ಗುರೂಜಿಯ ಸರಳ ನಿರಾಡಂಬರ ಜೀವನ ಕ್ಷೇತ್ರದ ಬೆಳವಣಿಗೆಗೆ ಪೂರಕ: ಮಾಣಿಲ ಶ್ರೀ
ಕ್ಷೇತ್ರದ ಬೆಳವಣಿಗೆಗೆ ಭಕ್ತಾಧಿಗಳ ಪಾತ್ರ ಮಹತ್ವದ್ದು: ಕಣಿಯೂರು ಶ್ರೀ
ಪ್ರತಿಯೋರ್ವನ ಬೆವರ ಹನಿಗೆ ಇಲ್ಲಿ ತಕ್ಕ ಬೆಲೆ ಸಿಕ್ಕಿದೆ: ಶ್ರೀ ಶ್ರೀಕೃಷ್ಣ ಗುರೂಜಿ
ವಿಟ್ಲ: ಗುರೂಜಿಯ ಸರಳ ನಿರಾಡಂಬರ ಜೀವನ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿದೆ. ಗ್ರಾಮಸ್ಥರ ಸಹಕಾರದಿಂದ ಕ್ಷೇತ್ರ ಈ ಮಟ್ಟಕ್ಕೆ ಬೆಳಗಲು ಕಾರಣವಾಗಿದೆ. ಕ್ಷೇತ್ರದಲ್ಲಿ ನನಗೆ ಪ್ರಥಮವಾಗಿ ಮಾಡಿದ ಸನ್ಮಾನ ಮಾಣಿಲದ ಅಭ್ಯುದಯಕ್ಕೆ ರಹದಾರಿಯಾಗಿದೆ. ಕಳೆದ ಹೋದ ದಿನಗಳನ್ನು ನೆನೆಯುವ ಕೆಲಸವಾಗಬೇಕು ಎಂದು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ರವರು ಹೇಳಿದರು.
ಅವರು ಎ.26ರಂದು ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ ನಡೆದ ಶ್ರೀ ದೇವಿಯ ದೃಡಕಲಶಾಭಿಷೇಕದ ಬಳಿಕ ನಡೆದ ಅಭಿನಂದನಾ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಕ್ಷೇತ್ರದಲ್ಲಿ ಇನ್ನಷ್ಟು ಧಾರ್ಮಿಕ ಕಾರ್ಯಕ್ರಮಗಳಾಗಲಿ. ಧಾರ್ಮಿಕ ಕ್ಷೇತ್ರಗಳು ಸಮಾಜದ ಸಂಪತ್ತು. ನಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವ ಜಾಣ್ಮೆ ನಮ್ಮಲ್ಲಿರಬೇಕು. ದೇವಾಲಯಗಳಿಂದ ಜಾತಿ ದೂರವಿರಬೇಕು. ದೇವಾಲಯಗಳಿಗೆ ಜಾತಿಯ ಸೂತ್ರ ಬೇಡ. ನಮ್ಮ ಹೃದಯ ಶುದ್ಧಿ ಮುಖ್ಯ. ನಮ್ಮ ಭಾವನೆ , ಧರ್ಮ ಒಂದಾಗಲಿ. ಇತರರನ್ನು ಪ್ರೀತಿಸುವ ಗುಣವೇ ಧರ್ಮಕಾರ್ಯ. ಜೀವನದಲ್ಲಿ ಒಳಿತು- ಕೆಡುಕುಗಳಿವೆ. ಅದರಲ್ಲಿ ಒಳಿತನ್ನು ಕಾಣುವ ಮನಸ್ಸು ನಮ್ಮದಾಗಬೇಕು. ಮಣ್ಣಿನ ಗುಣ ಮಹತ್ವದ್ದಾಗಿದೆ. ವಿರೋಧಿಗಳನ್ನು ಪ್ರೀತಿಸುವ ಗುಣ ನಮ್ಮಲ್ಲಿರಬೇಕು. ಅದುವೆ ನಮ್ಮ ಯಶಸ್ಸಿನ ಗುರಿಯಾಗಿದೆ. ಗುರುಗಳ ದೃಷ್ಟಿಕೋನ ಒಂದೇ. ನಾವು ಯಾವುದೇ ಕ್ಷಣದಲ್ಲಿಯೂ ದೃತಿಕೆಡುವುದಿಲ್ಲ. ಸದೃಡ ಸಮಾಜ ಕಟ್ಟುವಲ್ಲಿ ನಾವೆಲ್ಲರೂ ಒಂದೆ ಎಂದರು.
ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿರವರು ಆಶೀರ್ವಚನ ನೀಡಿ ದೃಡಕಲಶದ ಸಂಭ್ರಮದ ಕ್ಷಣದಲ್ಲಿ ನಾವುದ್ದೇವೆ. ದೇವಾಲಯಗಳಲ್ಲಿ ಭಕ್ತಿ ಭಾವದ ಪ್ರಾರ್ಥನೆ ಸಲ್ಲಬೇಕು. ಕ್ಷೇತ್ರದ ಬೆಳವಣಿಗೆಗೆ ಭಕ್ತಾಧಿಗಳ ಪಾತ್ರ ಮಹತ್ವದ್ದು. ಶಕ್ತಿಯ ಪ್ರಕಾಶತೆಗೆ ಅಂತ:ಶಕ್ತಿ ಮುಖ್ಯ. ದೇವರಿಗೆ ಕರ್ಮ, ಧರ್ಮ ಸಮರ್ಪಣೆ ಅಗತ್ಯ. ಇನ್ನಷ್ಟು ಧರ್ಮ ಕಾರ್ಯ ಮಾಡುವ ಶಕ್ತಿ ಗುರೂಜಿಗೆ ನೀಡಲಿ ಎಂದರು.
ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿರವರು ಆಶೀರ್ವಚನ ನೀಡಿ ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ.ಜಾತಿ ಧರ್ಮಕ್ಕೂ ಮೀರಿದ ಕಾರ್ಯಕ್ರಮ ಇಲ್ಲಿ ನಡೆದುಹೋಗಿದೆ. ಎಲ್ಲಾ ಭಕ್ತ ಸಮೂಹದ ಸಹಕಾರ ನಿರಂತರ ಕ್ಷೇತ್ರಕ್ಕೆ ಬೇಕಾಗಿದೆ. ಇಲ್ಲಿ ಪ್ರತಿಯೋರ್ವನ ಬೆವರ ಹನಿಗೆ ತಕ್ಕ ಬೆಲೆಸಿಕ್ಕಿದೆ. ಪೂಜೆಯಷ್ಟೇ ಮೌಲ್ಯ ಅನ್ನ ಪ್ರಸಾದಕ್ಕೂ ಇದೆ. ನಾನು ಎಂಬುದು ಏನಿಲ್ಲ, ನಮ್ಮದೆನ್ನುವುದು ಎಲ್ಲವೂ. ಎಲ್ಲರನ್ನು ಒಟ್ಟು ಸೇರಿಸಿಕೊಂಡು ಹೋಗುವ ಮನಸ್ಸು ನಮ್ಮದಾಗಬೇಕು. ಯಾರನ್ನು ಹೀಯಾಳಿಸದೆ ಸತ್ ಧರ್ಮದಿಂದ ಮುಂದುವರೆಯೋಣ. ಕುಕ್ಕಾಜೆ ಕ್ಷೇತ್ರ ನಮ್ಮದೆನ್ನುವ ಪ್ರೀತಿಯಿಂದ ಇನ್ನಷ್ಟು ಸಹಕಾರ ನೀಡಿ ಎಂದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕ್ಷೇತ್ರದ ಮೊಕ್ತೇಸರರಾದ ಎಂ.ಕೆ.ಕುಕ್ಕಾಜೆರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯಶೋಧರ ಬಂಗೇರ ಅಳಿಕೆರವರು ಧಾರ್ಮಿಕ ಉಪನ್ಯಾಸ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಡಾ. ಗೀತಪ್ರಕಾಶ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಕಾರಾಜೆ, ಕಾರ್ಯದರ್ಶಿ ಶ್ರೀಧರ ಬಾಳೆಕಲ್ಲು, ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಪ್ರೀಯಾ ಶಾಮಿಯಾನದ ಮಾಲಕ ಬಾಬು ಕೊಪ್ಪಳ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಪ್ರವೀಣ್ ಸಣ್ಣಗುತ್ತು ಅಳಿಕೆ, ಕೋಶಾಧಿಕಾರಿ ಕೃಷ್ಣಪ್ಪ ಪೂಜಾರಿ ಎಂ.ಕುಕ್ಕಾಜೆ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಕೃಷ್ಣಪ್ಪ ತಾರಿದಳ, ಜಗನ್ನಾಥ ರೈ ಕೆಳಗಿನ ಮನೆ, ವಲಯ ಸಮಿತಿ ಅಧ್ಯಕ್ಷ ಸುಧಾಕರ ಪೂಜಾರಿ ಕೇಪು, ಸೇವಾಸಮಿತಿ ಅಧ್ಯಕ್ಷ ರವಿ ಕುಟ್ಯಮಡ್ಕ, ಮಹಿಳಾ ಸಂಘದ ಅಧ್ಯಕ್ಷರಾದ ಅನುರಾಧ ಪಳನೀರು, ಕೆ.ಎಫ್.ಸಿ. ಮಾಣಿಲದ ಅಧ್ಯಕ್ಷರಾದ ಹರಿಪ್ರಸಾದ್ ಕಾಮಜಾಲು, ಭಜರಂಗದಳ ಮಾಣಿಲ ವಲಯ ಸಂಚಾಲಕ ಉದಯಕುಮಾರ್ ಶೆಟ್ಟಿ ಸಾಯ, ಕೆ.ಟಿ. ಪೂಜಾರಿ ಬೆಂಗಳೂರು, ಬ್ರಹ್ಮಶ್ರೀ ವಿವಿದೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಸಂಜೀವ ಪೂಕಾರಿ ನಿಡ್ಯ, ವಿಶ್ವನಾಥ ಪೂಜಾರಿ ಪೆರುವಾಯಿ, ತೋಡಿಕ್ಕಾನ ಅಬ್ದುಲ್ಲ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ‘ಪುಣ್ಯ ಕ್ಷೇತ್ರ ಕುಕ್ಕಾಜೆ’ ಧ್ವನಿ ಸುರುಳಿ ಬಿಡುಗಡೆಗೊಂಡಿತು.
ಬ್ರಹ್ಮಕಲಶದ ಯಶಸ್ಸಿಗೆ ಸಹಕರಿಸಿದ ಸಮಿತಿ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎಂ.ಕೃಷ್ಣಪ್ಪ ಕುಕ್ಕಾಜೆರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ರವಿ ಎಂ.ಎಸ್.ಸಂಟನಡ್ಕ ಕಾರ್ಯಕ್ರಮ ನಿರೂಪಿಸಿದರು. ಎಸ್.ನಾರಾಯಣ ಕನ್ನಡ ಗುಳಿ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶ್ರೀಧರ ಬಾಳೆಕಲ್ಲು ವಂದಿಸಿದರು.