ಬಿಜೆಪಿ ಬೆಲೆ ಏರಿಕೆ ನೀತಿಯಿಂದ ಜನ ತತ್ತರಿಸಿಹೋಗಿದ್ದಾರೆ; ಅಶೋಕ್ ರೈ
ಪುತ್ತೂರು; ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬೆಲೆ ಏರಿಕೆ ದಿನೇ ದಿನೇ ಏರುತ್ತಲೇ ಇದು ಜನ ಸಾಮಾನ್ಯರನ್ನು ತತ್ತರಿಸುವಂತೆ ಮಾಡಿದ್ದು ಜನ ಏನೂ ಮಾಡಲಾಗದ ಸ್ಥಿತಿಯಲ್ಲಿ ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು.
ಮಾಜಿ ಬ್ಲಾಕ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಅವರ ನಿವಾಸದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರಕಾರವಿದ್ದಾಗ ಗ್ಯಾಸ್ ಬೆಲೆಯಲ್ಲಿ ಕೊಂಚ ಏರಿಕೆಯಾದಾಗ ರಸ್ತೆಗಿಳಿದು ಹೋರಾಟ ಮಾಡುತ್ತಿದ್ದ ಬಿಜೆಪಿಗರು ಈಗ ಎಲ್ಲಿದ್ದಾರೆ. ಪೆಟ್ರೋಲ್, ಡೀಸೆಲ್, ಆಹಾರ ಸಾಮಾಗ್ರಿ, ಅಡುಗೆ ಅನಿಲ, ಅಡುಗೆ ಎಣ್ಣೆ ಸೇರಿದಂತೆ ನಿತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಜನ ಕಂಗೆಟ್ಟಿದ್ದಾರೆ ಎಂದು ಹೇಳಿದರು.
ಬೆಲೆ ಏರಿಕೆಯ ವಿಚಾರದಲ್ಲಿ ಜನ ಪ್ರಶ್ನಿಸುವಾಗ ಧರ್ಮಗಳ ವಿಚಾರದಲ್ಲಿ ಮಾತನಾಡಿ ಗಮನ ಬೇರೆಡೆ ಸೆಳಯುವ ಪ್ರಯತ್ನ ಮಾಡುತ್ತಾರೆ. ಬೆಲೆ ಏರಿಕೆಯನ್ನು ಮರೆ ಮಾಚಲು ರಾಜ್ಯದಲ್ಲಿ ಬಿಜೆಪಿ ವಿವಿಧ ಧರ್ಮದ ಆಚಾರ ವಿಚಾರಗಳನ್ನು ಮುನ್ನೆಲೆಗೆ ತಂದಿತ್ತು. ತನ್ನ ದುರಾಡಳಿತದ ಕರಿಛಾಯೆಯನ್ನು ಮರೆಮಾಚಲು ಬಿಜೆಪಿ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದ ಅವರು ಜನ ಸಮಾನ್ಯ ನೆಮ್ಮದಿಯ ಬದುಕು ಕಾಣಬೇಕಾದರೆ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಿದೆ. ಬಿಜೆಪಿ ಸರಕಾರದ ಕೆಟ್ಟ ಆರ್ಥಿಕ ಧೋರಣೆಯೇ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ದೇಶದಲ್ಲಿ ಕಾಂಗ್ರೆಸ್ ಕೂಡಿಟ್ಟ ಸಂಪತ್ತನ್ನು ಬಿಜೆಪಿ ಒಂದೊಂದಾಗಿ ಮಾರಾಟ ಮಾಡುವ ಮೂಲಕ ದೇಶವನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ಆರೋಪಿಸಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ನಮಗೆ ಸಮರ್ಥ ಅಭ್ಯರ್ಥಿಯನ್ನೇ ನೀಡಿದ್ದು ಪ್ರತೀಯೊಬ್ಬರೂ ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು. ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು , ಕಾರ್ಯಕರ್ತರು ಉಪಸ್ಥಿತರಿದ್ದರು.