ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆಗೆ ಲಂಚದ ಆರೋಪಕ್ಕೆ ಖಂಡನೆ-ಶವಾಗಾರ ನೌಕರರಿಂದ ಪ್ರತಿಭಟನೆ

0

ಪುತ್ತೂರು: ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಆಕಸ್ಮಿಕ ಮರಣಗಳಿಗೆ ನಡೆಸಲಾಗುತ್ತಿರುವ ಮರಣೋತ್ತರ ಶವ ಪರೀಕ್ಷೆ ಸಂದರ್ಭ ಇಲ್ಲಿನ ಸಿಬ್ಬಂದಿಗಳು ಅನಧಿ ಕೃತವಾಗಿ ಹಣ ವಸೂಲಿ ಮಾಡುತ್ತಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ವ್ಯಕ್ತವಾದ ಆರೋಪವನ್ನು ಖಂಡಿಸಿ ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಶವಾಗಾರದ ಸಿಬ್ಬಂದಿ ಜೂ. 17ರಂದು ಕೆಲ ಕಾಲ ಕರ್ತವ್ಯ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.


ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಶವಾಗಾರದ ಸಿಬ್ಬಂದಿ ಸುಧಾಕರ್ ಅವರು, ನಾವು ಸಾರ್ವಜನಿಕರು ಕೊಟ್ಟ ದುಡ್ಡನ್ನು ತೆಗೆದುಕೊಳ್ಳುತ್ತೇವೆ ನಿಜ, ಯಾಕೆಂದರೆ ನಮಗೆ ಅಲ್ಪಸ್ವಲ್ಪ ಸಂಬಳ ಇರುವುದು. ಕಳೆದ 23 ವರ್ಷಗಳಿಂದ ಇಲ್ಲಿ ನಾವು ದುಡಿಯುತ್ತಿದ್ದೇವೆ. ಆದರೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಲಂಚಕೋರರು ಎಂದು ಸಂಘಟನೆಯೊಂದು ದೂರು ನೀಡಿದ್ದು, ಪತ್ರಿಕೆಯಲ್ಲಿ ವರದಿಯಾಗಿದೆ. ಅದೇ ಬೇಸರದಿಂದ ಇಂದು ಪೋಸ್ಟ್ ಮಾರ್ಟಂ ಮಾಡುವುದಿಲ್ಲ ಎಂದು ನಿರ್ಧರಿಸಿದ್ದೇವೆ. ನಾವು ರಾತ್ರಿ 2,3 ಗಂಟೆಯಾದರೂ ಬರ್ತೇವೆ. ಎಷ್ಟೋ ದಿನಗಳಿಂದ ಕೊಳೆತ ಮೃತದೇಹಗಳನ್ನು ಕೂಡ ಪೋಸ್ಟ್ ಮಾರ್ಟಂ ಮಾಡಿ ನೀಡ್ತೇವೆ. ಈ ವೇಳೆ ಜನರು ಕೊಟ್ಟದ್ದನ್ನು ತೆಗೆದುಕೊಳ್ತೇವೆ ಹೊರತು ನಾವೇ ಕೇಳಿ ತೆಗೆದುಕೊಳ್ಳುವುದಿಲ್ಲ. ಇದ್ದಬದ್ದವರಿಗೆಲ್ಲಾ ಪೋಸ್ಟ್ ಮಾರ್ಟಮ್ ಮಾಡಲು ಸಾಧ್ಯವಿಲ್ಲ, ಕಲಿತವರೇ ಮಾಡಬೇಕು. ಅನಾವಶ್ಯಕವಾಗಿ ಆರೋಪ ಮಾಡಿದರೆ ನಾವು ಕೇಳುವುದಿಲ್ಲ. ಆರೋಪಗಳ ಬಗ್ಗೆ ಶಾಸಕರಿಗೆ ಪತ್ರ ಹೋಗಿತ್ತು. ಆ ಬಳಿಕ ಶಾಸಕರು ಬಂದು ಮಾತುಕತೆ ನಡೆಸಿದ್ದರು. ಎಲ್ಲಾ ಆದ ಮೇಲೆ ಇವರು ಪತ್ರಿಕೆಗಳಲ್ಲಿ ನೀಡಿರುವುದು ಸರಿಯೇ? ನಿಜವಾಗಿಯೂ ನಮಗೆ ಪೋಸ್ಟ್ ಮಾರ್ಟಂ ಮಾಡುವ ಅಧಿಕಾರವಿಲ್ಲ, ನಾವು ಡಿ ಗ್ರೂಪ್ ಹೊರಗುತ್ತಿಗೆ ನೌಕರರು. ಆದರೂ ಮಾನವೀಯತೆಯ ನೆಲೆಯಲ್ಲಿ 23 ವರ್ಷಗಳಿಂದ ಈ ಕೆಲಸ ಮಾಡುತ್ತಾ ಬರುತ್ತಿದ್ದೇವೆ ಎಂದು ಹೇಳಿದರು.


ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈಯವರು, ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಡಿಗ್ರೂಪ್ ನೌಕರರ ತಂಡ ಪೋಸ್ಟ್ ಮಾರ್ಟಮ್ ಕರ್ತವ್ಯ ನಿರ್ವಹಿಸುತ್ತಿದೆ. ೩ ಮಂದಿ ಪೋಸ್ಟ್ ಮಾರ್ಟಂ ಮಾಡುವ ನೌಕರರು, ಇಬ್ಬರು ಸಹಾಯಕರಿದ್ದಾರೆ. ನಮ್ಮಲ್ಲಿ ಡಿ ಗ್ರೂಪ್ ನೌಕರರ ಹುದ್ದೆ ಖಾಲಿಯಿದೆ. 34 ಹುದ್ದೆಗಳ ಪೈಕಿ ಇಬ್ಬರು ಮಾತ್ರ ಇದ್ದಾರೆ. ಕೆಲವೊಮ್ಮೆ ರಾತ್ರಿ ವೇಳೆಯೂ ಇವರು ಕರ್ತವ್ಯ ನಿರ್ವಹಿಸುತ್ತಾರೆ. ಇದಕ್ಕೆ ಅವರಿಗೆ ಸಿಗುವ ಸಂಭಾವನೆ ಬಹಳ ಕಡಿಮೆ. ಆರೋಗ್ಯ ರಕ್ಷಾ ಸಮಿತಿ ಅನುದಾನದಿಂದ ಪ್ರತೀ ಪೋಸ್ಟ್‌ಮಾರ್ಟಮ್‌ಗೆ ಇಂತಿಷ್ಟು ಎಂದು ಮೊತ್ತವನ್ನು ನೀಡಬೇಕು ಎಂಬ ಪ್ರಸ್ತಾವನೆಯನ್ನು ಸಹಾಯಕ ಆಯುಕ್ತರು, ಶಾಸಕರಿಗೆ ನೀಡಲಾಗಿದೆ. ಪೋಸ್ಟ್ ಮಾರ್ಟಂ ಮಾಡುವ ವೈದ್ಯರಿದ್ದರೂ ಸಹಾಯಕರಾಗಿ ಇವರ ಸೇವೆ ಬೇಕು. ಇದು ನೈಪುಣ್ಯತೆಯ ಕೆಲಸ. ಇದಕ್ಕಾಗಿ ನಾವು ನೌಕರರ ಜೊತೆಗಿದ್ದೇವೆ ಎನ್ನುವ ಭರವಸೆಯನ್ನು ನಾವು ನೀಡಿದ್ದೇವೆ. ಇದರ ಜೊತೆಗೆ ಪತ್ರಿಕೆಯ ವರದಿಯಲ್ಲಿ ಸಿಬ್ಬಂದಿ ಮತ್ತು ವೈದ್ಯರು ಎನ್ನುವುದಾಗಿ ಉಲ್ಲೇಖವಾಗಿರುವುದು ತಪ್ಪು. ಯಾಕೆಂದರೆ ಪುತ್ತೂರು ಸರಕಾರಿ ಆಸ್ಪತ್ರೆ ಜಿಲ್ಲೆಯಲ್ಲೇ ಹೆಸರು ಪಡೆದಿರುವ ಆಸ್ಪತ್ರೆ. ಅದಕ್ಕೆ ಕಳಂಕ ತರುವ ವಿಚಾರವಾಗಿದೆ. ಇದು ನಮಗೂ ಬೇಸರ ತಂದಿದೆ. ಲಂಚ ತೆಗೆದುಕೊಂಡವರ ಬಗ್ಗೆ ದಾಖಲೆ ಸಮೇತ ದೂರು ನೀಡುವುದು ಸರಿ. ಆದರೆ ಎಲ್ಲರನ್ನೂ ಒಂದೇ ಗುಂಪಿನಲ್ಲಿ ಸೇರಿಸಿ ಲಂಚಕೋರರು ಎಂದು ಹೇಳುವುದನ್ನು ನಾವು ಕೂಡ ಒಪ್ಪುವುದಿಲ್ಲ. ಯಾಕೆಂದರೆ ಇಲ್ಲಿ ವೈದ್ಯರು, ಸಿಬ್ಬಂದಿ ಲಂಚ ಪಡೆಯದೆ ಕೆಲಸ ಮಾಡ್ತಿದ್ದಾರೆ. ಈ ಆರೋಪವನ್ನು ವಾಪಸ್ ಪಡೆಯಬೇಕು. ನಮ್ಮ ನೌಕರರ ಜೊತೆಗೆ ನಾವು ನಿಲ್ಲುತ್ತೇವೆ. ಆಧಾರರಹಿತ ಆಪಾದನೆಯನ್ನು ಯಾರೂ ಮಾಡಬಾರದು. ಈ ನಿಟ್ಟಿನಲ್ಲಿ ನಾವು ನೌಕರರ ಜೊತೆಗೆ ಮಾತುಕತೆ ನಡೆಸಿದ್ದು, ಕರ್ತವ್ಯ ಮುಂದುವರೆಸುವಂತೆ ಹೇಳಿದ್ದೇವೆ. ಅದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಬಳಿಕ ಶವಾಗಾರದ ನೌಕರರು ಪ್ರತಿಭಟನೆ ವಾಪಸ್ ಪಡೆದು ತಮ್ಮ ಕರ್ತವ್ಯ ಮುಂದುವರೆಸಿದರು.

LEAVE A REPLY

Please enter your comment!
Please enter your name here