ವಿಟ್ಲ:ಜಾತ್ರೆ ಪ್ರಯುಕ್ತ ಮಳಿಗೆ ಹಾಕಿದ್ದ ವ್ಯಕ್ತಿಗೆ ಹಲ್ಲೆ, ಬಿಡಿಸಲು ಬಂದ ಪತ್ನಿಯ ಮಾನಭಂಗಕ್ಕೆ ಯತ್ನ-ಓರ್ವನ ಬಂಧನ

0

ವಿಟ್ಲ: ಇಲ್ಲಿನ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಹಾಕಲಾಗಿದ್ದ ಫ್ಯಾನ್ಸಿ ಅಂಗಡಿಯೊಂದರ ಬಳಿ ಬಂದ ತಂಡವೊಂದು ಅಂಗಡಿ ಮಾಲಕನಿಗೆ ಹಲ್ಲೆ ನಡೆಸಿ, ಜಗಳ ಬಿಡಿಸಲು ಬಂದ ಅವರ ಪತ್ನಿಯ ಮೈಗೆ ಕೈಹಾಕಿ ಮಾನಭಂಗಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ವಿಟ್ಲ ಠಾಣಾ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಕೋಡಪದವು ದಿವಾನ ನಿವಾಸಿ ಚಂದಪ್ಪ ಮೂಲ್ಯರವರ ಪುತ್ರ ಗಣೇಶ್ ಯಾನೆ ಕಡಂಬು ಗಣೇಶ್ ಬಂಧಿತ ಆರೋಪಿ.

ಬಂಟ್ವಾಳ ತಾಲೂಕು ನೇರ್ಲಾಜೆ ನಿವಾಸಿ ಸುರೇಶ್ ದಾಸ್‌ರವರು ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ‘ನಾನು ವಿಟ್ಲ ಶ್ರೀ ಪಂಚಲಿಗೇಶ್ವರ ದೇವಸ್ಥಾನದ ಪಕ್ಕದಲ್ಲಿ ಜಾತ್ರೆಯ ಪ್ರಯುಕ್ತ ದೇವಸ್ಥಾನದ ಅನುಮತಿಯಂತೆ ಫ್ಯಾನ್ಸಿ ಮಳಿಗೆ ತೆರೆದು ವ್ಯವಹಾರ ನಡೆಸುತ್ತಿದ್ದು, ಜ.19ರಂದು ರಾತ್ರಿ 12.30ರ ಸುಮಾರಿಗೆ ವ್ಯಾಪಾರ ಮುಗಿಸಿ ಮಳಿಗೆಯನ್ನು ಮುಚ್ಚುತ್ತಿದ್ದ ವೇಳೆ ಗಣೇಶ್ ಕಡಂಬು, ಮಂಜುನಾಥ ಹಾಗೂ ಇತರ ನಾಲ್ವರು ಮಳಿಗೆ ಬಳಿಗೆ ಬಂದು, ಮಳಿಗೆ ಮುಚ್ಚುತ್ತಿರುವುದನ್ನು ಆಕ್ಷೇಪಿಸಿ ಅವಾಚ್ಯ ಶಬ್ದಗಳಿಂದ ನನಗೆ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಇದನ್ನು ಕಂಡ ನನ್ನ ಪತ್ನಿ ಓಡಿ ಬಂದು ಜಗಳ ಬಿಡಿಸಲೆತ್ನಿಸಿದಾಗ ಆಕೆಗೂ ಹಲ್ಲೆ ನಡೆಸಿ ಆಕೆಯ ಮಾನಭಂಗಕ್ಕೆ ಯತ್ನಿಸಿದ್ದಾರೆ. ಈ ವೇಳೆ ಜನಸೇರುತ್ತಿದ್ದಂತೆ ಆರೋಪಿಗಳು ಜೀವಬೆದರಿಕೆ ಒಡ್ಡಿ ಅಲ್ಲಿಂದ ಪರಾರಿಯಾಗಿದ್ದಾಗಿ’ ಸುರೇಶ್‌ದಾಸ್‌ರವರು ವಿಟ್ಲ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಆರು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಆರೋಪಿ ಗಣೇಶ್ ಯಾನೆ ಕಡಂಬು ಗಣೇಶ್ ಎಂಬಾತನನ್ನು ಬಂಧಿಸಿದ್ದಾರೆ.ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here