ಉಪ್ಪಿನಂಗಡಿ: ಮೀನು ಹಿಡಿಯಲು ಹೋಗಿ ನದಿ ನೀರಿನಲ್ಲಿ ಮುಳುಗಿದ್ದ ಜನಾರ್ದನ ಗೌಡ (42) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಜನಾರ್ದನ ಗೌಡ ಅವರ ಪತ್ನಿ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಜನಾರ್ದನರು ಬಂದಾರು ಗ್ರಾಮದ ಬೋಲೋಡಿ ನಿವಾಸಿ ಚಂದಪ್ಪ ಪೂಜಾರಿ ಎಂಬವರ ಪುತ್ರ ಮಹೇಶ್ ಎಂಬಾತನೊಂದಿಗೆ ಡಿ.26ರಂದು ಸಂಜೆ ಮುಗೇರಡ್ಕ ಬಳಿ ಸೇತುವೆಯ ಕಾಮಗಾರಿ ನಡೆಯುತ್ತಿದ್ದ ಸನಿಹದಲ್ಲಿ ನೇತ್ರಾವತಿ ನದಿಯಲ್ಲಿ ಮೀನಿಗಾಗಿ ಬಲೆ ಕಟ್ಟಲು ಬಂದಿದ್ದರು. ಈ ಸಂದರ್ಭ ಇವರು ನೀರು ಪಾಲಾಗಿದ್ದು, ಇವರ ಜೊತೆಗಿದ್ದ ಮಹೇಶ್ ಈ ಬಗ್ಗೆ ಆ ಸಂದರ್ಭದಲ್ಲಿ ಯಾರಲ್ಲೂ ವಿಷಯ ತಿಳಿಸಿದೇ ಅಲ್ಲಿಂದ ಬಂದಿದ್ದ. ಹೀಗೆ ಬಂದವ ಬಳಿಕ ಪದ್ಮುಂಜ ಬಾರಿಗೆ ಹೋಗಿ ಅಲ್ಲಿ ಕುಡಿದು ನಶೆ ಏರಿದ ಬಳಿಕ ಈ ಬಗ್ಗೆ ಅಲ್ಲಿ ಬಾಯ್ಬಿಟ್ಟಿದ್ದ. ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮುಳುಗುಗಾರರು ಸೇರಿಕೊಂಡು ಜನಾರ್ದನ ಅವರಿಗಾಗಿ ಅಂದು ರಾತ್ರಿಯಿಂದಲೇ ಹುಡುಕಾಟ ನಡೆಸಿದ್ದರು. ಆದರೆ ಡಿ.27ರಂದು ಬೆಳಗ್ಗೆ ನೀರಿನಲ್ಲಿ ಮುಳುಗಿದ ಸುಮಾರು 10 ಮೀಟರ್ ದೂರದಲ್ಲಿ ಜನಾರ್ದನರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಜನಾರ್ದನ ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವರ ಪತ್ನಿ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.