ಪುತ್ತೂರು:ಅನಧಿಕೃತವಾಗಿ ಅಳಡಿಸಿದ್ದ ಬ್ಯಾನರ್ ತೆರವುಗೊಳಿಸಿರುವುದರ ವಿರುದ್ಧ ಬೆಟ್ಟಂಪಾಡಿ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಉದ್ದಟತನ ತೋರಿ ಸಾಮಾನ್ಯ ಸಭೆ ರದ್ಧುಪಡಿಸಿದ್ದರು ಎಂದು ಇರ್ದೆ-ಬೆಟ್ಟಂಪಾಡಿ ಗ್ರಾಮೀಣ ಕಾಂಗ್ರೆಸ್ನಿಂದ ಫೆ.24ರಂದು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಪಿಯವರಿಗೆ ಪ್ರಜಾಪ್ರಭುತ್ವ, ಜನರ ಹಿತ ಬೇಕಾಗಿಲ್ಲ-ಅಡ್ಪಂಗಾಯ: ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಮಾತನಾಡಿ, ಬಿಜೆಪಿ ಸರಕಾರದಲ್ಲಿ ಮೋದಿಯಿಂದ ಹಿಡಿದು ಕೇಂದ್ರ, ರಾಜ್ಯ, ಜಿಲ್ಲೆ ಹಾಗೂ ಗ್ರಾಮಿಣ ಪ್ರದೇಶದ ವಾರ್ಡ್ ತನಕ ಬಿಜೆಪಿಯವರಿಗೆ ಪ್ರಜಾಪ್ರಭುತ್ವ, ಜನರ ಹಿತ ಬೇಕಾಗಿಲ್ಲ.ದೇಶದಲ್ಲಿ ಪ್ರಜಾಪ್ರಭುತ್ವವನ್ನು ಗಾಳಿಗೆ ತೂರಿದ ಪರಿಣಾಮ ಲಕ್ಷಾಂತರ ಚದರ ಅಡಿ ಜಾಗವನ್ನು ಚೈನಾ ವಶಪಡಿಸಿಕೊಂಡಿದೆ.ಖಲಿಸ್ತಾನದವರು ಪ್ರಧಾನಿ, ಗೃಹಸಚಿವರಿಗೆ ಬೆದರಿಕೆ ಹಾಕುವಂತ ಕಾಲಕ್ಕೆ ಬಂದಿದೆ.ಖಲಿಸ್ತಾನದ ಧ್ವಜ ಕೆಂಪುಕೋಟೆಯಲ್ಲಿ ಅಳವಡಿಸಿದರೂ ಮಾತನಾಡುತ್ತಿಲ್ಲ. ಬಿಜೆಪಿಯವರ ಓಟ್ಬ್ಯಾಂಕ್ ತಡೆಯಲು ನಮ್ಮ ಕಾರ್ಯಕರ್ತರು ಒಂದಾಗಬೇಕು.ನಮಗೆ ದೇಶ, ಪ್ರಜಾಪ್ರಭುತ್ವ, ಕಾನೂನು, ಪ್ರಜೆಯ ಹಕ್ಕುಗಳು ಮುಖ್ಯ.ಸರಕಾರದ ಹಣ ತಂದು ತನ್ನ ಪ್ರತಿಷ್ಠೆಗಾಗಿ ಅನಽಕೃತ ಬ್ಯಾನರ್ ಅಳವಡಿಸಿದ್ದನ್ನು ಪಿಡಿಓ ತೆರವುಗೊಳಿಸಿದರೆ ಅದನ್ನು ಖಂಡಿಸಿ ಬಹಿಷ್ಕಾರ ಹಾಕುವವರಿಗೆ ವಿದ್ಯೆ, ಬುದ್ಧಿ ನ್ಯಾಯ ಇದೆಯಾ ಎಂದು ಪ್ರಶ್ನಿಸಬೇಕಾಗಿದೆ.ನಿಮ್ಮ ಒಣ ಪ್ರತಿಷ್ಠೆ ಇಟ್ಟುಕೊಂಡರೆ ಮುಂದಿನ ದಿನಗಳಲ್ಲಿ ಗ್ರಾಮದ ಜನತೆ ನಿಮ್ಮ ವಿರುದ್ದವಾಗಿ ಮತ ಚಲಾಯಿಸುವ ಮೂಲಕ ನಿಮ್ಮನ್ನು ಪಂಚಾಯತ್ಗೆ ಎಂಟ್ರಿ ಇಲ್ಲದಂತೆ ಮಾಡುತ್ತಾರೆ ಎಂದರು.
ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ತಿರಸ್ಕರಿಸುತ್ತಾರೆ-ಎಂ.ಬಿ.ವಿಶ್ವನಾಥ ರೈ: ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮಾತನಾಡಿ, ನ್ಯಾಯಾಲಯದ ಆದೇಶವನ್ನು ಪರಿಗಣಿಸಿ, ಜವಾಬ್ದಾರಿಯುತ ಅಧಿಕಾರಿಯಾಗಿ ಅನಧಿಕೃತ ಬ್ಯಾನರ್ನ್ನು ಪಿಡಿಓ ತೆರವುಗೊಳಿಸಿದ್ದಾರೆ.ಆದರೆ ಇದರ ವಿರುದ್ಧ ಸಾಮಾನ್ಯ ಸಭೆಯನ್ನು ಬಹಿಷ್ಕರಿಸುವುದು ಅಹಂಕಾರದ ಪರಮಾವಧಿ. ನೀವು ಮಾಡಿದ ತಪ್ಪನ್ನು ಜನರು ಒಪ್ಪುವುದಿಲ್ಲ. ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ತಿರಸ್ಕರಿಸುತ್ತಾರೆ ಎಂದರು. ಅಧಿಕಾರದ ಮದ ಬಿಜೆಪಿಯವರಿಗಿದೆ. ಅಮಿತ್ ಷಾ ಪುತ್ತೂರಿಗೆ ಆಗಮಿಸುವಾಗ ಸಾಕಷ್ಟು ಅನಧಿಕೃತ ಬ್ಯಾನರ್ ಅಳವಡಿಸಿದ್ದಾರೆ.ಎಲ್ಲದಕ್ಕೂ ಹಣ ಪಾವತಿಸುವುದಿದ್ದರೆ ಎಡಿಬಿಯ ಸಾಲ ತೀರಿಸಬಹುದಿತ್ತು.50 ಬ್ಯಾನರ್ಗೆ ಪರವಾನಿಗೆ ಪಡೆದು 1000 ಬ್ಯಾನರ್ ಅಳವಡಿಸಿದ್ದಾರೆ ಎಂದು ಅವರು ಹೇಳಿದರು.
ನಾವು ಅಧಿಕಾರಕ್ಕೆ ಬಂದು ನಿಮ್ಮನ್ನು ಮನೆಗೆ ಕಳುಹಿಸುತ್ತೇವೆ-ಹೇಮನಾಥ ಶೆಟ್ಟಿ: ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಬೆಟ್ಟಂಪಾಡಿ ಪಂಚಾಯತ್ ಬಹಳಷ್ಟು ಕಾಲದಿಂದ ಬಿಜೆಪಿಯ ಪಂಚಾಯತ್ ಆಗಿದೆ. ಕೊನೆಯ ಕಾಲಕ್ಕೆ ಇಂತಹ ಕೆಲಸ ಮಾಡುತ್ತಿದ್ದಾರೆ.ಈಗಾಗಲೇ ಪಂಚಾಯತ್ನಲ್ಲಿ 5 ಮಂದಿ ನಮ್ಮ ಸದಸ್ಯರಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಹುಮತದೊಂದಿಗೆ ಇಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಡಳಿತ ನಡೆಸಲಿದ್ದಾರೆ ಎಂದು ಪ್ರತಿಜ್ಞೆ ನಡೆಸಲಾಗಿದೆ.ಯಾರೇ ಅನಧಿಕೃತ ಬ್ಯಾನರ್ ಅಳವಡಿಸಿದರೆ ಪಿಡಿಓ ತೆರವುಗೊಳಿಸುತ್ತಾರೆ.ಕಾನೂನು ಎಲ್ಲರಿಗೂ ಒಂದೇ. ಪಿಡಿಓ ಮಾಡಿದ ಕಾರ್ಯ ತಪ್ಪಾಗಿದ್ದರೆ ನೀವು ರಾಜೀನಾಮೆ ನೀಡಬೇಕಿತ್ತು.ಅಧಿಕಾರದಲ್ಲಿದ್ದ ನೀವೇ ಬಹಿಷ್ಕಾರ ಹಾಕಿದರೆ ಹೇಗೆ ಎಂದು ಹೇಳಿದರಲ್ಲದೆ, ಕಾಂಗ್ರೆಸ್ ಸದಸ್ಯರಿಗಾಗಿ ಸಭೆ ರದ್ದು ಮಾಡಿದ್ದೀರಾ? ಆಡಳಿತ ನಡೆಸಲು ಯೋಗ್ಯತೆ ಇಲ್ಲದಿದ್ದರೆ ಮನೆಗೆ ಹೋಗಿ.ಕೇವಲ ಬ್ಯಾನರ್ ತೆರವುಗೊಳಿಸಿರುವುದಕ್ಕೆ ಸಭೆ ರದ್ದು ಮಾಡುವುದಾದರೆ ನಾಚಿಕೆ ಆಗಬೇಕು.ತಾಕತ್ತಿದ್ದರೆ ರಾಜೀನಾಮೆ ನೀಡಿ. ನಿಮ್ಮ ಆಟ ಇನ್ನು ಹೆಚ್ಚು ದಿನವಿಲ್ಲ. ಮುಂದೆ ನಾವೇ ಆಡಳಿತಕ್ಕೆ ಬರಲಿದ್ದೇವೆ.ಬಹುಮತದಿಂದ ಅಧಿಕಾರಕ್ಕೆ ಬಂದು ನಿಮ್ಮನ್ನು ಪರ್ಮನೆಂಟಾಗಿ ಮನೆಗೆ ಕಳುಹಿಸುತ್ತೇವೆ ಎಂದು ಹೇಳಿದರು.
ಸಾಮಾನ್ಯ ಸಭೆ ಬಹಿಷ್ಕಾರ ಹೀನಾಯ ಕೃತ್ಯ-ಅಮಳ: ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಮಾತನಾಡಿ, ಪಂಚಾಯತ್ನ ಸಾಮಾನ್ಯ ಸಭೆ ಸಾಮಾನ್ಯವಲ್ಲ. ಊರಿನ ಜನರ ಸಮಸ್ಯೆ, ಬೇಡಿಕೆಗಳಿರುತ್ತವೆ, ಅರ್ಜಿಗಳಿರುತ್ತವೆ.ಅದನ್ನು ಬಹಿಷ್ಕಾರ ಮಾಡಿರುವುದು ಹೀನಾಯ ಕೃತ್ಯ.ಕ್ಷುಲ್ಲಕ ಕಾರಣಕ್ಕೆ ಬ್ಯಾನರ್ ರಾಜಕೀಯ ರಾರಾಜಿಸುತ್ತದೆ. ಬ್ಯಾನರ್ ಮೂಲಕ ಸುಳ್ಳು ಮಾಹಿತಿ ನೀಡುತ್ತಾರೆ. 4೦% ಕಮಿಷನ್ಗಾಗಿ ಹೆಚ್ಚು ಅನುದಾನ ಇಡುತ್ತಾರೆ. ಜನರನ್ನು ಮರುಳು ಮಾಡಲು ಬ್ಯಾನರ್ ಹಾಕುತ್ತಾರೆ. ಬಿಜೆಪಿಯ ಗೊಡ್ಡು ಬೆದರಿಕೆಗಳಿಗೆ ಹೆದರಬೇಡಿ.ನೀವು ಕಾನೂನು ಪಾಲನೆ ಮಾಡಿ ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳಿದರು.
ಬ್ಯಾನರ್ ಅಳವಡಿಕೆ ನಿಯಮ ಬಿಜೆಪಿಗೆ ಅನ್ವಯವಾಗುವುದಿಲ್ಲ-ಕೃಪಾ ಅಮರ್ ಆಳ್ವ: ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಅಮರ್ ಆಳ್ವ ಮಾತನಾಡಿ,ಅನುಮತಿಯಿಲ್ಲದೇ ಅಳವಡಿಸಿದ ಬ್ಯಾನರ್ನ್ನು ಪಿಡಿಓ ತೆರವುಗೊಳಿಸಿದ್ದಾರೆ. ಅದರ ವಿರುದ್ಧ, ಆಡಳಿತದಲ್ಲಿರುವ ಬಿಜೆಪಿಯವರೇ ಸಾಮಾನ್ಯ ಸಭೆಯನ್ನು ಬಹಿಷ್ಕಾರ ಮಾಡುತ್ತಾರೆ. ಬ್ಯಾನರ್ ಅಳವಡಿಸಲು ಇರುವ ನಿಯಮ, ಕಾನೂನುಗಳು ಅವರಿಗೆ ಅನ್ವಯವಾಗುವುದಿಲ್ಲ.ನಾವು ಅಳವಡಿಸಿದರೆ ಮಾತ್ರ ಅನ್ವಯವಾಗುತ್ತದೆ.ಇದಕ್ಕಾಗಿ ಸಾಮಾನ್ಯ ಸಭೆ ರದ್ದುಗೊಳಿಸಿರುವುದು ಖಂಡನೀಯ ಎಂದರು.
ತಾವು ಅನಧಿಕೃತದ ಪರ ಎಂದು ತೋರಿಸಿಕೊಟ್ಟಿದ್ದಾರೆ-ಶ್ರೀಪ್ರಸಾದ್: ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಮಾತನಾಡಿ, ಕೇವಲ ಅನಧಿಕೃತವಾಗಿ ಅಳವಡಿಸಿದ ಬ್ಯಾನರೊಂದನ್ನು ತೆರವುಗೊಳಿಸಿರುವುದನ್ನು ಖಂಡಿಸಿ ಸಾಮಾನ್ಯ ಸಭೆಗೆ ಬಹಿಷ್ಕಾರ ಹಾಕಿದ್ದು ಅವರು ನಿರಂತರವಾಗಿ ಅನಧಿಕೃತದ ಪರವಾಗಿದ್ದಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಸಾಮಾನ್ಯ ಸಭೆ ರದ್ದುಗೊಂಡಿರುವುದರಿಂದ ನಾಯಕರಿಗೆ ಸಮಸ್ಯೆ ಇಲ್ಲ. ನಾವು ಬಡವರ ಪರವಾಗಿ ಪ್ರತಿಭಟನೆ ನಡೆಸಿದ್ದೇವೆ. ಬಿಜೆಪಿ ಶಾಸಕರೇ ಪಕ್ಷದ ನಾಯಕರ ವಿರುದ್ಧ ಮಾತನಾಡುತ್ತಿದ್ದು, ಆಡಳಿತದಲ್ಲಿರುವ ಬಿಜೆಪಿ ಬೆಂಬಲಿತ ಸದಸ್ಯರು ಸಭಾತ್ಯಾಗ ಮಾಡಿರುವುದು ಅದಕ್ಕೆ ಪೂರಕವಾಗಿದೆ ಎಂದು ಹೇಳಿದರು.
ಬಿಜೆಪಿಯಿಂದ ಸರ್ವಾಧಿಕಾರದ ಧೋರಣೆ-ಕಮಲೇಶ್ ಎಸ್.ಡಿ:
ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ಡಿ ಮಾತನಾಡಿ, ಜಿ.ಪಂ ತಾ.ಪಂಗಳ ಅವಧಿ ಮುಗಿದುಹೋಗಿದ್ದರೂ ಕ್ಷೇತ್ರ ಮರುವಿಂಗಡಣೆ ಮಾಡುವುದಾಗಿ ಹೇಳಿ ವಿಳಂಬ ಮಾಡುತ್ತಿದ್ದಾರೆ. ಅಧಿಕಾರ ವಿಕೇಂದ್ರಿಕರಣದ ಮೂಲಕ ಕಾಂಗ್ರೆಸ್ ಜಾರಿ ತಂದಿರುವ ಪಂಚಾಯತ್ರಾಜ್ ವ್ಯವಸ್ಥೆಯನ್ನು ಬಿಜೆಪಿ ಸರಕಾರ ಜನ ವಿರೋಧಿ ನೀತಿಗಳ ಮೂಲಕ ಬುಡ ಸಹಿತ ಕಿತ್ತು ಹಾಕುವ ಕೆಲಸ ಮಾಡುತ್ತಿದೆ. ಹೈಕೋರ್ಟ್ ಆದೇಶದಂತೆ ಪಿಡಿಓರವರು ಬ್ಯಾನರ್ ತೆರವು ಮಾಡಿದ್ದರೂ ಅವರ ಮೇಲೆ ಛೀಮಾರಿ ಹಾಕುವ ಕೆಲಸ ಮಾಡಿದ್ದಾರೆ.ಸರ್ವಾಧಿಕಾರದ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರ ಅನ್ಯಾಯದ ವಿರುದ್ಧ ಪ್ರತಿಭಟನೆ-ಐತ್ತಪ್ಪ: ಜಿಲ್ಲಾ ಕಾಂಗ್ರೆಸ್ ಸದಸ್ಯ ಐತ್ತಪ್ಪ ಪೇರಲ್ತಡ್ಕ ಮಾತನಾಡಿ, ಕಾಂಗ್ರೆಸ್ನವರು ನಿದ್ದೆ ಮಾಡಿಲ್ಲ. ನಾವು ಸದಾ ಎಚ್ಚರದಲ್ಲಿದ್ದೇವೆ. ಮೂವತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿಯವರು ಏನು ಮಾಡಿದ್ದಾರೆ. ಜನರಿಗೆ ಅನ್ಯಾಯ ಮಾಡಿದ್ದಾರೆ. ಇದರ ವಿರುದ್ದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಮುಂದಿನ ಬಾರಿ ಬಿಜೆಪಿ ಆಡಳಿತಕ್ಕೆ ಬರೋದಿಲ್ಲ-ಆಲಿಕುಂಞಿ: ಆಲಿಕುಂಞಿ ಕೊರಿಂಗಿಲ ಮಾತನಾಡಿ,ಕೋರ್ಟ್ ಆದೇಶವನ್ನು ಓವರ್ ಟೇಕ್ ಮಾಡಿ ಸಾಮಾನ್ಯ ಸಭೆ ಬಹಿಷ್ಕಾರ ಮಾಡಿದ್ದಾರೆ.ಗ್ರಾಮ ಸಭೆಯಲ್ಲಿ ನಾವು ಪ್ರಸ್ತಾಪಿಸಿದ ವಿಚಾರಕ್ಕೆ ಸ್ಪಂದನೆ ನೀಡಿರುವ ಪಿಡಿಓ ಬ್ಯಾನರ್ ತೆರವುಗೊಳಿಸಿದ್ದಾರೆ.ಜನೋಪಯೋಗಿ ಕೆಲಸ ಮಾಡದ ಬಿಜೆಪಿ ಮುಂದಿನ ಬಾರಿ ಆಡಳಿತಕ್ಕೆ ಬರುವುದಿಲ್ಲ.ಇದರ ಭಯದಿಂದ ಅವರು ಈ ರೀತಿ ಮಾಡುತ್ತಾರೆ ಎಂದರು.
ನಮ್ಮದು ಜನಪರ ಹೋರಾಟ-ಸೀತಾ ಭಟ್: ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೀತಾ ಭಟ್ ಮಾತನಾಡಿ, ಅಧಿಕಾರಿಗಳನ್ನು ಕೆಲಸ ಮಾಡಲು ಬಿಡುವುದಿಲ್ಲ. ಅರ್ಜಿಯನ್ನು ತಿರಸ್ಕರಿಸುವಂತಾಗಿದೆ.ಜನರ ಬೇಡಿಕೆಗೆ ಗೌರವ ನೀಡುವುದಿಲ್ಲ.ನಾವು ಪಕ್ಷದ ಗೆಲುವಿಗಾಗಿ ಪ್ರತಿಭಟನೆ ನಡೆಸುವುದಲ್ಲ.ಇಂತಹ ಘಟನೆಗಳು ಮರುಕಳಿಸಬಾರದು ಎಂದು ಜನಪರವಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರು.
ಅಧಿಕಾರಿ ತಪ್ಪು ಮಾಡಿದ್ದರೆ ಕ್ರಮಕೈಗೊಳ್ಳಬೇಕಿತ್ತು-ಕೃಷ್ಣಪ್ರಸಾದ್ ಆಳ್ವ: ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಕೋರ್ಟ್ ಆದೇಶದಂತೆ ಪಿಡಿಓರವರು ಅನಧಿಕೃತ ಬ್ಯಾನರ್ ತೆರವುಗೊಳಿಸಿದ್ದಾರೆ. ಅನದಿಕೃತವಾಗಿದ್ದರೂ ಆಡಳಿತದವರ ಸಾಮಾನ್ಯ ಸಭೆ ಬಹಿಷ್ಕಾರ ಮಾಡಿರುವುದು ಪಿಡಿಓರವರ ವಿರುದ್ದ.ಆಡಳಿತ ಪಕ್ಷದವರು ಅಧಿಕಾರಿ ವಿರುದ್ಧ ಪ್ರತಿಭಟನೆ ನಡೆಸುವುದಲ್ಲ. ಅವರು ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಬೇಕಿತ್ತು.ಅದರ ಹೊರತಾಗಿ ಸಾಮಾನ್ಯ ಸಭೆ ಬಹಿಷ್ಕಾರ ಮಾಡಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಚುನಾಯಿತ ಜನಪ್ರತಿನಿಧಿಗಳು ಜನರಿಗೆ ತೊಂದರೆ ಕೊಡುವುದನ್ನು ನಾವು ಸಹಿಸುವುದಿಲ್ಲ.ಈ ಕುರಿತು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸದಸ್ಯರು ಪಾಳೆಗಾರರಲ್ಲ: ಚುನಾವಣೆ ಹತ್ತಿರದಲ್ಲಿದ್ದು ನೀತಿ ಸಂಹಿತೆ ಜಾರಿಯಾದರೆ ಸಾಮಾನ್ಯ ಸಭೆಯಾಗದೆ ಜನರಿಗೆ ತೊಂದರೆಯಾಗುತ್ತದೆ.ಪಂಚಾಯತ್ ಕಚೇರಿ ಬಳಿಯಲ್ಲಿಯೇ ಕಣ್ಣಿಗೆ ಕಾಣುವಂಥ ಬಹುದೊಡ್ಡ ಸಮಸ್ಯೆಗಳು ಸೇರಿದಂತೆ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ.ಅದರ ಬಗ್ಗೆ ಯಾವುದೇ ಸಭಾತ್ಯಾಗ ಮಾಡುವುದಿಲ್ಲ. ಕೇವಲ ಅನಧಿಕೃತವಾಗಿ ಅಳವಡಿಸಿದ್ದ ಬ್ಯಾನರ್ ತೆರವುಗೊಳಿಸಿರುವುದಕ್ಕೆ ಸಾಮಾನ್ಯ ಸಭೆಯನ್ನೇ ಬಹಿಷ್ಕಾರ ಮಾಡುವುದಾದರೆ ಇದು ದುರಹಂಕಾರ.ಇದರ ವಿರುದ್ದ ಮಾತ್ರ ನಮ್ಮ ಹೋರಾಟ.ಸದಸ್ಯರು ಪಾಳೆಗಾರರಲ್ಲ.ಇದೇ ರೀತಿ ಮುಂದುವರಿದರೆ ಮುಂದೆ ಉಗ್ರರೀತಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ಇರ್ದೆ-ಬೆಟ್ಟಂಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ ಎಚ್ಚರಿಸಿದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಶಿಕಿರಣ್ ರೈ ನೂಜಿಬೈಲು, ಬ್ಲಾಕ್ ಎಸ್ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯರಾದ ಮೊಯಿದು ಕುಂಞಿ ಕೋನಡ್ಕ, ಸುಮಲತಾ, ಲಲಿತಾ, ಮಹಾಲಿಂಗ ನಾಯ್ಕ,ಮಾಜಿ ಸದಸ್ಯರಾದ ಕೆ.ಪಿ.ಭಟ್ ಕೋನಡ್ಕ,ಭವಾನಿ ಹುಕ್ರಪ್ಪ ಗೌಡ,ಆನಂದ ನಾಯ್ಕ ಕಟೀಲ್ತಡ್ಕ, ಪರಮೇಶ್ವರ ನಾಯ್ಕ ದೂಮಡ್ಕ, ಮಹಾಲಿಂಗ ನಾಯ್ಕ, ಸದಾಶಿವ ರೈ, ಅಚ್ಚುತ ಉಪ್ಪಳಿಗೆ, ಶರೀಫ್ ನೋಂಡ್ರಿಮಾರ್, ಖಾಸಿಂ ಪೇರಲ್ತಡ, ಅಝೀಝ್ ಪೇರಲ್ತಡ್ಕ, ರಾಯಲ್ ಶರೀಫ್, ಅಬೂಬಕ್ಕರ್ ಕೊರಿಂಗಿಲ, ಯಾಕೂಬ್ ಕೂಟತ್ತಾನ, ಅಬ್ದುಲ್ ಅಝೀಜ್ ಪೇರಲ್ತಡ್ಕ, ಆಸೀಫ್ ಪೇರಲ್ತಡ್ಕ, ಕುಂಞಿ ಗುಡ್ಯಡ್ಕ, ಭಾಸ್ಕರ ಕರ್ಕೇರ, ಹರೀಶ್ ಕುಮಾರ್ ನಿಡ್ಪಳ್ಳಿ, ಸುಲೈಮಾನ್ ಪೇರಲ್ತಡ್ಕ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು. ಅಬೂಬಕ್ಕರ್ ಕೊರಿಂಗಿಲ ವಂದಿಸಿದರು.
ಮಾತಿನ ಚಕಮಕಿ
ಪ್ರತಿಭಟನಾಕಾರರ ಸಮಸ್ಯೆ ಆಲಿಸಲು ಸ್ಥಳಕ್ಕಾಗಮಿಸಿದ ಗ್ರಾ.ಪಂ.ಅಧ್ಯಕ್ಷೆ ಪವಿತ್ರ, ಸದಸ್ಯ ಪ್ರಕಾಶ್ ರೈ ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.ಕೇವಲ ಬ್ಯಾನರ್ ತೆರವುಗೊಳಿಸಿದ ವಿಚಾರಕ್ಕೆ ಸಾಮಾನ್ಯ ಸಭೆ ರದ್ದುಗೊಳಿಸುವುದಾದರೆ ಹೇಗೆ? ಜನರಿಗಾದ ಸಮಸ್ಯೆಗೆ ಯಾರು ಹೊಣೆ ಎಂದು ಪ್ರತಿಭಟನಾನಿರತರು ಪ್ರಶ್ನಿಸಿದರು. ಏಕಪಕ್ಷೀಯವಾಗಿ ಎಲ್ಲಾ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಸಾಮಾನ್ಯ ಸಭೆಗೆ ಆಗಮಿಸಿದ್ದ ಸದಸ್ಯರಿಗೆ ಸಹಿ ಹಾಕಲೂ ಅವಕಾಶ ನೀಡಿಲ್ಲ. ನಮ್ಮ ವಿರೋಧ ವೈಯಕ್ತಿಕವಾಗಿ ಅಲ್ಲ. ಸಾಮಾನ್ಯ ಸಭೆ ರದ್ದುಗೊಳಿಸಿ ಜನರಿಗಾದ ಸಮಸ್ಯೆ ವಿರುದ್ಧ ಮಾತ್ರ ನಾವು ಪ್ರತಿಭಟನೆ ನಡೆಸುತ್ತಿರುವುದಾಗಿ ಪ್ರತಿಭಟನಾನಿರತರು ತಿಳಿಸಿದರು.
ಮಾ.1ಕ್ಕೆ ಸಾಮಾನ್ಯ ಸಭೆ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗ್ರಾ.ಪಂ ಅಧ್ಯಕ್ಷೆ ಪವಿತ್ರ ಮಾತನಾಡಿ, ಈಗಾಗಲೇ ರದ್ದುಗೊಂಡ ಸಾಮಾನ್ಯ ಸಭೆ ಮಾ.1ಕ್ಕೆ ನಡೆಯಲಿದ್ದು ಎಲ್ಲಾ ಸಮಸ್ಯೆಗಳಿಗೂ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಒಂದು ಬಾರಿ ಸಭೆ ಮುಂದೂಡಲ್ಪಟ್ಟು ಮತ್ತೆ ಸಭೆ ನಡೆಸಲು, ನೋಟೀಸ್ ನೀಡಿ ಕನಿಷ್ಟ ಏಳು ದಿನಗಳ ಕಾಲಾವಕಾಶ ಬೇಕಿದೆ ಎಂದು ಅಧ್ಯಕ್ಷರು ತಿಳಿಸಿದರು.ಸದಸ್ಯ ಪ್ರಕಾಶ್ ರೈ ಬೈಲಾಡಿ, ಪಿಡಿಓ ಸೌಮ್ಯ ಉಪಸ್ಥಿತರಿದ್ದರು.