ಪುತ್ತೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪುತ್ತೂರು ಅಂಗನವಾಡಿ ಕೇಂದ್ರ ಮಂಜಲ್ಪಡ್ಪು ಜೆಸಿ ಇಲ್ಲಿ ಬಾಲಮೇಳ ಕಾರ್ಯಕ್ರಮ ದ. 17 ರಂದು ನಡೆಯಿತು.
ಅಂಗನವಾಡಿ ಕೇಂದ್ರದ ಪುಟಾಣಿಗಳು ಪ್ರಾರ್ಥಿಸಿ, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಸುಮತಿಯವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿದ್ದ ಅಂಗನವಾಡಿ ಕೇಂದ್ರಗಳ ಕಬಕ ವಲಯ ಮೇಲ್ವಿಚಾರಕಿ ಸುಜಾತರವರು ಮಾತನಾಡಿ ‘ಬಾಲಮೇಳ ಆಚರಿಸಲ್ಪಟ್ಟಾಗ ಮಗುವಿಗಿಂತ ಹೆಚ್ಚು ತಾಯಿ ಸಂತೋಷ ಅನುಭವಿಸುತ್ತಾಳೆ. ಮನೆಯ ತಾಯಿ ಮೊದಲ ಗುರುವಾದರೆ ಅಂಗನವಾಡಿ ಕಾರ್ಯಕರ್ತೆ ಎರಡನೇ ಗುರುವಾಗಿ ತಾಯಿಯಾಗಿ ಮಗುವಿನ ಸರ್ವತೋಮುಖ ವಿಕಾಸಕ್ಕೆ ಶ್ರಮಿಸುತ್ತಾರೆ. ತಳಮಟ್ಟದಲ್ಲಿ ಮಗುವಿಗೆ ಉತ್ತಮ ಶಿಕ್ಷಣ ನೀಡಲ್ಪಟ್ಟಾಗ ಮುಂದಕ್ಕೆ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬೆಳೆಯಲು ಸಾಧ್ಯ’ ಎಂದರು.
ಮಂಜಲ್ಪಡ್ಪು ಬಿಇಎಂ ಶಾಲಾ ಮುಖ್ಯಗುರು ಶಿವಾನಂದಪ್ಪರವರು ಮಾತನಾಡಿ ‘ಮಕ್ಕಳ ಚಟುವಟಿಕೆ ಗಮನಿಸಿಕೊಂಡು ಅವರ ಬೆಳವಣಿಗೆಗೆ ಸರಿಯಾದ ದಾರಿಯನ್ನು ಮಾಡಿಕೊಡುವ ಜವಾಬ್ದಾರಿ ಪೋಷಕರಾದ ನಮ್ಮಲ್ಲಿದೆ’ ಎಂದರು.
ತಾ.ಪಂ. ನಿಕಟಪೂರ್ವ ಸದಸ್ಯೆ ಮೀನಾಕ್ಷಿ ಮಂಜುನಾಥ್ ಮಾತನಾಡಿ ‘ಮಗು ಈಗ ಹಬ್ಬದ ಸಂಭ್ರಮದಲ್ಲಿದೆ. ಅದರ ಜೊತೆ ತನ್ನ ಜೀವನಕ್ಕಾಗಿ ಸಮರ್ಪಕ ಗುರಿಯನ್ನು ತೆರೆದುಕೊಡುವ ಕೆಲಸ ಪೋಷಕರಾದ ನಮ್ಮಲ್ಲಿದೆ. ಮಗು ಸಮಾಜವನ್ನು ಗಮನಿಸುತ್ತದೆ. ಹಾಗಾಗಿ ಉತ್ತಮ ಸಮಾಜ ಇದ್ದಾಗ ಮಗು ಕೂಡಾ ಮುಂದಕ್ಕೆ ಸಮಾಜಕ್ಕೆ ಉತ್ತಮ ಸಂಪತ್ತಾಗಿ ದೊರೆಯಬಲ್ಲುದು. ಮಕ್ಕಳ ಸಕ್ರೀಯ ಚಟುವಟಿಕೆಗಳ ಹಿಂದೆ ಕಾರ್ಯಕರ್ತೆಯ ಪರಿಶ್ರಮವಿರುತ್ತದೆ’ ಎಂದರು.
ನಿವೃತ್ತ ಕೃಷಿ ಅಧಿಕಾರಿ, ಹಿರಿಯ ನಾಟಿ ವೈದ್ಯ ಪದ್ಮಯ್ಯ ಗೌಡ ಬನ್ನೂರು, ನಿವೃತ್ತ ರೈಲ್ವೇ ಉದ್ಯೋಗಿ ಸುಬ್ಬಣ್ಣ, ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಸುಮತಿಯವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಪುಟಾಣಿಗಳಿಂದ ಅನಿಸಿಕೆ: ಪುಟಾಣಿಗಳಾದ ಕುಶಿತ್ ಮತ್ತು ಸಂಕೇತ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಬಹುಮಾನ ವಿತರಣೆ
ಅಂಗನವಾಡಿ ಪುಟಾಣಿಗಳಿಗೆ ನಡೆಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶ್ರುತಿ ಪಟ್ಲ ಬಹುಮಾನಿತರ ಪಟ್ಟಿ ವಾಚಿಸಿದರು.
ಸ್ತ್ರೀಶಕ್ತಿ ಸಂಘದ ಸದಸ್ಯರು ಮತ್ತು ಪೋಷಕರಿಗೆ ನಡೆಸಲಾದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ದೇವಕಿ ಪಟ್ಲ ಬಹುಮಾನಿತರ ಪಟ್ಟಿ ವಾಚಿಸಿದರು.
ಪುಟಾಣಿಗಳಾದ ಯಾನವಿ ಕುಶಿತ್, ಶರಧಿ, ಹವೀಶ್, ವಂಶಿ, ಸಂಕೇತ್, ಸಲ್ವಾ ಸಫಿಯಾ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು.
ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಕುಸುಮ ಚಂದ್ರಶೇಖರ್ ಸ್ವಾಗತಿಸಿದರು. ಧನಂಜಯ ಪಟ್ಲ ಬೆಳಗ್ಗಿನ ಉಪಾಹಾರದ ವ್ಯವಸ್ಥೆ ಏರ್ಪಡಿಸಿದ್ದರು.