ನ್ಯಾಯವಾದಿ ಕುಲದೀಪ್ ಶೆಟ್ಟಿಯವರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣದಲ್ಲಿ ಕೇಸ್ ದಾಖಲಿಸದ ಪೊಲೀಸ್ ಇಲಾಖೆಗೆ ಹೈಕೋರ್ಟ್ ತರಾಟೆ:ಮರುದಿನವೇ ಎಫ್.ಐ.ಆರ್. ದಾಖಲಿಸಿ ವರದಿ ನೀಡಿದ ಎಸ್ಪಿ

0

ಬೆಂಗಳೂರು: ನ್ಯಾಯವಾದಿ ಕುಲದೀಪ್ ಶೆಟ್ಟಿಯವರ ಮೇಲೆ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಪೂಂಜಾಲಕಟ್ಟೆ ಎಸ್.ಐ.ಸುತೇಶ್ ಮೇಲೆ ಕೇಸು ದಾಖಲಿಸಿಕೊಳ್ಳದ ಪೊಲೀಸ್ ಇಲಾಖೆಯನ್ನು ಹೈಕೋರ್ಟ್ ನ್ಯಾಯಮೂರ್ತಿಗಳು ತರಾಟೆಗೆತ್ತಿಕೊಂಡ ಮರುದಿನವೇ ಎಫ್.ಐ.ಆರ್. ದಾಖಲಿಸಲಾಗಿದೆ ಎಂದು ಎಸ್ಪಿ ಹೈಕೋರ್ಟಿಗೆ ವರದಿ ನೀಡಿದ ಘಟನೆ ನಡೆದಿದೆ.


ತನ್ನ ಮೇಲೆ ದೌರ್ಜನ್ಯ ಎಸಗಿರುವ ಪೂಂಜಾಲಕಟ್ಟೆ ಎಸ್.ಐ. ಸುತೇಶ್ ಮತ್ತು ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ತನಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಯುವ ನ್ಯಾಯವಾದಿ ಕುಲದೀಪ್ ಶೆಟ್ಟಿ ಹೈಕೋರ್ಟಿಗೆ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಜ.4ರಂದು ನಡೆದಿತ್ತು.

ಕುಲದೀಪ್ ಪರ ವಾದ ಮಂಡಿಸಿದ್ದ ಹೈಕೋರ್ಟ್ ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆ ಅವರು ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿ ಎಸ್.ಐ. ಮತ್ತು ಸಿಬ್ಬಂದಿಗಳು ಅನಗತ್ಯ ಮಧ್ಯಪ್ರವೇಶ ಮಾಡಿದ್ದಾರೆ. ರಾತ್ರಿ ವೇಳೆ ಅಕ್ರಮ ಪ್ರವೇಶ ಮಾಡಿ ನ್ಯಾಯವಾದಿ ಮೇಲೆ ದೌರ್ಜನ್ಯ ಎಸಗಲಾಗಿದೆ. ಈ ಬಗ್ಗೆ ದೂರು ನೀಡಿದರೂ ಇನ್ನೂ ಕಾನೂನು ಕ್ರಮ ಕೈಗೊಂಡಿಲ್ಲ. ಆದ್ದರಿಂದ ತಪ್ಪಿತಸ್ಥ ಎಸ್.ಐ. ಮತ್ತು ಸಿಬ್ಬಂದಿಗಳ ಮೇಲೆ ಎಫ್.ಐ.ಆರ್. ದಾಖಲಿಸಿ ಕಾನೂನು ಕ್ರಮ ಜರಗಿಸಲು ಆದೇಶಿಸಬೇಕು ಎಂದು ನ್ಯಾಯಪೀಠದ ಗಮನ ಸೆಳೆದಿದ್ದರು.

ಎಸ್.ಐ.ಯವರನ್ನು ಸಸ್ಪೆಂಡ್ ಮಾಡಲಾಗಿದೆಯಾದರೂ ಪೊಲೀಸ್ ಇಲಾಖೆಯ ಎಫ್.ಐ.ಆರ್. ದಾಖಲಿಸಿಲ್ಲ ಎಂದು ಪಿಪಿ ಹೆಗ್ಡೆ ನ್ಯಾಯಪೀಠದ ಗಮನ ಸೆಳೆದಿದ್ದರು.‌ ಈ ವೇಳೆ ಪೊಲೀಸ್ ಇಲಾಖೆಯನ್ನು ಹೈಕೋರ್ಟ್ ತರಾಟೆಗೆತ್ತಿಕೊಂಡಿದ್ದಲ್ಲದೆ ಕೂಡಲೇ ವರದಿ ನೀಡುವಂತೆ ಆದೇಶಿಸಿತ್ತು. ಅದರಂತೆ ಜ.5ರಂದು ದ.ಕ‌. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಅವರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು ಎಸ್.ಐ. ಸುತೇಶ್ ಮತ್ತು ಸಿಬ್ಬಂದಿಗಳ ವಿರುದ್ಧ ಎಫ್.ಐ.ಆರ್. ದಾಖಲಿಸಿ ಕೊಳ್ಳಲಾಗಿದ್ದು ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.‌ ಇದನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿಗಳು ಮುಂದಿನ ವಿಚಾರಣೆಯನ್ನು ಜ.10ಕ್ಕೆ ಮುಂದೂಡಿದ್ದಾರೆ.

LEAVE A REPLY

Please enter your comment!
Please enter your name here