ಪುತ್ತೂರು: ದೇವರ ಹತ್ತಿರ ಧರ್ಮದ ಮಾತು ನಡೆಯುವುದಿಲ್ಲ. ಪ್ರೀತಿ, ಭಕ್ತಿ, ವಾತ್ಸಲ್ಯ ಮತ್ತು ನಾನು ನಿನ್ನ ಸೇವಕ ಅನ್ನುವ ಮಾತುಗಳನ್ನು ಮನನ ಮಾಡಬೇಕು. ಇಲ್ಲದಿದ್ದರೆ ತಪ್ಪು ಅರ್ಥ ಆಗುತ್ತದೆ. ತಪ್ಪು ಅರ್ಥವಾದರೆ ದೇವರು ಮತ್ತು ಭಗವದ್ಗೀತೆಯು ಜವಾಬ್ದಾರಿಯಲ್ಲ. ಇಲ್ಲಿ ನಮ್ಮ ಮನನದ ಕೊರತೆ ಕಾರಣ. ಈ ನಿಟ್ಟಿನಲ್ಲಿ ಮನನದ ಪ್ರಾಮುಖ್ಯತೆಯನ್ನು ಮರೆಯಬಾರದು ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರು ಹೇಳಿದರು.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೂ.12ರಂದು ಸಂಜೆ ನಡೆದ, ಧಾರ್ಮಿಕ ಶಿಕ್ಷಣ ಬೋಧನೆಯ 2ನೇ ಹಂತದ ಪಠ್ಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಧಾರ್ಮಿಕ ಶಿಕ್ಷಣದ ಬೋಧನೆಯಲ್ಲಿ ಶ್ಲೋಕ ಹೇಳುವುದು ಸರಿ. ಮನನದ ಪ್ರಾಮುಖ್ಯತೆ ಇರಲಿ. ಹೇಳಿ ಕೊಟ್ಟವರು ಮನನ ಮಾಡಬೇಕು. ಇದು ಅವರ ಜವಾಬ್ದಾರಿ. ಮನನ ಮಾಡದಿದ್ದರೆ ಬೇರೆ ರೀತಿಯ ತಪ್ಪು ಅರ್ಥಗಳು ಹೋಗುತ್ತವೆ ಎಂದರು. ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಸಾಂಕೇತಿಕ ಪುಸ್ತಕ ವಿತರಣೆ ಮಾಡಿದರು.
ಹಿಂದು ಸನಾತನ ಧರ್ಮವನ್ನು ಎಲ್ಲರೂ ಅರ್ಥೈಸಬೇಕು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಹಿಂದು ಧರ್ಮದ ವಿಶೇಷತೆಯನ್ನು ಮಕ್ಕಳಿಗೆ ತಿಳಿಸುವ ಕಾರ್ಯ ಧಾರ್ಮಿಕ ಶಿಕ್ಷಣದ ಮೂಲಕ ನಡೆಯುತ್ತಿದೆ. ಮಕ್ಕಳಲ್ಲಿ ಎಲ್ಲರು ನಮ್ಮವರೇ ಎಂಬ ಭಾವನೆ ಬೆಳೆಸುವುದು. ಹಿಂದು ಸನಾತನ ಧರ್ಮವನ್ನು ಎಲ್ಲರು ಅರ್ಥೈಸುವಂತೆ ಮಾಡುವುದು. ಇದನ್ನು ಕೊಡಲು ನಮಗೆ ಸಾಧ್ಯವಾದರೆ ನಾವು ಧನ್ಯರು ಎಂದರು. ವೇದಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ರಾಮದಾಸ್ ಗೌಡ, ಬಿ.ಕೆ.ವೀಣಾ, ಶೇಖರ್ ನಾರಾವಿ ಉಪಸ್ಥಿತರಿದ್ದರು.ಧಾರ್ಮಿಕ ಶಿಕ್ಷಣದ ಸಂಯೋಜಕ ಸತೀಶ್ ಭಟ್ ಅವರು ಪಠ್ಯ ಪುಸ್ತಕದ ವಿತರಣೆಯ ನಿರ್ವಹಣೆ ಮಾಡಿದರು.ಸಭೆಯಲ್ಲಿ ಬೋಧಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.