ನೆಲ್ಯಾಡಿ: ಅನುಮತಿ ಇಲ್ಲದೇ ಮತದಾರರ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೂವರನ್ನು ಸಾರ್ವಜನಿಕರು ಪೊಲೀಸರಿಗೊಪ್ಪಿಸಿರುವ ಘಟನೆ ನೆಲ್ಯಾಡಿ ಸಮೀಪದ ಹೊಸಮಜಲು ಎಂಬಲ್ಲಿ ಡಿ.16ರಂದು ಬೆಳಿಗ್ಗೆ ನಡೆದಿದೆ.
ಹೊಸಮಜಲು ಸಮೀಪದ ಹೋಟೆಲ್ವೊಂದಕ್ಕೆ ಬಂದಿದ್ದ ಕನ್ನಡ ಹಾಗೂ ತಮಿಳು ಮಿಶ್ರಿತ ಭಾಷೆ ಮಾತನಾಡುತ್ತಿದ್ದ ವ್ಯಕ್ತಿಯೋರ್ವರು ಚಹಾ ಅಂಗಡಿಯಲ್ಲಿದ್ದ ಹೊಸಮಜಲು ಸರಕಾರಿ ಹಿ.ಪ್ರಾ.ಶಾಲೆಯ ಎಸ್ಡಿಎಂಸಿ ಮಾಜಿ ಅಧ್ಯಕ್ಷ ಕೆ.ಇ.ಅಬೂಬಕ್ಕರ್ರವರಲ್ಲಿ ಇಂದಿರಾಗಾಂಧಿ, ಸೋನಿಯಾಗಾಂಧಿ, ಅಟಲ್ಬಿಹಾರಿ ವಾಜಪೇಯಿ ಸೇರಿದಂತೆ ಹಿರಿಯ ರಾಜಕೀಯ ನಾಯಕರ ಬಗ್ಗೆ ಪ್ರಶ್ನೆ ಕೇಳಿದ್ದರು. ಅಲ್ಲದೇ ಚೀನಾ, ಭಾರತ, ರಷ್ಯಾ ದೇಶದ ಬಗ್ಗೆ ಮಾಹಿತಿ ಇದೆಯೇ ಎಂದು ಪ್ರಶ್ನಿಸಿದ್ದಾನೆ. ಫಟ್ಬಾಲ್ ವಿಶ್ವಕಪ್ ಬಗ್ಗೆಯೂ ಮಾತನಾಡಿದ್ದಾನೆ. ಆ ಬಳಿಕ ನಿಮ್ಮ ಮನೆಯಲ್ಲಿ ಎಷ್ಟು ಜನ ಮತದಾರರಿದ್ದಾರೆ. ಮನೆಯಲ್ಲಿ ಎಷ್ಟು ಜನ ಸದಸ್ಯರು ಇದ್ದಾರೆ. ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಬಗ್ಗೆಯೂ ಪ್ರಶ್ನಿಸಿದ್ದಾನೆ. ಈತನ ವರ್ತನೆಯಿಂದ ಅನುಮಾನಗೊಂಡ ಕೆ.ಇ.ಅಬೂಬಕ್ಕರ್ರವರು, ಇವೆಲ್ಲ ಮಾಹಿತಿ ನಿಮಗೆ ಯಾಕೆ ? ಎಂದು ಪ್ರಶ್ನಿಸಿದಾಗ, ನಾವು ಕಂಪನಿಯೊಂದರ ಪರವಾಗಿ ಮನೆಗಳಿಗೆ ತೆರಳಿ ಸರ್ವೆ ಮಾಡುತ್ತಿದ್ದೇವೆ ಎಂದಿದ್ದಾರೆ. ಆದರೆ ಆತನಲ್ಲಿ ಆತನ ಆಧಾರ್ಕಾರ್ಡ್, ಯಾವುದೇ ಗುರುತಿನ ಕಾರ್ಡ್ ಇಲ್ಲದೇ ಇದ್ದ ಹಿನ್ನೆಲೆಯಲ್ಲಿ ಅಬೂಬಕ್ಕರ್ರವರು ಕೌಕ್ರಾಡಿ ಗ್ರಾ.ಪಂ.ಪಿಡಿಒ, ನೆಲ್ಯಾಡಿ ಹೊರಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ಈ ವೇಳೆ ಸ್ಥಳದಲ್ಲಿ ಹಲವು ಮಂದಿ ಗ್ರಾಮಸ್ಥರು ಜಮಾಯಿಸಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಿಸಿದಾಗ ಮತ್ತಿಬ್ಬರು ವಸತಿಗೃಹವೊಂದರಲ್ಲಿ ತಂಗಿರುವುದೂ ತಿಳಿದುಬಂತು. ಮೂವರನ್ನು ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದು ಈ ವೇಳೆ ಅವರು ದೆಹಲಿ ಮೂಲದ ಸಂಸ್ಥೆಯೊಂದರ ಪರವಾಗಿ ಊರಿನ ಸಮೀಕ್ಷೆ ನಡೆಸಲು ಬಂದಿರುವುದಾಗಿ ಗೊತ್ತಾಗಿದೆ. ಸಮೀಕ್ಷೆಗೆ ತೆರಳುವ ಮೊದಲು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ತೆರಳುವಂತೆ ಅವರಿಗೆ ಸೂಚನೆ ನೀಡಿ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.