ಬೆಂಗಳೂರು:ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಲು ಕ್ರಮ ವಹಿಸಲಾಗುವುದು. ಎಷ್ಟು ಹೆಚ್ಚಿಸಬೇಕು ಎಂದು ತೀರ್ಮಾನ ಮಾಡಿ ಬಜೆಟ್ನಲ್ಲೇ ಘೋಷಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಶಿಕ್ಷಕರ ಸದನದಲ್ಲಿ, ಆಶಾ ಕಾರ್ಯಕರ್ತೆಯರ ರಾಜ್ಯಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿದ ತಮ್ಮ ಮೊದಲ ಬಜೆಟ್ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವಧನವನ್ನು 1,೦೦೦ ರೂ.ಹೆಚ್ಚಿಸಿದ್ದಾರೆ. ಈ ಸಲ ಕೂಡ ಆಶಾ ಕಾರ್ಯಕರ್ತೆಯರ ಕೆಲ ಮನವಿಗಳನ್ನು ನೀಡಿದ್ದು, ನ್ಯಾಯಸಮ್ಮತವಾದ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಲಾಗುವುದು ಎಂದರು.
ಇತ್ತೀಚೆಗೆ ಬಜೆಟ್ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಯಿತು. ಈ ಚರ್ಚೆಯ ವೇಳೆ, ಆಶಾ ಕಾರ್ಯಕರ್ತೆಯರಿಗೆ ಗೌರವಧನವನ್ನು 2,000 ರೂ.ಹೆಚ್ಚಿಸಲು ಮನವಿ ಮಾಡಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು. ಆಶಾ ಕಾರ್ಯಕರ್ತೆಯರಿಗೆ 5 ಕೋಟಿ ರೂ. ಮೊತ್ತದ ಕ್ಷೇಮಾಭಿವೃದ್ಧಿ ನಿಧಿ ಇರಿಸಿ, ಕಾರ್ಯಕರ್ತೆಯರ ಆರೋಗ್ಯ ರಕ್ಷಣೆಗೆ ನೀಡಬೇಕು ಎಂಬ ಬೇಡಿಕೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಾಂತ್ರಿಕ ನ್ಯೂನತೆ ನಿವಾರಿಸಿ, ಸರಿಯಾದ ಸಮಯಕ್ಕೆ ಗೌರವಧನ ನೀಡಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.
ಕೋವಿಡ್ ಸಮಯದಲ್ಲಿ ಅನೇಕರು ವರ್ಕ್ ಫ್ರಂ ಹೋಮ್ ಮಾಡಿದ್ದಾರೆ. ಆದರೆ ಆಶಾ ಕಾರ್ಯಕರ್ತೆಯರು ವರ್ಕ್ ಫ್ರಂ ಸ್ಟ್ರೀಟ್ ಮಾಡಿದ್ದರು. 10 ವರ್ಷಗಳ ಕಾಲ ಸೇವೆ ಸಲ್ಲಿಸಿದವರು ಅಥವಾ 60 ವಯಸ್ಸಿನ ಬಳಿಕ ನಿವೃತ್ತರಾಗಲು ಬಯಸಿದರೆ, ಅವರಿಗೆ ಇಡಗಂಟು ನೀಡಲು ಕ್ರಮ ವಹಿಸಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ಚರ್ಚಿಸಲಾಗುವುದು. ಕೇವಲ ಮಾತಿನಲ್ಲಲ್ಲ, ಕೃತಿಯ ಮೂಲಕ ಕೊಡುಗೆ ನೀಡಲಾಗುವುದು ಎಂದರು.