ಪುತ್ತೂರು: ಜ.22 ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯಲಿರುವ ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಸ್ವಾಮೀಜಿಯವರ 78 ನೇ ಜಯಂತ್ಯೋತ್ಸವದಲ್ಲಿ ಪಾಲ್ಗೊಳ್ಳುವ 1 ಲಕ್ಷ ಮಂದಿಗೆ ಅನ್ನಸಂತರ್ಪಣೆ ವ್ಯವಸ್ಥೆಗಾಗಿ ಪಾಕಶಾಲೆ ಸಿದ್ದತೆಗೆ ಮಹಾಲಿಂಗೆಶ್ವರ ದೇವಸ್ಥಾನದಲ್ಲಿ ಆಹಾರ ಸಮಿತಿಯಿಂದ ಪ್ರಾರ್ಥನೆ ಸಲ್ಲಿಸಲಾಯಿತು.
1 ಲಕ್ಷ ಮಂದಿಗೆ ಸುಸಜ್ಜಿತವಾದ ಭೋಜನ, ಫಲಹಾರದ ವ್ಯವಸ್ಥೆಯು ಸುಸೂತ್ರವಾಗಿ ಯಾವುದೇ ಲೋಪದೋಷವಿಲ್ಲದೆ ಯಶಸ್ವಿಯಾಗಿ ನಡೆಸಿಕೊಡುವಂತೆ ಮಹಾಲಿಂಗೇಶ್ವರ ದೇವರ ಸತ್ಯಧರ್ಮ ನಡೆಯಲ್ಲಿ ಮತ್ತು ಹೊರಾಂಗಣದಲ್ಲಿರುವ ರಕ್ತೇಶ್ವರಿ ದೈವದ ಗುಡಿಯಲ್ಲೂ ಪ್ರಾರ್ಥನೆ ಮಾಡಲಾಯಿತು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತಕೆದಿಲಾಯ ಅವರು ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಾಕತಜ್ಞ ಹರೀಶ್ ಭಟ್, ಜಯಂತ್ಯೋತ್ಸವ ಸಮಿತಿ ಜಿಲ್ಲಾ ಸಂಚಾಲಕ ಚಿದಾನಂದ ಬೈಲಾಡಿ, ತಾಲೂಕು ಸಂಚಾಲಕರ ಪುರುಷೋತ್ತಮ ಮುಂಗ್ಲಿಮನೆ, ಆಹಾರ ಸಮಿತಿಯ ಸಂಚಾಲಕ ಸೀತಾರಾಮ ಗೌಡ ಪೆರಿಯತ್ತೋಡಿ, ಆನಂದ ಗೌಡ ಮೂವಪ್ಪು, ಶ್ರೀಧರ ಗೌಡ ಕಣಜಾಲು, ಲಿಂಗಪ್ಪ ಗೌಡ ತೆಂಕಿಲ, ಬಾಬು ಗೌಡ ಭಂಡಾರದ ಮನೆ, ರುಕ್ಮಯ ಗೌಡ ಮತ್ತಿತರರು ಉಪಸ್ಥಿತರಿದ್ದರು. ಪ್ರಾರ್ಥನೆಯ ಬಳಿಕ ದೇವಳದ ಎದುರುಗದ್ದೆಯಲ್ಲಿ ಪಾಕಶಾಲೆ ಸಿದ್ದತೆ ಕಾರ್ಯ ಕೈಗೊಳ್ಳಲಾಯಿತು.