ಪುತ್ತೂರು: ನಾನು ಹಣಮಾಡಬೇಕು ಎಂಬ ಉದ್ದೇಶಕ್ಕೆ ರಾಜಕೀಯಕ್ಕೆ ಬಂದಿಲ್ಲ, ರಾಜಕೀಯಕ್ಕೆ ಬಂದು ಹಣ ಮಾಡಬೇಕೆಂಬ ಆಸೆಯೂ ಇಲ್ಲ. ಕಳೆದ 22 ವರ್ಷಗಳಿಂದ ಮಾಡಿದ ಸಮಾಜ ಸೇವೆ ಸಾರ್ಥಕವಾಗಿದೆ ಎಂಬ ಸಂತೋಷ ನನಗಿದೆ. ಅಭಿಮಾನಿಗಳು ಮತ್ತು ಕಾರ್ಯಕರ್ತರ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ. ಎಂದೆಂದಿಗೂ ನಿಮ್ಮ ಜೊತೆಯೇ ಇರುವೆ, ನಿಮ್ಮ ನೋವು ನಲಿವುಗಳಿಗೆ ಸದಾ ಸ್ಪಂದಿಸುವೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ಕುಮಾರ್ ರೈ ಸಭೆಯಲ್ಲಿ ನೆರೆದಿದ್ದ ನೂರಾರು ಮಂದಿ ಕಾರ್ಯಕರ್ತರಿಗೆ ವಾಗ್ದಾನ ಮಾಡಿದ್ದಾರೆ, ಈ ಮಾತುಗಳನ್ನಾಡುವ ವೇಳೆ ರೈಗಳು ಸ್ವಲ್ಪ ಹೊತ್ತು ಗದ್ಗದಿತರಾದರು.
ಸಭೆ ನಡೆದ ಬೆಟ್ಟಂಪಾಡಿ ಗ್ರಾಮದ ಇರ್ದೆ ಗಾಂಧಿ ಮೈದಾನದಲ್ಲಿ ಹಿಂದೆದೂ ಸೇರದ ರೀತಿಯಲ್ಲಿ ಸಾರ್ವಜನಿಕರು, ಕಾರ್ಯಕರ್ತರು ಸೇರಿದ್ದರು.
ಸಭೆಗೆ ನೆರೆದ ಜನರನ್ನು ಕಂಡು ಅಶೋಕ್ರೈ ಪುಲಕಿತರಾದಂತೆ ಕಂಡು ಬಂದರು. ನಾನು ಬಿಜೆಪಿ ಬಿಟ್ಟದ್ದು ಯಾಕೆ ಎಂದು ಕೆಲವರಿಗೆ ಗೊತ್ತಿಲ್ಲ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿಲ್ಲ. ನನ್ನ ಕಚೇರಿಗೆ ಸಾವಿರಕ್ಕೂ ಮಿಕ್ಕಿ ಬಡವರು ಅಕ್ರಮಸಕ್ರಮ, 94 ಸಿ ಅರ್ಜಿಯನ್ನು ನೀಡಿದ್ದರು. ಹೇಗಾದರೂ ಮಾಡಿ ನಮಗೆ ಈ ಅರ್ಜಿಯನ್ನು ವಿಲೇವಾರಿ ಮಾಡಿಸಿಕೊಡಿ, ನಮ್ಮಲ್ಲಿ ಹಣವಿಲ್ಲ, ಹಣ ಕೊಡದೇ ಇದ್ದರೆ ನಮ್ಮ ಅರ್ಜಿಗಳು ತಿರಸ್ಕಾರವಾಗಬಹುದು ಎಂದು ಹೇಳಿಕೊಂಡಿದ್ದರು. ಕಚೇರಿಗೆ ಬಂದ ಅರ್ಜಿಗಳೆಲ್ಲವೂ ಬಡವರದ್ದೇ ಆಗಿದ್ದವು. ನಾನು ಬಿಜೆಪಿಯಲ್ಲಿದ್ದ ಕಾರಣ ಪುತ್ತೂರಿನ ಶಾಸಕರು, ಬಿಜೆಪಿ ಅಧ್ಯಕ್ಷರಲ್ಲಿ ಈ ವಿಷಯ ತಿಳಿಸಿದ್ದೆ. ಆದರೆ ನಾನು ಕಳುಹಿಸಿಕೊಟ್ಟ ಒಂದೇ ಒಂದು ಅರ್ಜಿಯನ್ನು ಅವರು ಪರಿಗಣಿಸಿರಲಿಲ್ಲ. ಇದೇ ವಿಚಾರವನ್ನು ನಾನು ಪಕ್ಷದ ವೇದಿಕೆಯಲ್ಲಿ ತಿಳಿಸಿದ್ದೆ. ಆ ವೇಳೆ ಮಾಧ್ಯಮದವರೂ ಸಭೆಯಲ್ಲಿದ್ದರು. ಮಾಧ್ಯಮದ ಮುಂದೆ ವಿಚಾರ ತಿಳಿಸಿದ್ದರಿಂದ ಬಿಜೆಪಿ ಅಧ್ಯಕ್ಷರು ನನ್ನ ಮನ ನೋಯಿಸುವಂತೆ ಮಾತನಾಡಿದರು.
ಬಡವರ ಅರ್ಜಿಯನ್ನು ತಿರಸ್ಕಾರ ಮಾಡಿದ ಘಟನೆ ನನಗೆ ಆಘಾತವನ್ನುಂಟು ಮಾಡಿತ್ತು. ಇಂಥ ಪಕ್ಷದಲ್ಲಿ ನಾನಿರಲಾರೆ ಎಂದು ಬಿಜೆಪಿಯಿಂದ ಒಂದು ಕಾಲು ಆವಾಗಲೇ ಹೊರಗಿಟ್ಟು ಆ ಬಳಿಕ ನಾನು ಪೂರ್ತಿಯಾಗಿ ಹೊರಬಂದೆ. ನನಗೆ ಈ ಬಾರಿ ಆಶೀರ್ವಾದ ಮಾಡಿ, ಶಾಸಕನಾದ ಒಂದೇ ತಿಂಗಳಲ್ಲಿ ತಿರಸ್ಕಾರ ಮಾಡಿದ ಅರ್ಜಿಗಳು ಸೇರಿದಂತೆ ತಾಲೂಕಿನ ಎಲ್ಲಾ ಅಕ್ರಮ ಸಕ್ರಮ , 94 ಸಿ ಫೈಲುಗಳನ್ನು ಇತ್ಯರ್ಥ ಮಾಡಿ ಹಕ್ಕುಪತ್ರವನ್ನು ಅರ್ಜಿದಾರರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಅಶೋಕ್ ರೈ ಹೇಳಿದರು.
ಬಡವರ ರಕ್ತ ಹೀರುವ ಕೆಲಸವನ್ನು ಯಾರೂ ಮಾಡಬಾರದು. ಜನಪ್ರತಿನಿಧಿಯಾದವರು ಜನರ ಸೇವೆಯನ್ನು ಮಾಡಬೇಕೇ ಹೊರತು ಹಣ ಮಾಡುವ ಉದ್ದೇಶ ಇಟ್ಟುಕೊಳ್ಳಬಾರದು. ಬಡವರ ಶಾಪ ಬಹುಬೇಗನೇ ತಟ್ಟುತ್ತದೆ. ನನ್ನ ಕಚೇರಿಗೆ ಬಂದ ನೂರಾರು ಬಡವರು ಬಿಜೆಪಿಗರ ಹಣದ ದಾಹಕ್ಕೆ ಶಾಪ ಹಾಕಿ ಹೋಗಿದ್ದರು. ಬಿಜೆಪಿಗೆ ಬಡವರ ಶಾಪ ತಟ್ಟಿದೆ ಎಂದು ಹೇಳಿದರು. ನನ್ನನ್ನು ನಂಬಿ, ನಾನು ಇದುವರೆಗೂ ಚುನಾವಣಾ ಭಾಷಣದಲ್ಲಿ ಹೇಳಿದ ಎಲ್ಲಾ ವಿಚಾರಗಳನ್ನು ಮಾಡಿಯೇ ಮಾಡುತ್ತೇನೆ, ಹೇಳಿದ ಕೆಲಸ ಮಾಡದೇ ಇದ್ದರೆ ರಸ್ತೆಯಲ್ಲಿ ಹೋಗುವಾಗ ಕಾರಿಗೆ ಅಡ್ಡ ನಿಂತು ನನ್ನನ್ನು ಪ್ರಶ್ನಿಸಿ ಎಂದು ಮನವಿ ಮಾಡಿಕೊಂಡರು.
ಇದೇ ಸಂಧರ್ಭದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ವೇದಿಕೆಯಲ್ಲಿ ಕಾವು ಹೇಮನಾಥ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಹಿರಿಯ ಕಾಂಗ್ರೆಸ್ಸಿಗ ದೇವಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು. ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿ, ಸದಾಶಿವ ರೈ ವಂದಿಸಿದರು.