ಪುತ್ತೂರು: 2022-23ನೇ ಸಾಲಿನ ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕಲಾ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಪಿಯು ಕಾಲೇಜಿನ ಮಂಜುಶ್ರೀ ಕೆದಂಬಾಡಿ 591 ಅಂಕಗಳಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.ಇವರು ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ತೀರ್ಥರಾಮ, ಸಂದ್ಯಾ ಪುತ್ರಿ.
ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸತ್ಯ ಸಾಯಿ ಲೋಕ ಸೇವಾ ಪಿಯು ಕಾಲೇಜಿನ ಯೋಗೇಶ್ ತುಕರಾಮ್ ಬಡಚಿ 594 ಮತ್ತು ಮೂಡಬಿದ್ರೆ ಆಳ್ವಾಸ್ ಪಿಯು ಕಾಲೇಜಿನ ಪ್ರಚಿತ ಎಂ 594 ಅಂಕಗಳಿಸುವ ಮೂಲಕ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಮೂಡಬಿದಿರೆಯ ಎಕ್ಸಲೆಂಟ್ ಪಿಯು ಕಾಲೇಜಿನ ಖುಷಿ ಬಾಗಲಕೋಟೆ, ಮಂಗಳೂರಿನ ವಿಕಾಸ್ ಪಿಯು ಕಾಲೇಜಿನ ಸ್ವಾತಿ ಪೈ, ಮೂಡಬಿದಿರೆ ಆಳ್ವಾಸ್ ಕಾಲೇಜಿನ ಕೆ ದಿಶಾ ರಾವ್ 596 ಅಂಕಗಳಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಪರೀಕ್ಷೆ ಬರೆದ 7.27 ಲಕ್ಷ ವಿದ್ಯಾರ್ಥಿಗಳ ಪೈಕಿ 5.24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾವಾರು 74.64 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಲಾ ವಿಭಾಗದಲ್ಲಿ 61.22 ಶೇ., ವಿಜ್ಞಾನ ವಿಭಾಗದಲ್ಲಿ 85.71 ಶೇ., ವಾಣಿಜ್ಯ ವಿಭಾಗದಲ್ಲಿ 75.89 ಶೇ., ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ. 95ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ, ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
ಕಲಾ ವಿಭಾಗದಲ್ಲಿ ಬೆಂಗಳೂರು ಜಯನಗರದ ಎನ್ಎಂಕೆಆರ್ವಿ ಕಾಲೇಜಿನ ತಬಸ್ಸುಮ್ ಶೇಕ್ 600ರಲ್ಲಿ 593 ಅಂಕಗಳಿಸುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಅನನ್ಯ 600ರಲ್ಲಿ 600 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಕೋಲಾರದ ಜ್ಞಾನಗಂಗೋತ್ರಿ ಕಾಲೇಜಿನ ಕೌಶಿಕ್ ಎಸ್ ಮತ್ತು ಬೆಂಗಳೂರಿನ ಆರ್ವಿ ಪಿಯು ಕಾಲೇಜಿನ ಸುರಭಿ ಎಸ್ 596 ಅಂಕಗಳನ್ನು ಪಡೆದು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.