ಭಾಗೀರಥಿ ಮುರುಳ್ಯ ಪರ ಜೆ.ಪಿ.ನಡ್ಡಾ ಪ್ರಚಾರ ಸಭೆ ; ಪಿ.ಎಫ್.ಐ. ನಿಷೇಧಿಸಿದ ಬಿಜೆಪಿ ಸರ್ಕಾರ ಬೇಕೇ ಅಥವಾ ಅದನ್ನು ಬೆಂಬಲಿಸುವ ಕಾಂಗ್ರೆಸ್ ಬೇಕೇ : ನಡ್ಡಾ ಪ್ರಶ್ನೆ

0

ಸುಳ್ಯ : ಕರ್ನಾಟಕ ರಾಜ್ಯಕ್ಕೆ ಪಿ.ಎಫ್.ಐ. ನಿಷೇಧಿಸಿದ ಬಿಜೆಪಿ ಸರಕಾರ ಬೇಕೇ ಅಥವಾ ಅದಕ್ಕೆ ಬೆಂಬಲ ನೀಡುವ ಕಾಂಗ್ರೆಸ್ ಸರಕಾರ ಬೇಕೇ ಎಂದು ಜನರು ನಿರ್ಧರಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.‌

ಅವರು ಸುಳ್ಯದ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಸುಳ್ಯ ಮಂಡಲದ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಎ.30ರಂದು ಸಂಜೆ ನಡೆದ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಮತಾಂಧ ಶಕ್ತಿಗಳಾದ ಪಿ.ಎಫ್.ಐ.ಯನ್ನು ನಿಷೇಧಿಸಿದ ಕೀರ್ತಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರಕ್ಕೆ ಸಲ್ಲುತ್ತದೆ. ಆದರೆ ಸಿದ್ಧರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪಿ.ಎಫ್.ಐ. ಮೇಲಿನ ನಿಷೇಧವನ್ನು ಹಿಂಪಡೆಯುತ್ತೇವೆ ಎನ್ನುತ್ತಿದ್ದಾರೆ. ಸಿದ್ಧರಾಮಯ್ಯ ಸರಕಾರ ಇರುವಾಗ ಹಲವಾರು ಹಗರಣಗಳು ನಡೆದಿವೆ. ಡಿ.ಕೆ. ಶಿವಕುಮಾರ್ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರೆಲ್ಲ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ನಡ್ಡಾ ಲೇವಡಿ ಮಾಡಿದರು.‌

ಕೇಂದ್ರ ಸರಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ರೈತರ ಖಾತೆಗೆ ಕಿಸಾನ್ ವಿಮೆ ಹಾಕುತ್ತಿದ್ದು, ಪ್ರಧಾನಮಂತ್ರಿ ಆವಾಜ್ ಯೋಜನೆ, ಆಯುಷ್ಮಾನ್ ಭಾರತ್, ಗರೀಬ್ ಕಲ್ಯಾಣ್ ಯೋಜನೆ, ಸ್ವಚ್ಛತಾ ಅಭಿಯಾನ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ದೇಶದ ಜನರಿಗೆ ನೀಡುತ್ತಿದೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರಕಾರ ಹಾಗೂ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರ ಸರಕಾರ ಇರಬೇಕು. ಎರಡೂ ಡಬಲ್ ಇಂಜಿನ್ ಪವರ್ ಪುಲ್ ಸರಕಾರದಿಂದ ಮಾತ್ರ ಕರ್ನಾಟಕ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಜೆ.ಪಿ. ನಡ್ಡಾ ಹೇಳಿದರು. ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಲುವಾಗಿ ಕರ್ನಾಟಕದಲ್ಲಿ ಮೀಸಲಾತಿಯಲ್ಲಿ ಮಹತ್ತರ ಬದಲಾವಣೆ ತರುವ ಮೂಲಕ ರಾಜ್ಯ ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಸಚಿವ ಅಂಗಾರರು ತಮ್ಮ ಸಂಪೂರ್ಣ ಸಹಕಾರವನ್ನು ಭಾಗೀರಥಿ ಅವರಿಗೆ ನೀಡುತ್ತಿದ್ದಾರೆ. ಸುಳ್ಯದಲ್ಲಿ ಈ ಬಾರಿ ಮಹಿಳಾ ಅಭ್ಯರ್ಥಿಗೆ ಪಕ್ಷ ಅವಕಾಶ ಕಲ್ಪಿಸಿಕೊಟ್ಟಿದೆ. ಅವರನ್ನು ಅತ್ಯಂತ ದೊಡ್ಡ ಬಹುಮತಗಳಿಂದ ಗೆಲ್ಲಿಸುವ ಜವಾಬ್ದಾರಿ ಬಿಜೆಪಿಯ ಕಾರ್ಯಕರ್ತರು ತೆಗೆದುಕೊಳ್ಳಬೇಕು ಎಂದು ಜೆ.ಪಿ. ನಡ್ಡಾ ಹೇಳಿದರು.

30 ವರ್ಷಗಳಿಂದ ಅಭಿವೃದ್ಧಿ ಮಾಡಿದ್ದೇವೆ : ಸಚಿವ ಎಸ್. ಅಂಗಾರ ಮಾತನಾಡಿ ಕಳೆದ 30 ವರ್ಷಗಳಿಂದ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಸವಾಲುಗಳನ್ನು ಸ್ವೀಕಾರ ಮಾಡಿಕೊಂಡು ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸವನ್ನು ಬಿಜೆಪಿ ಮಾಡಿದೆ. ಇದರ ಮಧ್ಯೆ ಬೇರೆ ಬೇರೆ ರೀತಿಯ ಅಪಪ್ರಚಾರಗಳಿವೆ, ಬಹಿಷ್ಕಾರಗಳಿವೆ. ಎಲ್ಲದರ ಮಧ್ಯೆ ಕ್ಷೇತ್ರದ ಅಭಿವೃದ್ಧಿ ಕೆಲಸವನ್ನು 76 ಗ್ರಾಮದಲ್ಲಿ ಮಾಡಿದ್ದೇವೆ. ಈ ಬಾರಿ ಭಾಗೀರಥಿ ಅವರನ್ನು ನಾವೆಲ್ಲರು ಬಹುಮತದಿಂದ ಗೆಲ್ಲಿಸಬೇಕು. ಮುಂಬರುವ ಒಂಭತ್ತು ದಿನಗಳಲ್ಲಿ ಶತಾಯ ಗತಾಯ ಕೆಲಸ ಮಾಡಿ ಪಕ್ಷದ ವಿಜಯಕ್ಕೆ ಕೆಲಸ ಮಾಡಬೇಕು ಎಂದು ಅಂಗಾರರು ಹೇಳಿದರು.

ಸುಳ್ಯ ಬಿಜೆಪಿಯ ಭದ್ರ ಕೋಟೆ : ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ ಮಾತನಾಡಿ, ಕಳೆದ ಮೂರು ದಶಕದಿಂದ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಸುಳ್ಯ ಬಿಜೆಪಿಯ ಭದ್ರಕೋಟೆ ಎಂಬುದನ್ನು ಕಾರ್ಯಕರ್ತರು ತೋರಿಸಿ ಕೊಟ್ಟಿದ್ದಾರೆ. ನಮ್ಮೆಲ್ಲರ ಸರ್ವೋಚ್ಚ ನಾಯಕ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಬಾಯಿಯಿಂದ ಶಹಬ್ಬಾಸ್ ಗಿರಿ ಪಡೆದ ಕ್ಷೇತ್ರ ಸುಳ್ಯವಾಗಿದೆ. ಇಲ್ಲಿನ ಮತದಾರರು ಅತ್ಯಂತ ಹೆಚ್ಚಿನ ಬಹುಮತಗಳಿಂದ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಹೇಳಿದರು.

ದೊಡ್ಡ ಅಂತರದ ಗೆಲುವು: ಸುಳ್ಯ ಬಿಜೆಪಿ ಮಂಡಲ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ ಅವರು ಸ್ವಾಗತಿಸಿ ಮಾತನಾಡಿ, 2023ರ ಚುನಾವಣೆಯಲ್ಲಿ ಭಾಗೀರಥಿ ಮುರುಳ್ಯ ಅವರನ್ನು ಪಕ್ಷ ಕಣಕ್ಕಿಳಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಯ ಆಧಾರದಲ್ಲಿ ಬಿಜೆಪಿ ಸುಳ್ಯದಲ್ಲಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದೆ. ಹಳ್ಳಿ ಹಳ್ಳಿಗಳಲ್ಲಿ ಸಾಧನೆ ಮಾಡಿದ ಸಚಿವ ಅಂಗಾರರ ಸಾಧನೆಗಳನ್ನು ನೋಡಿ ಮತದಾರರು ಬಿಜೆಪಿ ಅಭ್ಯರ್ಥಿಗೆ ಮತ ನೀಡಲಿದ್ದಾರೆ. ಈ ಬಾರಿ ಸುಮಾರು 78 ಮಂದಿ ಯುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಭಾಗೀರಥಿ ಅವರನ್ನು 35 ಸಾವಿರಕ್ಕಿಂತ ಅಧಿಕ ಮತಗಳಿಂದ ಗೆಲ್ಲಿಸುವಂತೆ ಕರೆ ನೀಡಿದರು.

ವೇದಿಕೆಯಲ್ಲಿ ಕಣ್ಣೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಹರಿದಾಸ್, ಸುಳ್ಯ ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ. ತೀರ್ಥರಾಮ, ಯುವಮೋರ್ಚಾ ಜಿಲ್ಲಾಧ್ಯಕ್ಷ ಗುರುದತ್ ನಾಯ್ಕ್, ಬುಡಿಯಾರ್ ರಾಧಾಕೃಷ್ಣ ರೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ಪ್ರಧಾನ ಕಾರ್ಯದರ್ಶಿಗಳಾದ ಸುಭೋದ್ ಶೆಟ್ಟಿ ಮೇನಾಲ, ಉಪಸ್ಥಿತರಿದ್ದರು. ಸುಭೋದ್ ಶೆಟ್ಟಿ ಮೇನಾಲ ವಂದಿಸಿದರು. ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ನಾಯಕರ ಭಾಷಣದ ವೇಳೆ ಸಭಾ ಸ್ಥಳದಲ್ಲಿ ಕೆಲವು ಪೊಲೀಸರಿಗೂ ಕಾರ್ಯಕರ್ತರಿಗೂ ಮಾತಿನ ಚಕಮಕಿ ನಡೆಯಿತು. ಹರೀಶ್ ಕಂಜಿಪಿಲಿ, ಮುಳಿಯ ಕೇಶವ ಭಟ್ ಮತ್ತಿತರರು ಬಂದು ಸಮಾಧಾನಿಸಿದರು.

ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ: ಅಭ್ಯರ್ಥಿ ಭಾಗೀರಥಿ ಮುರುಳ್ಯ ಮಾತನಾಡಿ ಭಾರತೀಯ ಜನತಾ ಪಾರ್ಟಿಯು ಅತ್ಯಂತ ಬಡ ಕುಟುಂಬದಿಂದ ಬಂದ ನನ್ನನ್ನು ಅಭ್ಯರ್ಥಿಯಾಗಿ ಮಾಡಿದ್ದು, ಇದರ ಹೆಮ್ಮೆ ಬಿಜೆಪಿಗೆ ಸಲ್ಲುತ್ತದೆ. ಇಲ್ಲಿ ವ್ಯಕ್ತಿ ಮುಖ್ಯವಲ್ಲ. ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪ್ರತಿಯೊಂದು ಕಾರ್ಯಕರ್ತರು ತನ್ನನ್ನು ತಾನು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

LEAVE A REPLY

Please enter your comment!
Please enter your name here