18ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ದತ್ತಿನಿಧಿ ಕಾರ್ಯಕ್ರಮದ ಸಮಾರೋಪ

0


ಉಪ್ಪಿನಂಗಡಿ: ಈ ನೆಲದೊಂದಿಗೆ ಸಂಪರ್ಕ ಕಡಿತಗೊಳ್ಳುತ್ತಿರುವ ಜೀವನವು ಸಾಹಿತ್ಯ ಸಹಿತ ಎಲ್ಲಾ ಕ್ಷೇತ್ರಕ್ಕೂ ಸಮಸ್ಯೆಯನ್ನು ತಂದುಕೊಡಬಹುದಾಗಿದೆ. ಸೂರ್ಯೋದಯ ಹಾಗೂ ಸೂರ್ಯಾಸ್ತಮಾನವನ್ನೇ ಪ್ರಕೃತಿ, ಪರಿಸರ ಎಂದು ಭ್ರಮಿಸಿರುವ ಇಂದಿನ ಜನ ಸಮೂಹ ಮಣ್ಣಿನ ಒಡನಾಟವನ್ನು ಕಳೆದುಕೊಳ್ಳುತ್ತಿದ್ದು, ಅದರಿಂದಾಚೆ ಪ್ರಕೃತಿ ಇದೆ ಎನ್ನುವುದನ್ನೇ ಮರೆತಂತಿದೆ. ಇದು ಬದುಕಿನ ಎಲ್ಲಾ ಆಯಾಮಗಳನ್ನು ತಲ್ಲಣಗೊಳಿಸಲಿದೆ ಎಂದು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ವರದಾಜ ಚಂದ್ರಗಿರಿ ಪ್ರತಿಪಾದಿಸಿದರು.

ನೆಲದೊಂದಿಗಿನ ಸಂಪರ್ಕ ಕಡಿತ ಸಮಸ್ಯೆಗೆ ದಾರಿ- ಡಾ.ವರದರಾಜ ಚಂದ್ರಗಿರಿ
ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ 18ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ದತ್ತಿ ನಿಧಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡುತ್ತಿದ್ದರು.


ಸಾಹಿತ್ಯದ ಪ್ರತಿ ಮಜಲೂ ಪ್ರಕೃತಿಯ ಒಡನಾಟದಿಂದ ರೂಪಿತವಾಗಿದೆ. ಪ್ರಕೃತಿಯೊಂದಿಗೆ ಆಳವಾಗಿ ಬೆರೆತಾಗ ಹೊರ ಹೊಮ್ಮುವ ಭಾವನೆಗಳೇ ಸಾಹಿತ್ಯಗಳಾಗಿ ಮೂಡಿ ಬಂದಿರುವುದಾಗಿದೆ. ಅದಕ್ಕಾಗಿ ಎಳೆ ಮನಸ್ಸುಗಳು ಪ್ರಕೃತಿಯೊಂದಿಗಿನ ನಂಟನ್ನು ಭಾವನಾತ್ಮಕವಾಗಿ ಬೆಳೆಸಿಕೊಳ್ಳಬೇಕು. ಪ್ರಕೃತಿಯನ್ನು ಅಸ್ವಾದಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಪುಸ್ತಕ ಓದುವ ಹವ್ಯಾಸವನ್ನು ಜೀವನದಲ್ಲಿ ರೂಪಿಸಿಕೊಂಡರೆ ಅದು ಬದುಕಿಗೆ ಹೊಸತನವನ್ನು – ಚೈತನ್ಯವನ್ನು ಸದಾ ಒದಗಿಸುತ್ತದೆ ಎಂದು ತಿಳಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಪುತ್ತೂರು ಘಟಕದ ಅಧ್ಯಕ್ಷರಾದ ಉಮೇಶ್ ನಾಯಕ್‌ರವರು, ಎಳೆಯ ಮನಸ್ಸುಗಳನ್ನು ಸಾಹಿತ್ಯದತ್ತ ಸೆಳೆಯಲು ಮತ್ತು ಎಳೆಯ ಮನಸ್ಸುಗಳಲ್ಲಿ ಸುಪ್ತವಾಗಿರುವ ಸಾಹಿತ್ಯದ ಪ್ರತಿಭೆಗಳನ್ನು ಅರಳಿಸಲು ಕನ್ನಡ ಸಾಹಿತ್ಯ ಪರಿಷತ್ ಕಾರ್ಯೋನ್ಮುಖವಾಗಿದೆ. ಈ ನಿಟ್ಟಿನಲ್ಲಿ 18ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ದತ್ತಿ ನಿಧಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಡೆಸಲು ತೀರ್ಮಾನಿಸಿರುವುದಾಗಿ ತಿಳಿಸಿದರಲ್ಲದೆ, ಉಪ್ಪಿನಂಗಡಿಯಲ್ಲಿ ಸಾಹಿತ್ಯಾಸಕ್ತರ ತಂಡ ರಚಿಸಿಕೊಂಡು ಸಾಹಿತ್ಯ ಕೃಷಿಗೆ ಪ್ರೋತ್ಸಾಹ ನೀಡುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯ ಯು.ಎಲ್. ಉದಯ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹರಿಣಾಕ್ಷಿ, ಜೆಸ್ಸಿ ಪಿ.ವಿ. , ಪುಷ್ಪಲತಾ ತಿಲಕ್, ಸುಚಿತ್ರಾ ಹೊಳ್ಳ, ಮೈತ್ರಿ ಟಿ. ನೆಸ್, ಬಸವರಾಜೇಶ್ವರಿ ದಿಡ್ಡಿಮನಿ, ವಿಶಾಖ , ಸುನಿತಾ, ಮಲ್ಲಿಕಾ ಭಟ್, ಶೀಲಾ, ನಂದೀಶ್ ಮೊದಲಾದವರು ಭಾಗವಹಿಸಿದ್ದರು. ದತ್ತಿ ನಿಧಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಪ್ರಬಂಧ ಸ್ಪರ್ಧೆ ಹಾಗೂ ಗೀತ ಗಾಯನ ಸ್ಪರ್ಧೆಯ ವಿಜೇತರಿಗೆ ಈ ಸಂದರ್ಭ ಬಹುಮಾನವನ್ನು ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಸ್ವಾಗತಿಸಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರವಿರಾಜ್ ವಂದಿಸಿದರು. ಉಪನ್ಯಾಸಕಿ ವೀಣಾ ಪ್ರಸಾದ್ ಕಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here