ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ 2022-23ರ ಕಾರ್ಯಾಚಟುವಟಿಕೆಗಳಿಗೆ ಚಾಲನೆ

0

ವಿದ್ಯಾರ್ಥಿಗಳ ವ್ಯಕ್ತಿತ್ವವು ಎನ್ಎಸ್ಎಸ್‌ನಿಂದ ಅಭಿವೃದ್ಧಿ: ಹರಿಪ್ರಸಾದ್ ಎಸ್

ಪುತ್ತೂರು: ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಲೋಕಸೇವೆಯ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅನುಭವವನ್ನು ನೀಡುವುದು ಹಾಗೂ ಇದರೊಂದಿಗೆ ರಾಷ್ಟ್ರಪ್ರೇಮ ಮತ್ತು ಸೇವಾ ಭಾವನೆಗಳನ್ನು ಬೆಳೆಸುವ ಗುರಿಯನ್ನು ಅದು ಹೊಂದಿದೆ. ವಿದ್ಯಾರ್ಥಿಗಳ ಬದುಕಿಗೊಂದು ಸ್ಪಷ್ಟ ಸ್ವರೂಪವನ್ನು ನೀಡುವ ಜೊತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವವು ಎನ್ಎಸ್ಎಸ್ ನಿಂದ ಅಭಿವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಹೇಗೆ ತಮ್ಮ ಜೀವನವನ್ನು ರೂಪಿಸಬೇಕೆಂದು ಬದುಕಲು ಕಲಿಸುವ ಗರಡಿಮನೆಯಾಗಿ ಇಂದು ಎನ್‌ಎಸ್‌ಎಸ್ ಕಾರ್ಯ ನಿರ್ವಹಿಸುತ್ತಿದೆ ಎಂದು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀಹರಿಪ್ರಸಾದ್ ಎಸ್ ಹೇಳಿದ್ದಾರೆ.

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ 2022-23ರ ಕಾರ್ಯಾಚಟುವಟಿಕೆಗಳಿಗೆ ಚಾಲನೆಯನ್ನು ನೀಡಿ ಯಶಸ್ವಿ ಜೀವನಕ್ಕೆ ದಾರಿದೀಪವಾಗಿ ರಾಷ್ಟ್ರೀಯ ಸೇವಾ ಯೋಜನೆ ಎಂಬ ಉಪನ್ಯಾಸವನ್ನು ನೀಡಿದ ಅವರು, ಎನ್ ಎಸ್ ಎಸ್ ಘಟಕಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ, ನಾಯಕತ್ವಗುಣ, ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವ ಮೂಲಕ ಉತ್ತಮ ಪ್ರಜೆಯನ್ನು ರೂಪಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಅಕ್ಷತಾ ಎ ಪಿ ಮಾತನಾಡಿ, ಕಲಿಕಾ ಸಮಯದಲ್ಲಿ ವಿದ್ಯಾರ್ಥಿಯು ಪಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಕೊಂಡು ಅಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ಆತನ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎನ್ನುವುದಕ್ಕೆ ಜೀವಂತ ನಿದರ್ಶನವೇ ಎನ್.ಎಸ್.ಎಸ್. ’ನನಗಲ್ಲ ನಿನಗೆ’ ಎಂಬ ಧ್ಯೇಯ ವಾಕ್ಯದೊಂದಿಗೆ ’ಸೇವೆಯ ಮೂಲಕ ಶಿಕ್ಷಣ ? ಶಿಕ್ಷಣದ ಮೂಲಕ ಸೇವೆ’ ಎಂಬ ಮೂಲಮಂತ್ರವನ್ನು ಎನ್.ಎಸ್.ಎಸ್. ಹೊಂದಿದೆ ಎಂದ ಅವರು ಎನ್ಎಸ್ಎಸ್ ಘಟಕದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಸೂಚಿಸಿದರು.

ಇದೇ ವೇಳೆ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದಿಂದ ನಿರ್ವಹಿಸುತ್ತಿರುವ ’ಸೇವಾಬಿಂಬ’ ಎಂಬ ಬಿತ್ತಿಪತ್ರಿಕೆಯ ಈ ಶೈಕ್ಷಣಿಕ ವರ್ಷದ ಮೊದಲ ಸಂಚಿಕೆಯನ್ನು ಮುಖ್ಯ ಅತಿಥಿಗಳು ಅನಾವರಣಗೊಳಿಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಲಕ್ಷ್ಮೀಕಾಂತ ಎ ಪ್ರಾಸ್ತವಿಕವಾಗಿ ಮಾತನಾಡಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ಧ್ಯೇಯ ಹಾಗೂ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.

ನಂತರ ಎನ್.ಎಸ್.ಎಸ್ ಸ್ವಯಂಸೇವಕರಿಗೆ ಎನ್.ಎಸ್.ಎಸ್ ಸ್ವಯಂಸೇವಕರ ಕರ್ತವ್ಯಗಳು ಮತ್ತು ಅವಕಾಶಗಳು ಎಂಬ ವಿಷಯದ ಕುರಿತು ವಿಶೇಷ ಕಾರ್ಯಾಗಾರ ನಡೆಯಿತು. ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀಹರಿಪ್ರಸಾದ್ ಎಸ್ ಹಾಗೂ III ಬಿಕಾಂ ವಿದ್ಯಾರ್ಥಿ ಸಾರ್ಥಕ್ ಟಿ ಕಾರ್ಯಾಗಾರ ನಡೆಸಿದರು.

ಎನ್ಎಸ್ಎಸ್ ಸ್ವಯಂಸೇವಕರಾದ ಅಭಿಜಿತ್ ವಿಭಾಸ್ ಸ್ವಾಗತಿಸಿ, ಎನ್ಎಸ್ಎಸ್ ಘಟಕದ ನಾಯಕಿ ವೃಂದಾ ಭಂಡಾರಿ ವಂದಿಸಿದರು. ಕಾರ್ಯಕ್ರಮವನ್ನು ಸ್ವಯಂಸೇವಕರಾದ ನವನೀತ್ ಡಿ ಕೆ ಹಾಗೂ ನೇಮಿಕಾ ಸಾಂತ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ಎನ್ಎಸ್ಎಸ್ ಸ್ವಯಂಸೇವಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here