ಪುತ್ತೂರು:ಫೈನಾನ್ಸ್ನಿಂದ ಪಡೆದ ಸಾಲ ಮರುಪಾವತಿಗೆ ನೀಡಿದ್ದ ಚೆಕ್ ಅಮಾನ್ಯಗೊಂಡ ಪ್ರಕರಣದಲ್ಲಿ ಕಳೆದ 9 ವರ್ಷಗಳಿಂದ ನ್ಯಾಯಾಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಗೆ ಪುತ್ತೂರು ನ್ಯಾಯಾಲಯ ದಂಡ ಸಹಿತ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪಾಣೆಮಂಗಳೂರು ಬೊಳಂಗಡಿ ಹೊಸಮನೆ ನಿವಾಸಿ ರಾಜೇಶ್ ಎಂಬವರು 9 ವರ್ಷಗಳ ಹಿಂದೆ ಪುತ್ತೂರಿನ ಶ್ರೀರಾಮ್ ಫೈನಾನ್ಸ್ನ ಬಂಟ್ವಾಳ ಶಾಖೆಯಿಂದ ವಾಹನ ಸಾಲ ಪಡೆದಿದ್ದರು. ಸಾಲದ ಮರುಪಾವತಿಗೆಂದು ನೀಡಿದ್ದ ಚೆಕ್ ಅಮಾನ್ಯಗೊಂಡಿದ್ದಾಗಿ 2014ರಲ್ಲಿ ಶ್ರೀರಾಮ್ ಫೈನಾನ್ಸ್ನವರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಯುತ್ತಿದ್ದ ಸಂದರ್ಭ ಆರೋಪಿ ರಾಜೇಶ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ನ್ಯಾಯಾಲಯ ಆರೋಪಿ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ಪುತ್ತೂರು ನಗರ ಪೊಲೀಸರು ಆರೋಪಿಯನ್ನು ಮೇ 2ರಂದು ಬೊಳಂಗಡಿಯ ಮನೆಯಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಯು ಸಂಸ್ಥೆಗೆ ರೂ. 1.31 ಲಕ್ಷ ನೀಡಬೇಕು ಮತ್ತು 6 ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ತೀರ್ಪು ನೀಡಿದೆ.