ಪುತ್ತೂರು:ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಬಲಿ ಉತ್ಸವ ಏ.17ರಂದು ಮಧ್ಯಾಹ್ನ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ವೈಭವದಿಂದ ನಡೆಯಿತು.
ಬೆಳಿಗ್ಗೆ ಶ್ರೀ ದೇವರ ನಿತ್ಯ ಬಲಿ ಉತ್ಸವ, ಬಳಿಕ ವಾದ್ಯ, ಚೆಂಡೆ, ಶಂಖ ಸುತ್ತಿನ ಬಳಿಕ ಶ್ರೀ ದೇವರು ವಸಂತಕಟ್ಟೆಯ ತೊಟ್ಟಿಲಲ್ಲಿ ಕೂತು ಪೂಜೆ ಸ್ವೀಕರಿಸಿದರು.ನಂತರ ಸರ್ವವಾದ್ಯದಿಂದ ಬಲಿ ಉತ್ಸವ ನಡೆದು ದರ್ಶನ ಬಲಿ ಆರಂಭಗೊಂಡಿತು. ದರ್ಶನ ಬಲಿಯಲ್ಲಿ ಒಂದು ಸುತ್ತು ಶ್ರೀ ದೇವರ ಉತ್ಸವ ಮೂರ್ತಿ ಹೊತ್ತಿರುವ ಬ್ರಹ್ಮವಾಹಕ ಗೋಪಾಲಕೃಷ್ಣ ಅಡಿಗರವರು ಪ್ರದಕ್ಷಿಣೆ ರೂಪದಲ್ಲಿ ಬಲಿ ಸುತ್ತು ನಡೆಸಿಕೊಟ್ಟರು. ಬಳಿಕ ಒಂದು ಸುತ್ತು ಬಲಿ ಉತ್ಸವ, ಬಳಿಕ ಶ್ರೀ ದಂಡನಾಯಕ ಉಳ್ಳಾಲ್ತಿ ಭಂಡಾರದೊಂದಿಗೆ ದರ್ಶನ ಬಲಿ ಉತ್ಸವ ನಡೆಯಿತು.
ಉಳ್ಳಾಲ್ತಿಯ ಅಪ್ಪಣೆ ಬಳಿಕ ಬಟ್ಟಲುಕಾಣಿಕೆ ಸಮರ್ಪಣೆ: ಶ್ರೀ ಉಳ್ಳಾಲ್ತಿಯು ‘ಬಟ್ಟಲು ಕಾಣಿಕೆಗ್ ಅನುವು ಮಲ್ತ್‌ಕೊರ್ಪೆ’ ಎಂದು ಅಪ್ಪಣೆ ನೀಡಿದ ಬಳಿಕ ಬಟ್ಟಲು ಕಾಣಿಕೆ ಸಮರ್ಪಣೆ ನಡೆಯಿತು. ಆರಂಭದಲ್ಲಿ ಭಕ್ತರು ಹಾಗೂ ಕೊನೆಯಲ್ಲಿ ದೇವಾಲಯದ ನೌಕರರು, ಅರ್ಚಕರು, ನಂತರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರಿಂದ ಸಂಪ್ರದಾಯದಂತೆ ಬಟ್ಟಲು ಕಾಣಿಕೆ ಸಮರ್ಪಣೆ ನಡೆಯಿತು.ಅರ್ಚಕರು ಭಕ್ತರಿಗೆ ಬಟ್ಟಲು ಕಾಣಿಕೆ ಪ್ರಸಾದ ವಿತರಣೆ ಮಾಡುವಲ್ಲಿ ಸಹಕರಿಸಿದರು. ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರೂ ಆಗಿರುವ ಸಂಸದ ಡಿ.ವಿ.ಸದಾನಂದ ಗೌಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಶಾಸಕ ಸಂಜೀವ ಮಠಂದೂರು, ಬಿಜೆಪಿ ಅಭ್ಯರ್ಥಿ ಆಶಾತಿಮ್ಮಪ್ಪ ಗೌಡ, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ, ದಿಶಾ ನಾಮನಿರ್ದೇಶಿತ ಸದಸ್ಯ ರಾಮದಾಸ್ ಹಾರಾಡಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವಪ್ರಸಾದ್, ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ರಾಮ್‌ದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ಡಾ.ಸುಧಾ ಎಸ್ ರಾವ್, ವೀಣಾ ಬಿ.ಕೆ, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್, ಎನ್.ಕರುಣಾಕರ ರೈ, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಲೋಕೇಶ್ ಹೆಗ್ಡೆ, ಕಿಟ್ಟಣ್ಣ ಗೌಡ, ಶ್ರೀಧರ್ ಪಟ್ಲ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಮಾಜಿ ಅಧ್ಯಕ್ಷ ತಿಮ್ಮಪ್ಪ ಗೌಡ ಮತ್ತು ಹಾಲಿ ಸದಸ್ಯರು, ಉದ್ಯಮಿ ಶಿವಪ್ರಸಾದ್ ಶೆಟ್ಟಿ ಸೇರಿದಂತೆ ಸಾವಿರಾರು ಮಂದಿ ಉಪಸ್ಥಿತರಿದ್ದರು.
ದರ್ಶನ ಬಲಿ ಉತ್ಸವದ ಬಳಿಕ ಅಪ್ಪಂಗಾಯಿ: ಶ್ರೀ ದೇವರ ದರ್ಶನ ಬಲಿ ಉತ್ಸವದ ಬಳಿಕ ದೇವಳದ ಗಣಪತಿ ಗುಡಿಯ ಎದುರು ಇರುವ ಅಪ್ಪಂಗಾಯಿ ಕಟ್ಟೆಯಲ್ಲಿ ಸಂಪ್ರದಾಯದಂತೆ ಕುಂಟಾರು ರವೀಶ ತಂತ್ರಿಯವರು ಆರಂಭದಲ್ಲಿ ತೆಂಗಿನ ಕಾಯಿ ಒಡೆದರು, ಬಳಿಕ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವಪ್ರಸಾದ್ ಮತ್ತು ದೇವಳಕ್ಕೆ ಸಂಬಂಧಿಸಿ ಪ್ರಧಾನ ಅರ್ಚಕರು, ಪರಿಚಾರಕರೆಲ್ಲಾ ತೆಂಗಿನ ಕಾಯಿ ಹೊಡೆದರು.