ಪುತ್ತೂರು: ಮೂಲತಃ ಸುಳ್ಯಪದವು ನಿವಾಸಿ ಪ್ರಸ್ತುತ ಪಡೀಲಿನಲ್ಲಿ ವಾಸ್ತವ್ಯ ಹೊಂದಿರುವ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ವೈಟ್ ಲಿಪ್ಟಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಂದ್ರ ಪ್ರಸಾದ್(42ವ.) ರವರು ಹೃದಯಾಘಾತದಿಂದ ದ.12 ರಂದು ನಿಧನ ಹೊಂದಿದ್ದಾರೆ.
ಮೃತ ರಾಜೇಂದ್ರ ಪ್ರಸಾದ್ ರವರಿಗೆ ಮನೆಯಲ್ಲಿದ್ದ ಸಂದರ್ಭ ಬೆಳಿಗ್ಗೆ ಎದೆ ನೋವು ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಸ್ವತಃ ತಮ್ಮ ಕಾರಿನಲ್ಲಿ ಡ್ರೈವ್ ಮಾಡಿಕೊಂಡು ರಾಜೇಂದ್ರ ಪ್ರಸಾದ್ ರವರು ತಮ್ಮ ಮಗಳನ್ನು ಸುದಾನ ಶಾಲೆಗೆ ಬಿಟ್ಟು ಬಳಿಕ ಚಿಕಿತ್ಸೆಗೆಂದು ಚೇತನಾ ಆಸ್ಪತ್ರೆಗೆ ಬಂದಿದ್ದರು. ಆದರೆ ಅಲ್ಲಿ ಇಸಿಜಿ ತೆಗೆಯುವ ಮೊದಲೇ ಅವರು ಅಸುನೀಗಿರುತ್ತಾರೆ ಎಂದು ವರದಿಯಾಗಿದೆ.
ಮೃತ ರಾಜೇಂದ್ರ ಪ್ರಸಾದ್ ರವರು ಪ್ರಸ್ತುತ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ವೈಟ್ ಲಿಪ್ಟಿಂಗ್ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉಜಿರೆ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಖ್ಯ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾಜೇಂದ್ರ ಪ್ರಸಾದ್ ರವರ ಗರಡಿಯಲ್ಲಿ ನಾಲ್ಕು ಮಂದಿ ಅಂತರ್ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಏಕಲವ್ಯ ಪ್ರಶಸ್ತಿ ಪುರಸ್ಕೃತ, ಇಂಗ್ಲೆಂಡಿನ ಬರ್ಮಿಂಗ್ ಹ್ಯಾಂನಲ್ಲಿ ನಡೆದಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ(2018ರಲ್ಲಿ ಬೆಳ್ಳಿ ಪದಕ) ಪಡೆದಿರುವ ಗುರುರಾಜ್ ಪೂಜಾರಿಯವರು ರಾಜೇಂದ್ರ ಪ್ರಸಾದ್ ರವರ ಶಿಷ್ಯರಾಗಿದ್ದರು ಎಂಬುದು ಉಲ್ಲೇಖನೀಯ.
ಪುತ್ತೂರಿನ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ ರಾಜೇಂದ್ರ ಪ್ರಸಾದ್ ರವರು ವೈಟ್ ಲಿಪ್ಟಿಂಗ್ ನಲ್ಲಿ ರಾಷ್ಟ್ರ ಮಟ್ಟದ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಮಾತ್ರವಲ್ಲದೆ ಫಿಲೋಮಿನಾ ಕಾಲೇಜಿನಲ್ಲಿ ವೈಟ್ ಲಿಪ್ಟಿಂಗ್ ಕೋಚ್ ಆಗಿ ಹಲವು ವರ್ಷ ಕ್ರೀಡಾಪಟುಗಳಿಗೆ ತರಬೇತಿಯನ್ನು ನೀಡಿರುತ್ತಾರೆ. ಅತ್ಯಂತ ಲವಲವಿಕೆಯಿಂದ ಕೂಡಿರುವ ರಾಜೇಂದ್ರ ಪ್ರಸಾದ್ ರವರು ಉತ್ತಮ ಕೋಚ್ ಎಂದೇ ಸಾರ್ವಜನಿಕ ವಲಯದಲ್ಲಿ ಹೆಸರನ್ನು ಹೊಂದಿರುತ್ತಾರೆ.
ಮೃತ ರಾಜೇಂದ್ರ ಪ್ರಸಾದ್ ರವರು ತಂದೆ ರಾಮಕೃಷ್ಣ, ತಾಯಿ ಇಂದಿರಾವತಿ, ಪತ್ನಿ ಬಂಟ್ವಾಳ ಬಿಇಒ ಕಛೇರಿಯಲ್ಲಿ ಕ್ಲರ್ಕ್ ಆಗಿರುವ ಪ್ರತಿಮಾ, ಪುತ್ರಿಯರಾದ ಸುದಾನ ಶಾಲೆಯಲ್ಲಿ ಐದನೇ ತರಗತಿಯ ಸಮನ್ವಿ, ಎಲ್.ಕೆ.ಜಿಯ ಮಾನ್ವಿ, ಸಹೋದರಿ ಐಶ್ವರ್ಯರವರನ್ನು ಅಗಲಿದ್ದಾರೆ.
ಅಗಲಿದ ರಾಜೇಂದ್ರ ಪ್ರಸಾದ್ ರವರ ಸ್ವಗೃಹಕ್ಕೆ ರಾಜೇಂದ್ರ ಪ್ರಸಾದ್ ರವರ ಸಹವರ್ತಿ ಕ್ರೀಡಾಪಟುಗಳು, ದೈಹಿಕ ಶಿಕ್ಷಣ ನಿರ್ದೇಶಕರು, ತರಬೇತುದಾರರು, ಆತ್ಮೀಯರು, ಹಿತೈಷಿಗಳು ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿರುತ್ತಾರೆ.
ಮೃತ ರಾಜೇಂದ್ರ ಪ್ರಸಾದ್ ರವರ ಅಂತ್ಯಕ್ರಿಯೆಯು ದ.12 ರಂದು ಸಂಜೆ 6 ಗಂಟೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿನ ಮಡಿವಾಳಕಟ್ಟೆಯಲ್ಲಿ ನಡೆಯಲಿದೆ ಎಂದು ಮೃತರ ಕುಟುಂಬ ಮೂಲಗಳು ತಿಳಿಸಿದೆ.