ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಡಾ| ವಿಶುಕುಮಾರ್ ಗೌಡ ನಾಮಪತ್ರ ಸಲ್ಲಿಕೆ

0

ಪುತ್ತೂರು:ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಯಾಗಿ ಕೃಷಿ ವಿಜ್ಞಾನಿ ಡಾ|ವಿಶುಕುಮಾರ್ ಗೌಡ ಅವರು ಏ.17ರಂದು ನಾಮಪತ್ರ ಸಲ್ಲಿಸಿದರು.

ಬೆಳಿಗ್ಗೆ ಎಪಿಎಂಸಿ ಬಳಿಯ ಪಕ್ಷದ ಕಚೇರಿಯಿಂದ ಕಾರ್ಯಕರ್ತರೊಂದಿಗೆ ತಾಲೂಕು ಆಡಳಿತ ಸೌಧದ ತನಕ ಮೆರವಣಿಗೆಯಲ್ಲಿ ತೆರಳಿ ಬಳಿಕ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ಗಿರೀಶ್ ನಂದನ್ ಅವರಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಡಾ|ವಿಶುಕುಮಾರ್ ಗೌಡ, ಅವರ ಪತ್ನಿ ಡಾ.ವೀಣಾ ಟಿ.ಎಚ್., ದ.ಕ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪುರುಷೋತ್ತಮ್ ಗೌಡ ಕೋಲ್ಪೆ, ಚುನಾವಣೆ ಉಸ್ತುವಾರಿ ಜನಾರ್ದನ್ ಬಂಗೇರ, ಮಾಜಿ ಸರ್ಕಾರಿ ಅಭಿಯೋಜಕ ಉದಯಶಂಕರ್ ಜೊತೆಗಿದ್ದರು. ಮೆರವಣಿಗೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ ಸಹಿತ ಹಲವಾರು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಜಕೀಯ ಆಂದೋಲನ: ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಎಡಮಲೆ ಅವರು ಮಾತನಾಡಿ ನಾವು ಪಕ್ಷದ ಸದಸ್ಯತ್ವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ಆಮ್ ಆದ್ಮಿ ಪಕ್ಷ ಜನಸಾಮಾನ್ಯರ ಪಕ್ಷ. ಇದು ಒಂದು ರಾಜಕೀಯ ಆಂದೋಲನ. ಕಾರ್ಯಕರ್ತರೇ ನಮ್ಮ ಆಸ್ತಿ.ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ ಮತ್ತು ಸ್ವಚ್ಛ ಆಡಳಿತ ನಮ್ಮ ಧ್ಯೇಯವಾಗಿದೆ. ಕರ್ನಾಟಕದಲ್ಲಿ ಜನರಿಗೆ ಈ ಮೊದಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮಾತ್ರ ಆಯ್ಕೆಯಾಗಿತ್ತು. ಈ ಪಕ್ಷಗಳ ದುರಾಡಳಿತ ನೋಡಿದ ಮತದಾರರಿಗೆ ಬೇರೆ ಆಯ್ಕೆ ಇರಲಿಲ್ಲ.ಈ ಬಾರಿ ಆಮ್ ಆದ್ಮಿ ಪಕ್ಷ ಉತ್ತಮ ಆಯ್ಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಚುನಾವಣಾ ಪ್ರಚಾರಕ್ಕೆ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಬರಲಿದ್ದಾರೆ.ಜೊತೆಗೆ ಡಿಜಿಟಲ್ ಮಾಧ್ಯಮದ ಮೂಲಕ ಪ್ರಚಾರ ನಡೆಸಲಿದ್ದೇವೆ ಎಂದರು.

ಭ್ರಷ್ಟಾಚಾರ ರಹಿತ ಆಡಳಿತ

ನಾಮಪತ್ರ ಸಲ್ಲಿಕೆಯ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅಭ್ಯರ್ಥಿ ಡಾ.ವಿಶುಕುಮಾರ್ ಗೌಡ ಅವರು, ಪುತ್ತೂರಿನಲ್ಲಿ ಸರಕಾರಿ ಮಡಿಕಲ್ ಕಾಲೇಜು ಸ್ಥಾಪನೆಗೆ ಆದ್ಯತೆ, ಅಡಕೆ ಹಳದಿ ರೋಗ ತಡೆಗೆ ಉನ್ನತ ಮಟ್ಟದ ಸಂಶೋಧನೆ, ತೆಂಗಿನಕಾಯಿಗೆ ಬೆಂಬಲ ಬೆಲೆ ಮತ್ತು ಉತ್ಪನ್ನಗಳ ರಫ್ತು ಘಟಕ ಸ್ಥಾಪನೆ, ರಬ್ಬರ್ ಉತ್ಪನ್ನಗಳ ಉತ್ಪಾದನೆಗೆ ಉತ್ತೇಜನ, ಸಿದ್ಧ ಉಡುಪುಗಳ ಉತ್ಪಾದನಾ ಘಟಕ ಸ್ಥಾಪನೆ, ಹೈನುಗಾರಿಕೆಗೆ ಉತ್ತೇಜನ ಮತ್ತು ಪಶು ಆಹಾರ ಉತ್ಪಾದನಾ ಘಟಕ ಸ್ಥಾಪನೆ, ಸಾವಯವ ಗೊಬ್ಬರ ಉತ್ಪಾದನಾ ಘಟಕ ಸ್ಥಾಪನೆ, ಅಸಂಘಟಿತ ಕಾರ್ಮಿಕರಿಗೆ ಸರಕಾರಿ ಸೌಲಭ್ಯ ಕಲ್ಪಿಸುವುದು ಎಂಬ ಪ್ರಮುಖ ಅಂಶಗಳ ಪ್ರಣಾಳಿಕೆಗಳನ್ನು ಒಳಗೊಂಡ ನಮ್ಮ ಪಾರ್ಟಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಲಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here