ಪುತ್ತೂರು: ಇತಿಹಾಸ ಪ್ರಸಿದ್ಧ ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮ ನಡಾವಳಿಯು ಎ.28ರಂದು ಪೂರ್ವ ಶಿಷ್ಟ ಸಂಪ್ರದಾಯದಂತೆ ನೆರವೇರುತ್ತಿದೆ.
ಎ.28 ರಂದು ಮುಂಜಾನೆ ದೈವಸ್ಥಾನದಲ್ಲಿ ಗಣಪತಿ ಹೋಮ ನಡೆದು ತಂತ್ರ ತೂಗಿದ ಬಳಿಕ ಶ್ರೀ ದಂಡನಾಯಕ ದೈವದ ವಾಲಸರಿ ನೇಮ ಆರಂಭಗೊಂಡು ಕಿರುವಾಳು ಭಂಡಾರ ವಾಲಸರಿ ಗದ್ದೆಗೆ ತೆರಳಿ, ದಂಡನಾಯಕ ದೈವದ ಮುಖಾಮುಖಿ, ವಾಲಸರಿ ಗದ್ದೆಯಲ್ಲಿ ದೈವದ ನೇಮ ನಡೆಯಿತು.
ಸಾವಿರಾರು ಮಂದಿ ಭಕ್ತರು ಗದ್ದೆಯ ಸುತ್ತಲೂ ನಿಂತು ಶ್ರೀ ದಂಡನಾಯಕ ದೈವದ ವಾಲಸರಿ, ನೇಮವನ್ನು ಕಣ್ತುಂಬಿಕೊಂಡರು. ನೇಮೋತ್ಸವದಲ್ಲಿ ಮುಂಜಾನೆಯಿಂದಲೇ ಭಕ್ತರು ತಂಡೋಪತಂಡವಾಗಿ ದೈವಸ್ಥಾನಕ್ಕೆ ಆಗಮಿಸಿ, ಉಳ್ಳಾಲ್ತಿಗೆ ಪ್ರಿಯವಾದ ಮಲ್ಲಿಗೆ ಹೂವು, ಕುಂಕುಮ, ಪಟ್ಟೆ ಸೀರೆ, ಸೀಯಾಳ ಅರ್ಪಿಸಿ ಪ್ರಸಾದ ಸ್ವೀಕರಿಸುತ್ತಿದ್ದಾರೆ.