ಚುನಾವಣೆ ಖರ್ಚಿಗೆಂದು ಯಾರಿಂದಲೂ ಹಣ ಪಡೆದುಕೊಂಡಿಲ್ಲ, ಪಡೆದುಕೊಳ್ಳುವುದೂ ಇಲ್ಲ: ಅಶೋಕ್ ರೈ
ಪುತ್ತೂರು:ಚುನಾವಣೆಯ ಖರ್ಚಿಗೆಂದು ನಾನು ಯಾವುದೇ ಉದ್ಯಮಿಗಳಿಂದ ಹಣ ಪಡೆದುಕೊಂಡಿಲ್ಲ ಮತ್ತು ಯಾರಿಂದಲೂ ಹಣ ಪಡೆದುಕೊಳ್ಳುವುದೂ ಇಲ್ಲ ,ತನ್ನ ದುಡಿಮೆಯ ಹಣದಿಂದಲೇ ನಾನು ಚುನಾವಣೆ ಖರ್ಚು ,ವೆಚ್ಚಗಳನ್ನು ನಿಭಾಯಿಸಲಿದ್ದೇನೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು.
ಮತ ಕೇಳಲು ಗ್ರಾಮಗಳಿಗೆ ಭೇಟಿ ನೀಡುವ ವೇಳೆ ರಾಜಕೀಯ ಪಕ್ಷದವರು ಚುನಾವಣೆ ಖರ್ಚಿಗೆಂದು ಹಣ ಕೊಡುವಂತೆ ಬಲವಂತ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿದಿದೆ. ಮತ ಕೇಳಲು ಮನೆಗಳಿಗೆ ತೆರಳಿದಾಗಲೂ ಮನೆಯ ಯಜಮಾನ ಮನೆಯೊಳಗಿದ್ದರೂ ಅವರಿಲ್ಲ ಎಂದು ಹೇಳುವ ಸ್ಥಿತಿಯನ್ನು ಕೆಲವರು ನಿರ್ಮಿಸಿದ್ದಾರೆ. ನಾನು ಯಾರಲ್ಲೂ ದುಡ್ಡು ಕೇಳುವುದಿಲ್ಲ ಮತ್ತು ನನ್ನ ಹೆಸರು ಹೇಳಿ ಯಾರಾದರು ಹಣ ಕೇಳಿದರೆ ಅವರಿಗೂ ಕೊಡಬೇಡಿ ಎಂದು ಮನವಿ ಮಾಡಿದರು. ನಾನು ಚುನಾವಣೆಗೆ ನಿಂತು ಇನ್ನೊಬ್ಬರಿಗೆ ಯಾಕೆ ತೊಂದರೆ ಕೊಡುವುದು. ಅದು ಸರಿಯಲ್ಲ ಎಂಬ ಪರಿಜ್ಞಾನ ಪ್ರತೀಯೊಬ್ಬ ಅಭ್ಯರ್ಥಿಯಲ್ಲೂ ಇರಬೇಕಿದೆ. ಸ್ವಂತ ಹಣವನ್ನೇ ಚುನಾವಣೆಗೆ ಖರ್ಚುಮಾಡಬೇಕೇ ವಿನ ಯಾರಿಗೂ ತೊಂದರೆ ಕೊಡಬಾರದು ಎಂದು ಹೇಳಿದರು.
ನಿಡ್ಪಳ್ಳಿ ಗ್ರಾಮದಲ್ಲಿ ನಮ್ಮ ಟ್ರಸ್ಟ್ ನ ಅನೇಕ ಫಲಾನುಭವಿಗಳಿದ್ದಾರೆ.ಈ ಭಾಗದ ಅನೇಕ ಜನರಿಗೆ ತನ್ನಿಂದಾದ ನೆರವು ಮಾಡಿದ್ದೇನೆ ನನ್ನ ಸೇವೆಯನ್ನು ಜನ ಮರೆತಿಲ್ಲ ಎಂಬುದನ್ನು ಸಭೆಯಲ್ಲಿ ಸೇರಿದ ಜನಸಮೂಹವೇ ಸಕ್ಷಿಯಾಗಿದೆ ಎಂದು ಹೇಳಿದರು
ಪುತ್ತೂರು ಅಭಿವೃದ್ದಿಯಾಗಬೇಕಾದರೆ ಇಲ್ಲಿ ಕಾಂಗ್ರೆಸ್ ನ ವ್ಯಕ್ತಿ ಶಾಸಕರಾಗಬೇಕು. ಕಳೆದ ಅನೇಕ ವರ್ಷಗಳಿಂದ ಇಲ್ಲಿ ನಮ್ಮ ಶಾಸಕರಿಲ್ಲದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗಿದ್ದು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.ಬ್ರಷ್ಟಾಚಾರವಿಲ್ಲದ, ಬಡವರ ಸ್ನೇಹಿ ಆಡಳಿತ ನಡೆಸಲು ಪ್ರತೀಯೊಬ್ಬರೂ ಆಶೀರ್ವದ ಮಾಡಬೇಕು ಎಂದು ಹೇಳಿದರು.
ಸರಕಾರಿ ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತಾಗಬೇಕು. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ಮೊದಲು ಪರಿಹರಿಸಬೇಕಿದೆ.ಶಾಸಕರಾಗಿ ಆಯ್ಕೆಯಾದಲ್ಲಿ ಎಲ್ಲಾ ಸರಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮವಹಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಶಿವಪ್ಪ ಪೂಜಾರಿ ನಿಡ್ಪಳ್ಳಿ, ಎಂಎಸ್ ಮಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.