ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಆಯಾತಪ್ಪಿ ಬಸ್‌ನ ಹಿಂಬಾಗಿಲಿನಿಂದ ರಸ್ತೆಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತರಾದ ಪ್ರಯಾಣಿಕರ ಕುಟುಂಬಕ್ಕೆ ಕೆಎಸ್‌ಆರ್‌ಟಿಸಿ ಅಪಘಾತ ಪರಿಹಾರ ನಿಧಿಯಿಂದ 3ಲಕ್ಷ ರೂ. ಚೆಕ್ ನೀಡಲಾಯಿತು.
2022 ನವೆಂಬರ್ 21ರಂದು ಧರ್ಮಸ್ಥಳ ಘಟಕದ ವಾಹನ ಸಂಖ್ಯೆ ಕೆಎ21-ಎಫ್ 0201 ಕುಕ್ಕೆ ಸುಬ್ರಹ್ಮಣ್ಯ-ಧರ್ಮಸ್ಥಳ ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿರುವಾಗ ಕಡಬ ತಾಲೂಕಿನ ಮರ್ದಾಳದ ಕೇಪು ಪಂಚಮುಖಿ ಮುಖ್ಯಪ್ರಾಣ ದೇವಸ್ಥಾನದ ಹತ್ತಿರ ಆಯಾತಪ್ಪಿ ಬಸ್‌ನ ಹಿಂಬಾಗಿಲಿನಿಂದ ರಸ್ತೆಗೆ ಪ್ರಯಾಣಿಕರೋರ್ವರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಚಿಕಿತ್ಸೆಗಾಗಿ ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಮೃತ ಪ್ರಯಾಣಿಕರ ವಾರಸುದಾರರ ಪತಿ ಬೆಂಗಳೂರು ದಾಸರಹಳ್ಳಿಯ ಪ್ರಶಾಂತನಗರದ ನಿವಾಸಿ ರಂಗಸ್ವಾಮಿಯವರಿಗೆ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಜಯಕರ್ ಶೆಟ್ಟಿರವರು ಚೆಕ್ ಹಸ್ತಾಂತರಿಸಿದರು. ವಿಭಾಗೀಯ ಸಂಚಾರ ಅಧಿಕಾರಿ ಮುರಳೀಧರ ಆಚಾರ್ಯ, ವಿಭಾಗೀಯ ಭದ್ರತಾ ಅಧೀಕ್ಷಕ ಮಧುಸೂದನ್ ನಾಯ್ಕ್ ಉಪಸ್ಥಿತರಿದ್ದರು.