ಪುತ್ತೂರು: ಭಕ್ತರು ಇಷ್ಟಾರ್ಥಗಳ ಈಡೇರಿಕೆಗೆ ಮತ್ತು ಕಾರ್ಯ ಸಿದ್ಧಿಗಾಗಿ ಆರಂಭದಲ್ಲಿ ದೇವರಿಗೆ ಸಂಕಲ್ಪ ಮಾಡುವುದು, ಕಾರ್ಯ ನೆರವೇರಿದರೆ ಪೂಜೆ ಪುರಸ್ಕಾರ ಮಾಡುವುದು ಸಾಮಾನ್ಯ. ಆದರೆ ಕಾರ್ಯ ನೆರವೇರುವ ಮೊದಲು ಮತ್ತು ಕಾರ್ಯ ಮುಗಿದ ಬಳಿಕವೂ ಪೂಜೆ ಮಾಡುವ ಮೂಲಕ ದೇವರಿಗೆ ಕೃತಜ್ಞತೆ ಸಮರ್ಪಣೆ ಮಾಡುವ ವಿಶೇಷ ಸೇವೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣಶೋತ್ಸವ ಸಮಿತಿಯಿಂದ ನಡೆಯುತ್ತಿದೆ.
ಹಲವು ವರ್ಷಗಳಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಆರಂಭದ ಒಂದು ದಿನ ಮೊದಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಗಣಪತಿಗೆ ಭಕ್ತಿಯಿಂದ ಮೂರು ದಿನ ಗಣೇಶೋತ್ಸವ ನಿರ್ವಿಘ್ನವಾಗಿ ನಡೆಯುವಂತೆ ಪ್ರಾರ್ಥಿಸಿ ರಂಗಪೂಜೆ ನೆರವೇರಿಸಲಾಗುತ್ತದೆ. ಗಣೇಶೋತ್ಸವ ಮುಗಿದು ಒಂದಷ್ಟು ಸಮಯದ ಬಳಿಕ ಮಹಾಗಣಪತಿಗೆ ಮತ್ತೊಮ್ಮೆ ರಂಗಪೂಜೆ ನೆರವೇರಿಸಿ ಕೃತಜ್ಞತೆ ಸಲ್ಲಿಸುವ ವಿಶೇಷ ಕಾರ್ಯಕ್ರಮ ನಡೆಯುತ್ತದೆ. ಈ ಬಾರಿ ಮೇ 31ರಂದು ಸಂಜೆ ರಂಗಪೂಜೆ ನಡೆಯಿತು.
ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎಂ.ಕೆ.ಪ್ರಸಾದ್, ಅಧ್ಯಕ್ಷ ಶಶಾಂಕ್ ಕೊಟೇಚಾ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಕೋಶಾಧಿಕಾರಿ ಶ್ರೀನಿವಾಸ್, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರಾಮಚಂದ್ರ ಕಾಮತ್, ನೀಲಂತ್ ಬೊಳುವಾರು, ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಸುಜೀಂದ್ರ ಪ್ರಭು, ಭಾಮಿ ಅಶೋಕ್ ಶೆಣೈ, ಜಗದೀಶ್ ಶೆಣೈ, ವಿಶ್ವನಾಥ ಗೌಡ ಬನ್ನೂರು, ಶೇಖರ್ ಬನ್ನೂರು, ಸಹಜ್ ರೈ ಬಳಜ್ಜ, ಅಜಿತ್ ಕುಮಾರ್ ರೈ ಹೊಸಮನೆ, ಉದಯ ಹೆಚ್., ಜಯಶ್ರೀ ಶೆಟ್ಟಿ ಸಹಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ದಿನೇಶ್ ಪಂಜಿಗ ದಂಪತಿ ಪೂಜೆಗೆ ಕುಳಿತರು. ಅರ್ಚಕ ವೇ.ಮೂ ಜಯರಾಮ ಜೋಯಿಸ ವೈದಿಕ ಕಾರ್ಯಕ್ರಮ ನಿರ್ವಹಿಸಿದರು.