ಕೃಷಿ ಕೆಲಸಕ್ಕೆ ಮುಹೂರ್ತ, ತುಳುವರ ಹೊಸ ವರ್ಷದ ಆರಂಭ-ನಾಳೆ (ಏ.15) ಬಿಸು ಪರ್ಬೊ

0

@ ಸಿಶೇ ಕಜೆಮಾರ್


ಭಾರತೀಯ ಪದ್ಧತಿಯಲ್ಲಿ ನಾವು ಎರಡು ರೀತಿಯ ಕಾಲಗಣನೆಯನ್ನು ಆಚರಿಸುತ್ತೇವೆ.ಒಂದು ಚಾಂದ್ರಮಾನ ಪದ್ಧತಿ ಮತ್ತೊಂದು ಸೌರಮಾನ ಪದ್ಧತಿ. ಚಂದ್ರನಿಗೆ ಈ ಭೂಮಿಯನ್ನು ಒಂದು ಸುತ್ತು ಬರಲು ಬರೋಬ್ಬರಿ 25 ರಿಂದ 29 ದಿನ ಬೇಕಾಗುತ್ತದೆ. ಅದೇ ರೀತಿ ಚಂದ್ರನು 12 ಸುತ್ತು ಬಂದಾಗ ಒಂದು ವರ್ಷ ಆಗುತ್ತದೆ. ಈ ಸುತ್ತನ್ನು ಲೆಕ್ಕಹಾಕಿ ಮಾಡುವ ಕಾಲಮಾನ ಪದ್ಧತಿಯನ್ನು ಚಾಂದ್ರಮಾನ ಪದ್ಧತಿ ಎಂದು ಕರೆಯಲಾಗುತ್ತದೆ. ಅದೇ ರೀತಿ ಈ ಭೂಮಿಗೆ ಸೂರ್ಯನಿಗೆ ಒಂದು ಸುತ್ತು ಬರಬೇಕಾದರೆ ಬರೋಬ್ಬರಿ 365 ದಿನ ಬೇಕಾಗುತ್ತದೆ. ಅದನ್ನು ಒಂದು ವರ್ಷ ಎನ್ನುತ್ತಾರೆ. ಈ ಒಂದು ವರ್ಷವನ್ನು 12 ವಿಭಾಗ ಮಾಡಿ ಒಂದು ರಾಶಿ ಅಥವಾ ತಿಂಗಳು ಎಂದು ಹೇಳಲಾಗುತ್ತದೆ. ಇಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಭೂಮಿಗೆ ಒಂದು ತಿಂಗಳು ಬೇಕಾಗುತ್ತದೆ. ಈ ಪದ್ಧತಿಯನ್ನು ಸೌರಮಾನ ಪದ್ಧತಿ ಎಂದು ಕರೆಯಲಾಗುತ್ತದೆ. ಸೌರಮಾನ ಯುಗಾದಿ ಅಥವಾ ವಿಷುವತ್ ಸಂಕ್ರಾಂತಿ ಅಂದರೆ ತುಳುವರ ಬಿಸುಪರ್ಬ. ಇದು ಹೊಸ ವರ್ಷದ ಆರಂಭ. ಇಲ್ಲಿ ನಾವು ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ವಿಷು ದಿನ ಸೂರ್ಯನು ಭೂಮಧ್ಯ ರೇಖೆಗೆ ಬರುತ್ತಾನೆ. ಇಲ್ಲಿ ಬಿಸುಗದಿರ ಎಂದರೆ ಸೂರ್ಯ ಎಂದು ಅರ್ಥೈಸಲಾಗಿದೆ. ಆದ್ದರಿಂದಲೇ ತುಳುವರಿಗೆ ಈ ದಿನ ಬಹಳ ವಿಶೇಷವಾದ ದಿನವಾಗಿದೆ. ಹೊಸ ಕೃಷಿ ಕೆಲಸಕ್ಕೆ ಈ ದಿನವೇ ಬಿತ್ತನೆ ಆರಂಭವಾಗುತ್ತದೆ.


ಬಿಸು ಕಣಿ
ತುಳುವರು ಬಿಸು ಹಬ್ಬದಲ್ಲಿ ಮಾಡುವ ಒಂದು ಆಚರಣೆ ಎಂದರೆ ಬಿಸು ಕಣಿ ಇಡುವುದು. ಇಲ್ಲಿ ಕಣಿ ಎಂದರೆ ಕಾಣಿಕೆ ಎಂಬ ಅರ್ಥ ಇದೆ. ತೋಟದಲ್ಲಿ ಬೆಳೆದ ಫಲ ಪುಷ್ಪಗಳನ್ನು, ಗದ್ದೆಯಲ್ಲಿ ಬೆಳೆದ ಭತ್ತದ ತೆನೆಯನ್ನು ಮಾತ್ರವಲ್ಲದೆ ಬೇರೆ ಬೇರೆ ಬೆಳೆಗಳನ್ನು ಕೊಯ್ದು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡಲಾಗುತ್ತದೆ. ಹೀಗೆ ರಾಶಿ ಹಾಕಿದ ಫಲಪುಷ್ಪ ಧಾನ್ಯಗಳ ರಾಶಿಗೆ ಬಿಸು ಕಣಿ ಎಂದು ಹೇಳಲಾಗುತ್ತದೆ. ಬಿಸು ಹಬ್ಬದ ದಿನ ಬೆಳಿಗ್ಗೆ ಎದ್ದ ಕೂಡಲೇ ಬಿಸು ಕಣಿಯನ್ನು ನೋಡಬೇಕು ಎಂಬ ಸಂಪ್ರದಾಯ ಇದೆ. ಬಿಸು ಪರ್ಬದ ದಿನ ಬೆಳಿಗ್ಗೆ ಬೇಗನೆ ಎದ್ದು ತುಳಸಿ ಕಟ್ಟೆಯ ಬಳಿ ಅಥವಾ ದೈವದ ಚಾವಡಿ ಬಳಿ ಒಂದು ಮಣೆ ಇಟ್ಟು ಅದರ ಮೇಲೆ ಬಾಳೆಯ ಎಲೆ ಹಾಕಿ ಅದರ ಬಳಿ ದೀಪ ಇಡಲಾಗುತ್ತದೆ. ಹೀಗೆ ಇಟ್ಟ ಬಾಳೆಯ ಎಲೆಯ ಮೇಲೆ ಬೇರೆ ಬೇರೆ ಹಣ್ಣು ಹಂಪಲು, ಹೂ ಹಿಂಗಾರ, ತರಕಾರಿ, ಚಿನ್ನ ಎಲ್ಲವನ್ನು ಇಡಲಾಗುತ್ತದೆ. ಇದರ ನಡುವಲ್ಲಿ ಒಂದು ಕನ್ನಡಿಯನ್ನು ಇಡಲಾಗುತ್ತದೆ. ಬಿಸು ಕಣಿಗೆ ಕೈ ಮುಗಿಯುವಾಗ ನಾವು ಕನ್ನಡಿಯಲ್ಲಿ ನಮ್ಮ ಮುಖವನ್ನು ನೋಡಿಕೊಳ್ಳಬೇಕು ಎಂಬ ಸಂಪ್ರದಾಯ ಕೂಡ ಇದೆ. ಸುಳ್ಯ, ಪುತ್ತೂರು ಕಡೆಗಳಲ್ಲಿ ಮನೆಯೊಳಗೆ ದೇವರ ಕೋಣೆಯಲ್ಲಿ ಅಥವಾ ಚಾವಡಿಯಲ್ಲಿ ಬಿಸು ಕಣಿ ಇಡುವ ಕ್ರಮ ಇದೆ. ಬಿಸು ಹಬ್ಬದ ದಿನ ದೈವಗಳಿಗೆ ವಿಶೇಷ ಬಿಸುಕಣಿ ಇಡುವ ಕ್ರಮವೂ ಇದೆ. ಜೋಡು ಎಲೆಯಲ್ಲಿ ಗಣಪತಿ ದೇವರಿಗೆ ಅಕ್ಕಿ, ಕಾಯಿ ಇಟ್ಟು ಅದರ ಬಳಿ ದೀಪ ಹಚ್ಚಿಡಲಾಗುತ್ತದೆ. ಇದುವೆ ದೈವಗಳಿಗೆ ತಂಬಿಲ ಸೇವೆಯೂ ಹೌದು.ಇನ್ನು ಕೆಲವು ಕಡೆಗಳಲ್ಲಿ ಬಿಸು ಕಣಿಗೆ ಇಟ್ಟ ತರಕಾರಿಗಳಲ್ಲಿ ದೊಡ್ಡ ಕುಂಬಳಕಾಯಿ, ಸೌತೆಕಾಯಿ ಇತ್ಯಾದಿಗಳನ್ನು ಊರಿನ ಗುತ್ತು ಮನೆಯವರಿಗೆ ತಲುಪಿಸುವ ಕ್ರಮವೂ ಇದೆ. ಇದನ್ನು ಬುಲೆಕಾಣಿಕೆ ಎಂದು ಕರೆಯುತ್ತಾರೆ.


ಹೊಸ ಬಟ್ಟೆಯುಟ್ಟು ಸಂಭ್ರಮ
ಬಿಸು ಪರ್ಬದ ದಿನ ಬೆಳಿಗ್ಗೆ ಬೇಗ ಎದ್ದು ಎಲ್ಲರೂ ಸ್ನಾನ ಮುಗಿಸುತ್ತಾರೆ. ಬಳಿಕ ಹೊಸ ಬಟ್ಟೆ ಬರೆಯನ್ನು ಉಡುತ್ತಾರೆ. ತುಳುನಾಡಲ್ಲಿ ಬಿಸುವಿಗೆ ಹೊಸ ಬಟ್ಟೆ ಉಡುವ ಕ್ರಮವೂ ಇದೆ. ಈ ದಿನ ಎಲ್ಲರೂ ಹೊಸ ಬಟ್ಟೆಯಲ್ಲಿ ಸಂಭ್ರಮಿಸುತ್ತಾರೆ.ಬಿಸು ಕಣಿಗೆ ಕೈ ಮುಗಿದು ಭೂಮಿ ತಾಯಿಗೆ ಅಡ್ಡ ಬೀಳುತ್ತಾರೆ. ಕನ್ನಡಿಯಲ್ಲಿ ಮುಖ ನೋಡಿಕೊಂಡು ಖುಷಿ ಪಡುತ್ತಾರೆ. ಕಣಿಯಲ್ಲಿ ಇಟ್ಟ ಗಂಧವನ್ನು ಹಣೆಗೆ ಹಚ್ಚಿಕೊಳ್ಳಲಾಗುತ್ತದೆ. ಆ ಬಳಿಕ ಮನೆಯಲ್ಲಿರುವ ಹಿರಿಯರ ಕಾಲು ಮುಟ್ಟಿ ಆಶೀರ್ವಾದ ಪಡೆಯುತ್ತಾರೆ. ಈ ಕ್ರಮ ತುಳುನಾಡಲ್ಲಿ ಬಹುತೇಕ ಮನೆಗಳಲ್ಲಿ ನಡೆಯುತ್ತದೆ. ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡುವ ಮೂಲಕ ಇಡೀ ವರ್ಷ ಸುಖ ಶಾಂತಿ ನೆಮ್ಮದಿಯನ್ನು ತರಲಿ ಎಂದು ಹಾರೈಸುತ್ತಾರೆ.


ಬಿಸು ಮತ್ತು ಕೃಷಿ ಕಾಯಕ
ಬಿಸು ಎಂದರೆ ತುಳುವರಿಗೆ ಕೃಷಿ ಕಾಯಕಕ್ಕೆ ಮುನ್ನುಡಿ ಇಡುವ ಸಂಭ್ರಮವೂ ಹೌದು. ತುಳುವರ ಕೃಷಿ ಕಾಯಕ ಬಿಸುವಿನಿಂದ ಆರಂಭವಾಗುತ್ತದೆ. ಈ ದಿನವೇ ಕೃಷಿಕರು ತಮ್ಮ ಎತ್ತುಗಳನ್ನು ಗದ್ದೆಗೆ ಕರೆದುಕೊಂಡು ಹೋಗಿ ಗದ್ದೆ ಉಳುವ ಕ್ರಮವನ್ನು ಮಾಡುತ್ತಾರೆ. ಅಲ್ಲದೆ ಮೊದಲ ಬಿತ್ತನೆ ಕೆಲಸವನ್ನು ಕೂಡ ಈ ದಿನವೇ ಆರಂಭಿಸುತ್ತಾರೆ. ಇದನ್ನು ತುಳುವಿನಲ್ಲಿ ಕೈ ಬಿತ್ತುನ ಕ್ರಮ ಎಂದು ಹೇಳುತ್ತಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಇದೆಲ್ಲಾ ನೆನಪುಗಳಾಗಿ ಉಳಿದುಕೊಂಡಿದೆ. ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನದಿಂದಾಗಿ ಮಳೆ ಕಡಿಮೆಯಾಗುತ್ತಾ ಬರುತ್ತಿದ್ದು, ನೀರಿನ ಅಭಾವ ಉಂಟಾಗಿದೆ. ಗದ್ದೆಗಳೇ ಇಲ್ಲದ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಅಲ್ಲಿಇಲ್ಲಿ ಇರುವ ಗದ್ದೆಗಳು ಒಣಗಿ ಹೋಗುವ ಪರಿಸ್ಥಿತಿಯಲ್ಲಿ ನಾವಿದ್ದೇವೆ.


ಗೌಜಿ ಗಮ್ಮತ್ತು
ಕೇರಳದಲ್ಲಿ ಬಿಸುವನ್ನು ವಿಷು ಎಂದು ಆಚರಣೆ ಮಾಡುತ್ತಾರೆ. ವಿಷು ಹಬ್ಬದ ದಿನ ಬಡವರಿಗೆ ಮೂಡೆ ಅಥವಾ ಉದ್ದು ಹಾಕಿದ ದೋಸೆ ಮಾಡಿ ಕೊಡಲಾಗುತ್ತದೆ. ಕೇರಳದಲ್ಲಿ ಈಗಲೂ ಇಂತಹ ಕ್ರಮ ನಡೆಯುತ್ತದೆ.ತುಳುವರು ಬಿಸು ಹಬ್ಬದ ದಿನ ವಿಶೇಷ ಊಟದ ವ್ಯವಸ್ಥೆ ಮಾಡುತ್ತಾರೆ. ಮುಖ್ಯವಾಗಿ ಗೇರು ಬೀಜ ಹಾಕಿದ ಪಾಯಸ ವಿಶೇಷ ಖಾದ್ಯವಾಗಿರುತ್ತದೆ. ಉಳಿದಂತೆ ಸೌತೆಕಾಯಿ ಪದಾರ್ಥ, ಕಡಲೆ ಗಸಿ, ತೊಂಡೆಕಾಯಿ ಪಲ್ಯ, ಕಡಲೆ ಬೇಳೆ, ಹೆಸರು ಪಾಯಸ ಇತ್ಯಾದಿ ಗಮ್ಮತ್ತು ಗೌಜಿ ಪ್ರತಿ ಮನೆಯಲ್ಲೂ ನಡೆಯುತ್ತದೆ. ಬನ್ನಿ ನಾವು ಕೂಡ ಬಿಸು ಪರ್ಬವನ್ನು ಸಂಭ್ರಮಿಸೋಣ…


ತುಳುವರ ತಿಂಗಳು
ತುಳುವರ ತಿಂಗಳು ಆರಂಭವಾಗುವುದು ಪಗ್ಗುವಿನಿಂದ (ಎಪ್ರಿಲ್-ಮೇ), ನಾವು ಶಾಲೆಯಲ್ಲಿ ಜನವರಿಯಿಂದ ದಶಂಬರ್ ತನಕ ಲೆಕ್ಕಹಾಕಿದರೆ ತುಳುವರು ಪಗ್ಗುವಿನಿಂದ ಸುಗ್ಗಿ ತನಕ ಲೆಕ್ಕಹಾಕಿ ಒಂದು ವರ್ಷ ಎನ್ನುತ್ತಾರೆ. ಹೀಗಿದೆ ನೋಡಿ ತುಳುವರ ವರ್ಷದ ತಿಂಗಳು. 1. ಪಗ್ಗು (ಎಪ್ರಿಲ್-ಮೇ), 2. ಬೇಸ (ಮೇ-ಜೂನ್) 3. ಕಾರ್ತೆಲ್ (ಜೂನ್-ಜುಲೈ) 4. ಆಟಿ (ಜುಲೈ-ಆಗಸ್ತ್) 5.ಸೋಣ (ಆಗಸ್ತ್-ಸೆಪ್ಟಂಬರ್) 6.ನಿರ್ನಾಲ (ಸೆಪ್ಟಂಬರ್-ಅಕ್ಟೋಬರ್) 7. ಬೊಂತೆಲ್ (ಅಕ್ಟೋಬರ್-ನವೆಂಬರ್) 8.ಜಾರ್ದೆ ( ನವೆಂಬರ್-ದಶಂಬರ್) 9.ಪೆರಾರ್ದೆ (ದಶಂಬರ್-ಜನವರಿ) 10.ಪೊನ್ನಿ (ಜನವರಿ-ಫೆಬ್ರವರಿ) 11.ಮಾಯಿ (ಫೆಬ್ರವರಿ-ಮಾರ್ಚ್) 12.ಸುಗ್ಗಿ ( ಮಾರ್ಚ್-ಎಪ್ರಿಲ್). ಸೌರಮಾನದಲ್ಲಿ ಪಗ್ಗು ಮೊದಲ ತಿಂಗಳಾದರೆ ಸುಗ್ಗಿ ಕೊನೆಯ ತಿಂಗಳಾಗಿರುತ್ತದೆ.

……………………………………………………………………………………………………

LEAVE A REPLY

Please enter your comment!
Please enter your name here