





?️ರಾಧಾಕೃಷ್ಣ ಎರುಂಬು



ಪ್ರಧಾನಿಯವರ ಮನ್ ಕಿ ಬಾತ್ ಕಾರ್ಯಕ್ರಮದ ಎಸಳೊಂದರಲ್ಲಿ ಮಕ್ಕಳಿಗೆ ಕಥೆ ಹೇಳುವುದು ರೂಢಿಯಾಗಬೇಕೆಂಬ ಮಾತು ಕೇಳಿ ನೆನಪಾದುದು ನನ್ನಜ್ಜಿ ನನಗೆ ದಿನಾ ಸಶೇಷದಲ್ಲಿ ನಿಲ್ಲಿಸಿ ಮರುದಿನ ಮುಂದುವರಿಸುತಿದ್ದ ಕಥೆಗಳು.ಇಂದಿನ ಮೂರ್ಖರ ಪೆಟ್ಟಿಗೆಯಲ್ಲಿನ ದಾರವಾಹಿಗಳಂತೆ ಸಂಸಾರ ವಿಭಜನೆಯಂತಹ ಕಥೆಗಳಲ್ಲ . ಒಂದಷ್ಟು ಶೃಂಗಾರ, ಬೀಬತ್ಸ, ಕರುಣಾ…. ಹೀಗೆ ನವರಸಗಳ ಹೊಂದಿಸಿಕೊಂಡು ಸಾಗುತಿದ್ದವು. ಯಾವುದಾದರೂ ನೈತಿಕ ಮೌಲ್ಯಗಳೊಂದಿಗೆ ಮುಗಿಯುತ್ತಿದ್ದವು. ಆಶ್ಚರ್ಯವೆಂದರೆ ಅವುಗಳೆಲ್ಲದರ ಸೃಷ್ಟಿ ಅವರ ಅಜ್ಜಿಯ ಕಥೆಗಳಿಂದಾಗಿತ್ತು ಎಂದಿದ್ದರು ನನ್ನಜ್ಜಿಯವರು.





ವಾಸ್ತವಿಕತೆಯಂತಿದ್ದ ಅಜ್ಜಿಕತೆಗಳಲ್ಲಿರುವ ಗುಣವಾಗುಣಗಳನ್ನು ವಿಶ್ಲೇಷಿಸಿ ನಮ್ಮಲ್ಲೂ ಅಳವಡಿಸಿಕೊಳ್ಳಬೇಕು ಎನ್ನುವಷ್ಟು ಪರಿಣಾಮ ಬೀರಿತ್ತು. ಅವುಗಳನ್ನು ನಮಗೆ ಪಾಠ ಮಾಡಿದಂತೆ ಮಾಡಿರಲಿಲ್ಲ ಮತ್ತು ಪರೀಕ್ಷೆ ನಡೆಸಿರಲಿಲ್ಲ ಆದರೂ ನೆನಪಿನಂಗಳದಲ್ಲಿ ಹಸಿರಾಗಿವೆ.ಅದನ್ನೇ ಅನಕ್ಷರಸ್ಥ ಹಿಂದಿನ ಬಂದುಗಳೆಷ್ಟು ಗಾಢವಾಗಿ ನಂಬಿದ್ದರೆಂದರೆ ಅಧರ್ಮಕ್ಕೆ ದೇವರ ಕೃಪೆಯಿಲ್ಲ ಎಂಬಷ್ಟು. ಯಾವಾಗ ಕಾವಲಿಗೆ ವ್ಯವಸ್ಥೆ ಜಾಸ್ತಿಯಾಯಿತೋ ಅಂದು ವ್ಯಕ್ತಿಗತ ಜವಾಬ್ದಾರಿ ಕಡಿಮೆಯಾಗಿ ಅಧರ್ಮ ಹೆಚ್ಚಾಯಿತು.ಆದರೆ ಅಂತಹ ಕಥೆಗಳೆಲ್ಲ ಅಜ್ಜಿಯರೊಂದಿಗೆ ಮಣ್ಣಾಗಿ ವ್ಯಥೆಯಾಗಿದುದನ್ನು ನೆನೆದಾಗ ಬೇಸರವಾಗಿದೆ. “ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರ ” ಎಂಬುದೊಂದು ಆಡು ಮಾತು ಆದರೆ ನೇಪತ್ಯದಲ್ಲಿ ಸಂಸ್ಕಾರವಂತರಾಗಿ ಬಾಳುವವರೇ ಅವರು. ಪ್ರಸ್ತುತ ಮಾಧ್ಯಮ ಎಲ್ಲಾ ರಂಗದಲ್ಲೂ ಬಲು ಕ್ರಾಂತಿ ಮಾಡಿದೆಯಾದರೂ ಬಹುತೇಕ ಸಂಬಂಧಗಳನ್ನು ಬಲಿ ತೆಗೆದುಕೊಂಡಿದೆ ಎಂಬುದೇ ಭಯಾನಕ. ಮಕ್ಕಳನ್ನು ಯಾವುದಾದರೂ ಕ್ಷೇತ್ರದಲ್ಲಿ ಸಾಧಕರನ್ನಾಗಿಸುವ ಭರದಲ್ಲಿ ತನ್ನ ತಿಳುವಳಿಕೆ ಸಾಲದೆನ್ನುವ ನೆಪವೊಡ್ಡಿ ಯಾರಲ್ಲೋ ಬಿಡುತ್ತೇವೆ.ಅತ್ತ ಪ್ರೀತಿಯು ಇಲ್ಲದೆ ಇತ್ತ ಮೌಲ್ಯಗಳನ್ನೂ ನೀಡದ ಇಂತಹ ವ್ಯಕ್ತಿತ್ವ ಸಮಾಜಕ್ಕೆ ಹಣವನ್ನು ಬಿಟ್ಟು ಏನನ್ನಾದರೂ ಕೊಡಲು ಸಾಧ್ಯವಾದೀತು.
ಕೃಷಿಯಲ್ಲಿ ಆಧುನಿಕತೆ ಅನಿವಾರ್ಯವಾಗಿ ಬಂತು ಆದರೆ ಹಿಂದಿದ್ದ ಸಾಂಪ್ರದಾಯಿಕ ಆಚರಣೆಗಳು ಆಧುನಿಕತೆ ಕಾಣಬಾರದಿತ್ತು. ಅಲ್ಲಿ ಸಂಬಂಧಗಳ ಬೆಸೆಯುವ ಸಂಸ್ಕಾರವಿತ್ತು, ಬಿಡಲಾಗದ ನಂಬಿಕೆ ಗೌರವ ಉಳಿಯುತಿತ್ತು. ಸರ್ವ ರೀತಿಯಲ್ಲೂ ಮಮತೆ ತೋರಿ ದಾರಿ ತೋರುವ ಮಾತೆ ಮನೆ ಬಿಟ್ಟು, ತನ್ನ ಶ್ರಮವನ್ನು ಗಳಿಕೆಗಾಗಿ ವಿನಿಯೋಗಿಸಲು ತೋಡಗಿದಳೋ, ಮನೆಯ ಮಕ್ಕಳು ಪ್ರೀತಿ, ಬದುಕಿನ ಮೌಲ್ಯವರಿಯದೆ ಅನಾಥವಾದವು. ಮಕ್ಕಳ ಬಾಲ್ಯ ಯಾವುದೋ ಕೊಠಡಿಯ ಮದ್ಯೆ ನಿಭಂದನೆಗಳ ಜತೆ ಸಾಗಿದವು. ಇಲ್ಲವೇ ಬಾಲಿಶವನ್ನು ಯಾರಲ್ಲಾದರೂ ಹಣ ಕೊಟ್ಟು ನೀಡಲಾಯಿತು. ಆ ಮಕ್ಕಳು ನಮ್ಮ ವೃದ್ದಾಪ್ಯವನ್ನು ಹಣಕೊಟ್ಟು ಆಶ್ರಮಕ್ಕೆ ನೀಡುವುದರಲ್ಲಿ ತಪ್ಪೇನಿದೆ. “ತಾಯಿ ತಾನೆ ಮೊದಲ ಗುರು ” ಎನ್ನುತ್ತೇವೆ, ಹೆಣ್ಣಿಗೆ ಹೆಣ್ತನದ ಬೋಧನೆಯನ್ನು ಎರಡು ತಲೆಮಾರಿನ ಹಿಂದೆಯೇ ನಿಲ್ಲಿಸಿದ್ದೇವೆ. ಜನ್ಮ ನೀಡಿ ಮರುಹುಟ್ಟು ಪಡೆವ ಮಾತೆಯ ನೋವಿಗೆ ತತ್ಸಮಾನ ವ್ಯವಸ್ಥೆ ಬಂದಿದೆ, ಇಲ್ಲವಾದರೆ ಆ ನೋವು ತಡೆಯುವ ಧೀ ಶಕ್ತಿ ಈಗಿನ ತಲೆಮಾರಿಗಿದೆಯೇ ಎಂಬುದೇ ಕಾಡುವ ಪ್ರಶ್ನೆ. ಅದಾಗಿರಲಿ ಅಲ್ಲಿಂದಲೇ ವಿಷಯುಕ್ತ ಔಷದಿ ಆಹಾರ ಜೊತೆಗೆ ಆಧುನಿಕತೆಯ ಆರಂಭ. ಮಗುವಿನ ಪಾಲನೆಯೂ ಹಾಗೇ ಎಲ್ಲವೂ ಆಸಕ್ತಿಯದ್ದಲ್ಲ ಅನಿವಾರ್ಯತೆಯಿಂದ ಸಾಗುತ್ತದೆ. ಇದರಿಂದ ದೇಹ, ಬಲವಿಲ್ಲದೆ ಕೊಬ್ಬಿತು, ಆಯುಷ್ಯ ಅರ್ಧಕ್ಕಿಳಿಯಿತು.ಅಲ್ಲದೆ ಧನ ಸಂಪಾದನೆಯ ನೆಪ ನೈಸರ್ಗಿಕತೆಯ ಸಂಪನ್ಮೂಲಗಳ ಕಸಿದು ಇಂದು ಹಸಿರಿಲ್ಲದೆ ಶುಷ್ಕವಾಗಿಸಿದೆ.
ಸಂಸ್ಕಾರವಿಲ್ಲದೆ ಬದುಕಿಲ್ಲ ಬಂಧುವೇ, ಇದ್ದರೂ ತಿರುಳಿಲ್ಲದ, ಹಸಿರಿಲ್ಲದ, ಹಸಿವಿಲ್ಲದ ನೀರವ ಬದುಕಾಗುತ್ತದೆ. ನಾಳೆಯ ಭಯ ಕಾಡ ತೊಡಗಿದೆ. ಮತ್ತೆ ಹಿಂದಿನ ಬದುಕಿಗೆ ಸಾಗಲಾದೀತೇ ಯೋಚಿಸು…







