ಪುತ್ತೂರು: ಒಳಮೊಗ್ರು ಗ್ರಾಮದ ಮುಳಿಯಡ್ಕದ ಕಲ್ಲಡ್ಕ ಎಂಬಲ್ಲಿ ಇರುವ ಅಗಲ ಕಿರಿದಾದ ಸೇತುವೆಯನ್ನು ಬದಲಾಯಿಸುವಂತೆ ಗ್ರಾಮಸ್ಥರು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಮತದಾನ ಬಹಿಷ್ಕರಿಸುವಂತೆ ಸೇತುವ ಬಳಿ ಬ್ಯಾನರ್ ಅಳವಡಿಸಿದ್ದರು.
ಈ ಬಗ್ಗೆ ಒಳಮೊಗ್ರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್.ರವರು ಗ್ರಾಮಸ್ಥರ ಜೊತೆ ಮಾತುಕತೆ ನಡೆಸುವ ಮೂಲಕ ಅವರ ಮನವೊಲಿಸಿ ಬ್ಯಾನರ್ ತೆರವು ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಪರ್ಪುಂಜದಿಂದ ದರ್ಬೆತ್ತಡ್ಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮುಳಿಯಡ್ಕ ಎಂಬಲ್ಲಿ ಅಗಲ ಕಿರಿದಾದ ಸೇತುವೆ ಇದ್ದು ಇದರಿಂದ ಬಹಳಷ್ಟು ತೊಂದರೆಯಾಗುತ್ತಿದ್ದು ಇದನ್ನು ಬದಲಾಯಿಸುವಂತೆ ಕಳೆದ 20 ವರ್ಷಗಳಿಂದ ಈ ಭಾಗದ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದರು. ಆದರೂ ಯಾವೊಬ್ಬ ಜನಪ್ರತಿನಿಧಿ, ಅಧಿಕಾರಿ ಕೂಡ ಇವರ ಮನವಿಗೆ ಬೆಲೆ ಕೊಡದೇ ಇರುವ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಸಿದ್ದರು.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್.ರವರು ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿ ಈ ಸೇತುವೆ ಕಾಮಗಾರಿಗೆ ಬಹಳಷ್ಟು ಅನುದಾನ ಬೇಕಾಗಿರುವುದರಿಂದ ಪಂಚಾಯತ್ನಿಂದ ಇದು ಸಾಧ್ಯವಾಗದ ಕೆಲಸವಾಗಿದೆ. ಈ ಭಾಗದ ಜನರಿಗೆ ಸೇತುವೆ ನಿರ್ಮಾಣ ಅಗತ್ಯವಿದ್ದು ಪಂಚಾಯತ್ನಿಂದ ಸಾಧ್ಯವಾಗುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾಮಸ್ಥರಾದ ರಮೇಶ್ ಆಳ್ವ ಕಲ್ಲಡ್ಕರವರು, ಗ್ರಾಪಂ ಅಭಿವೃದ್ಧಿ ಅಧಿಕಾರಿಯವರ ಮನವಿಯ ಮೇರೆಗೆ ನಾವು ಬ್ಯಾನರ್ ಅನ್ನು ತೆರವುಗೊಳಿಸಿದ್ದೇವೆ. ಸೇತುವೆ ನಿರ್ಮಾಣವಾಗುವ ತನಕ ನಮ್ಮ ಹೋರಾಟ ಮುಂದುವರಿಯುತ್ತದೆ. ನಮಗೆ ಸೇತುವೆ ಮುಖ್ಯ ಎಂದು ತಿಳಿಸಿದ್ದಾರೆ.
‘ಈ ಸೇತುವೆಗೆ ಪಂಚಾಯತ್ ಅನುದಾನ ಸಾಕಾಗುವುದಿಲ್ಲ, ಸುಮಾರು 50 ರಿಂದ 60 ಲಕ್ಷ ರೂ.ಅನುದಾನ ಬೇಕಾಗುತ್ತದೆ. ಈ ಬಗ್ಗೆ ಶಾಸಕರಿಗೂ ಮಾಹಿತಿ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಈ ಸೇತುವೆ ನಿರ್ಮಾಣವನ್ನು ಪ್ರಥಮ ಆದ್ಯತೆಯಲ್ಲಿ ತೆಗೆದುಕೊಳ್ಳುತ್ತೇವೆ.’
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ