ಪುತ್ತೂರು: ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘ ಪುತ್ಥೂರು, ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಈಶ್ವರಮಂಗಲ, ಕೆವಿಜಿ ಡೆಂಟಲ್ ಕಾಲೇಜು ಆಸ್ಪತ್ರೆ ಸುಳ್ಯ ಹಾಗೂ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಇದರ ತಜ್ಞ ವೈದ್ಯರಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ದಂತ ಚಿಕಿತ್ಸಾ ಶಿಬಿರವು ಫೆ.5ರಂದು ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.
ಪಟ್ಟೆ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ನಹುಷ ಪಿ.ವಿ. ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮ ಕಾರ್ಯಕ್ರಮ ಆಯೋಜಿಸಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಚಿಕಿತ್ಸೆಗಾಗಿ ದೂರದ ಊರಿಗೆ ಹೋಗಬೇಕಾಗಿದ್ದು ಕೆಲವರಿಗೆ ಚಿಕಿತ್ಸೆ ಪಡೆದುಕೊಳ್ಳುವುದು ಅಸಾಧ್ಯ. ಇಂತಹ ಸಂದರ್ಭದಲ್ಲಿ ವಾಣಿಯನ್/ ಗಾಣಿಗ ಸಮಾಜದವರು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಕಾರ್ಯಕ್ರಮ ಆಯೋಜಿಸಿದ್ದು ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ಇದು ಎಲ್ಲಾ ಸಮಾಜದವರಿಗೂ ಪ್ರೇರಣೆಯಾಗಿದೆ ಎಂದರು.
ಕೆ.ವಿ.ಜಿ ಡೆಂಟಲ್ ಕಾಲೇಜು ಆಸ್ಪತ್ರೆಯ ಪ್ರೊಫೆಸರ್ ಡಾ.ಎಲ್ ಕೃಷ್ಣಪ್ರಸಾದ್ ಮಾತನಾಡಿ, ದಂತ ಚಿಕಿತ್ಸೆಯಲ್ಲಿ ಶಿಬಿರದಲ್ಲಿ ದೊರೆಯುವ ಸೇವೆಗಳ ಬಗ್ಗೆ ವಿವರಿಸಿದರು. ಶಿಬಿರದ ಚಿಕಿತ್ಸೆಯ ಹೊರತಾಗಿ ಹೆಚ್ಚಿನ ಚಿಕಿತ್ಸೆ ಸುಳ್ಯ ಕೆವಿಜಿಯಲ್ಲಿ ನಡೆಯಲಿದೆ ಎಂದರು.
ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಉದಯ್ ಮಾತನಾಡಿ, ಸ್ವ ಚಿಕಿತ್ಸೆ ಪಡೆಯುವ ಬದಲು ತಜ್ಞ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆಯಬೇಕು. ಆಸ್ಪತ್ರೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಬಡಗನ್ನೂರು ಗ್ರಾ.ಪಂ ಸದಸ್ಯ ಲಿಂಗಪ್ಪ ಗೌಡ ಮಾತನಾಡಿ ಶುಭಹಾರೈಸಿದರು. ವಾಣಿಯನ್, ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಬ್ಬಪ್ಪ ಪಟ್ಟೆ ಮಾತನಾಡಿ,ನಮ್ಮ ಸಮಾಜದ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಾಗುತ್ತಿದೆ. ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಬೇಕೆಂಬ ನಮ್ಮ ಹಲವು ಸಮಯದ ಕನಸು ಕೈಗೂಡಿದೆ ಎಂದರು.
ವೈದ್ಯಕೀಯ ಶಿಬಿರದ ನಿರ್ದೇಶಕ ದಾಮೋದರ ಪಾಟಾಳಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಮಹೇಶ್ ಆಲಂಕಾರು ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಸುಬ್ಬಪ್ಪ ಪಟ್ಟೆ ವಂದಿಸಿದರು.
ಶಿಬಿರದಲ್ಲಿ ಸಾಮಾನ್ಯ ಚಿಕಿತ್ಸೆಗಳಾದ ಬಿ.ಪಿ., ಶುಗರ್ ನಿರಂತರ ಕೆಮ್ಮು, ಉಬ್ಬಸ ಹಾಗೂ ಎಲ್ಲಾ ವಿಧದ ಸಾಮಾನ್ಯ ರೋಗಗಳ ತಪಾಸಣೆ, ಎಲುಬು ಮತ್ತು ಕೀಲು ರೋಗ ವಿಭಾಗಗಳಾದ ಸಂಧಿವಾತ, ಬೆನ್ನು ನೋವು, ಸೊಂಟ ನೋವು, ಮೊಣಕಾಲಿನ ಸಮಸ್ಯೆಗಳು, ಮಕ್ಕಳ ಮೂಳೆ ಸಮಸ್ಯೆಗಳ ತಪಾಸಣೆ, ಕಣ್ಣಿನ ವಿಭಾಗಗಳಾದ ಕಣ್ಣಿನ ತಪಾಸಣೆ, ಆವಶ್ಯವಿದ್ಧವರಿಗೆ ರಿಯಾಯಿತಿ ದರದಲ್ಲಿ ಓದುವ ಕನ್ನಡಕ, ಕಿವಿ ಮೂಗು ಮತ್ತು ಗಂಟಲು ವಿಭಾಗದಲ್ಲಿ ಕಿವಿ, ನೋವು, ಕಿವಿ ಸೋರುವುದು, ಸೈನಸ್ ಸಮಸ್ಯೆ, ಅಲರ್ಜಿ, ಮೂಗು ಮತ್ತು ಗಂಟಲಿಗೆ ಸಂಬಂಧಪಟ್ಟ ರೋಗ ಸಮಸ್ಯೆಗಳ ತಪಾಸಣೆ, ಚರ್ಮ ರೋಗ ವಿಭಾಗದಲ್ಲಿ ಎಲ್ಲಾ ರೀತಿಯ ಚರ್ಮಕ್ಕೆ ಸಂಬಂಧಪಟ್ಟ ರೋಗ ಸಮಸ್ಯೆಗಳ ತಪಾಸಣೆ, ದಂತ ತಪಾಸಣೆ ವಿಭಾಗದಲ್ಲಿ ಬಾಯಿ ಮತ್ತು ಹಲ್ಲಿನ ಸಂಪೂರ್ಣ ತಪಾಸಣೆ ಮತ್ತು ಸಲಹೆ, ಹುಳುಕು, ಹಲ್ಲು ಕೀಳುವುದು, ಹುಳುಕು ಹಲ್ಲುಗಳಿಗೆ ಸಿಮೆಂಟ್ ತುಂಬಿಸುವುದು ಹಲ್ಲುಗಳನ್ನು ಸ್ವಚ್ಚಗೊಳಿಸುವುದು, ರಕ್ತವರ್ಗೀಕರಣ ಮತ್ತು ಮಧುಮೇಹ ತಪಾಸಣೆ ನಡೆಸಲಾಯಿತು. ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.