ಆಲಂಕಾರು ನಿವಾಸಿಗೆ ಧರ್ಮಸ್ಥಳ ನೀರ ಚಿಲುಮೆಯಲ್ಲಿ ಹಲ್ಲೆ, ಜೀವ ಬೆದರಿಕೆ; ದೂರು

0

ರಾಮಕುಂಜ: ಕಡಬ ತಾಲೂಕಿನ ಆಲಂಕಾರು ಗ್ರಾಮದ ನೆಕ್ಕರೆ ನಿವಾಸಿ ಬಾಬು ಯಾನೆ ರುದ್ರ (53ವ.)ಎಂಬವರಿಗೆ ಧರ್ಮಸ್ಥಳ ನೀರ ಚಿಲುಮೆ ಎಂಬಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ಡಿ.6ರಂದು ರಾತ್ರಿ ನಡೆದಿದೆ.

ಬಾಬು ಅವರು ಸಂಜೆ ಕೆಲಸ ಮುಗಿಸಿ ಆಲಂಕಾರಿನಿಂದ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಪಜಿರಡ್ಕ ಎಂಬಲ್ಲಿಗೆ ಹೋಗಲೆಂದು ಉಪ್ಪಿನಂಗಡಿಯಿಂದ ಧರ್ಮಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸಿ ಧರ್ಮಸ್ಥಳದ ನೀರ ಚಿಲುಮೆ ಎಂಬಲ್ಲಿ ಇಳಿದು ಪಜಿರಡ್ಕ ಕಡೆಗೆ ಹೋಗುವ ರಸ್ತೆಯಲ್ಲಿ ರಾತ್ರಿ ಸುಮಾರು 9 ಗಂಟೆ ವೇಳೆಗೆ ನಡೆದುಕೊಂಡು ಹೋಗಿ ಪಜಿರಡ್ಕ ಕಾಲನಿಗೆ ತಲುಪುತ್ತಿದ್ದಂತೆ ಎದುರುಗಡೆಯಿಂದ ಬಂದ ಆರೋಪಿಗಳಾದ ಶಂಕರ ಮತ್ತು ಅವರ ಮಕ್ಕಳಾದ ಸದಾಶಿವ ಹಾಗೂ ಶಶಿ ಎಂಬವರು ತಡೆದು ನಿಲ್ಲಿಸಿ ನೀನು ನಿನ್ನ ಹೆಂಡತಿಗೆ ಮನೆ ಕಟ್ಟಲು ಫೌಂಡೇಶನ್ ಹಾಕಿದ್ದು ಮುಂದಕ್ಕೆ ಮನೆ ಕಟ್ಟಿ ಕೊಡಬಾರದು. ನೀನು ಮನೆ ಕಟ್ಟಲು ಪ್ರಾರಂಭಿಸಿದರೆ ನಿನ್ನ ಕೈಕಾಲು ಮುರಿಯುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ಆರೋಪಿ ಸದಾಶಿವನು ಆತನ ಕೈಯಲ್ಲಿದ್ದ ಕತ್ತಿಯಿಂದ ಬಾಬು ಅವರ ಎಡಕೈ ರಟ್ಟೆಗೆ ಕಡಿದು ಗಾಯಗೊಳಿಸಿದ್ದಾರೆ. ಇನ್ನೋರ್ವ ಆರೋಪಿ ಶಶಿ ಎಂಬಾತ ಕಬ್ಬಿಣದ ಸರಳಿನಿಂದ ಬೆನ್ನಿಗೆ ಹಾಗೂ ಹೊಟ್ಟೆಯ ಬಲಭಾಗಕ್ಕೆ ಹೊಡೆದಿದ್ದು ಈ ವೇಳೆ ನೋವು ತಾಳಲಾರದೇ ಬಾಬು ಅವರು ಬೊಬ್ಬೆ ಹಾಕಿದಾಗ ಬೊಬ್ಬೆ ಕೇಳಿ ಅಲ್ಲಿಗೆ ಬಾಬು ಅವರ ಪತ್ನಿ ತೇಜಸ್ವಿ ಓಡಿಕೊಂಡು ಬರುವುದನ್ನು ನೋಡಿದ ಆರೋಪಿಗಳು ಈಗ ನೀನು ಬದುಕಿದ್ದೀಯಾ ? ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿ ಹಲ್ಲೆ ಮಾಡಲು ಬಳಸಿದ ಕತ್ತಿಯನ್ನು ಅಲ್ಲೇ ಹುಲ್ಲುಗಳ ಮಧ್ಯೆ ಬಿಸಾಡಿ ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಗಾಯಾಳು ಬಾಬು ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ: 341, 504, 323,324, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here