ಕೆದಂಬಾಡಿ: ವಯರಿಂಗ್ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್-ಯುವಕ ಆಸ್ಪತ್ರೆಗೆ ದಾಖಲು

0

ಪುತ್ತೂರು: ಕೆದಂಬಾಡಿ ಗ್ರಾಮದ ಕೆದಂಬಾಡಿ ಸ.ಹಿ.ಪ್ರಾ.ಶಾಲೆಯಲ್ಲಿ ವಿದ್ಯುತ್ ವಯರಿಂಗ್ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ತೀವ್ರ ಗಾಯಗೊಂಡ ಘಟನೆ ಡಿ.20 ರಂದು ನಡೆದಿದೆ.

ಗಾಯಗೊಂಡವರನ್ನು ಪರ್ಪುಂಜ ನಿವಾಸಿ ಜಗದೀಶ್ ಎಂದು ತಿಳಿದು ಬಂದಿದೆ. ಕೆದಂಬಾಡಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕೋಣೆಗೆ ವಯರಿಂಗ್ ಕೆಲಸ ನಡೆಯುತ್ತಿದ್ದು ಏಣಿಯ ಮೂಲಕ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದಿದ್ದು ಜಗದೀಶ್‌ರವರು ಏಣಿಯಿಂದ ಕೆಳಗಡೆ ಬಿದ್ದು ತಲೆಗೆ ತೀವ್ರ ಗಾಯವಾಗಿರುವುದಾಗಿ ತಿಳಿದು ಬಂದಿದೆ. ಕೂಡಲೇ ಜಗದೀಶ್‌ರವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಶಾಲೆಯಲ್ಲಿ ವಯರಿಂಗ್ ಮಾಡುವ ವಿಚಾರ ಮೀಟಿಂಗ್‌ನಲ್ಲಿ ನಿರ್ಣಯವಾಗಿಲ್ಲ; ಅಧ್ಯಕ್ಷ

ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್‌ಗಾಗಿ ವಯರಿಂಗ್ ಮಾಡುವ ವಿಚಾರ ಶಾಲಾ ಎಸ್‌ಡಿಎಂಸಿ ಮೀಟಿಂಗ್‌ನಲ್ಲಿ ಯಾವುದೇ ನಿರ್ಣಯವಾಗಿಲ್ಲ. ಶಾಲೆಯ ಮುಖ್ಯ ಶಿಕ್ಷಕರೇ ವಯರಿಂಗ್ ಕೆಲಸವನ್ನು ಮಾಡಿಸಿದ್ದರು. ಶಾಲೆಯಲ್ಲಿ ಘಟನೆ ನಡೆದ ಬಳಿಕವೂ ಮುಖ್ಯ ಶಿಕ್ಷಕಿ ನನ್ನ ಗಮನಕ್ಕೆ ತಂದಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ಬಶೀರ್ ಬೂಡಿಯಾರ್ ಮಾಹಿತಿ ನೀಡಿದ್ದಾರೆ. ವಿಷಯ ಗೊತ್ತಾಗಿ ನಾನೇ ಶಿಕ್ಷಕಿಗೆ ಕರೆ ಮಾಡಿ ಕೇಳಿದ್ದು ಬಳಿಕ ಆದರ್ಶ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ತಲೆಗೆ ಗಂಭೀರ ಗಾಯವಾಗಿರುವ ಕಾರಣ ಅವರನ್ನು ಮಂಗಳೂರಿಗೆ ದಾಖಲಿಸಲಾಗಿದೆ ಎಂದು ಬಶೀರ್ ತಿಳಿಸಿದ್ದಾರೆ.

ಕರೆಂಟ್ ಆಫ್ ಮಾಡಿದ್ದರು: ಶಿಕ್ಷಕಿ
ವಯರಿಂಗ್ ಕೆಲಸ ಮಾಡುವಾಗ ಜಗದೀಶ್ ಕರೆಂಟ್ ಆಫ್ ಮಾಡಿದ್ದರು. ಆ ಬಳಿಕ ಏಣಿ ಇಟ್ಟು ವಯರಿಂಗ್ ಮಾಡುವ ವೇಳೆ ಏಣಿಯಿಂದ ಕೆಳಗೆ ಬಿದ್ದಿದ್ದಾರೆ. ಬಿದ್ದು ತಲೆಗೆ ಗಾಯವಾಗಿದೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮುಖ್ಯ ಶಿಕ್ಷಕಿ ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳ ದೌಡು
ಘಟನೆ ಸುದ್ದಿ ತಿಳಿದು ಶಿಕ್ಷಣ ಇಲಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here