥಿತರಿದ್ದರು.