ಪುತ್ತೂರು: ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಜಿಯವರ 62ನೇ ಜನ್ಮದಿನದ ಅಂಗವಾಗಿ ಶ್ರೀ ಗುರುದೇವ ಸೇವಾ ಬಳಗ, ಗ್ರಾಮ ವಿಕಾಸ ಯೋಜನೆ, ಒಡಿಯೂರು ಸಹಕಾರಿ ಸಂಘ, ರೋಟರಿ ಕ್ಲಬ್ ಪುತ್ತೂರು ಸಿಟಿ, ಲಯನ್ಸ್ ಕ್ಲಬ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ನ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಜೂ.25ರಂದು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಭಾರತೀಯ ರೆಡ್ ಕ್ರಾಸ್ ಪುತ್ತೂರು ಘಟಕದ ಸಭಾಪತಿ ಸಂತೋಷ್ ಶೆಟ್ಟಿ ಮಾತನಾಡಿ, ರಕ್ತಕ್ಕೆ ಪರ್ಯಾಯ ವಸ್ತು ಬೇರೊಂದಿಲ್ಲ. ಇದು ಜಾತಿ, ಪಂಗಡ, ಧರ್ಮ ಇತಿಮಿತಿ ಇಲ್ಲದೆ ಜೀವ ಉಳಿಸುವ ವಸ್ತುವಾಗಿದೆ ಎಂದರು.
ರೋಟರಿ ಕ್ಲಬ್ ಪುತ್ತೂರು ಸಿಟಿ ನಿಯೋಜಿತ ಅಧ್ಯಕ್ಷೆ ಗ್ರೆಸ್ಸಿ ಗೊನ್ಸಾಲ್ವೀಸ್ ಮಾತನಾಡಿ, ರಕ್ತ ಸಂಗ್ರಹಕ್ಕಿಂತ ಬೇಡಿಕೆ ಅಧಿಕವಿದೆ. ಶಿಬಿರದ ಮೂಲಕ ರಕ್ತ ಸಂಗ್ರಹವಾಗಬೇಕಿದೆ. ಎಲ್ಲರ ಸಹಭಾಗಿತ್ವ ಇದ್ದಾಗ ಯಶಸ್ವಿಯಾಗಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಒಡಿಯೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೋಂಡಾ ಮಾತನಾಡಿ, ರಕ್ತವು ಇನ್ನೊಬ್ಬರ ಜೀವ ಉಳಿಸಲು ಸಹಕಾರಿಯಾಗಿದ್ದು ಇತರ ಎಲ್ಲಾ ದಾನಗಳಿಂಗಿತಲೂ ಶ್ರೇಷ್ಟವಾದುದು ಎಂದ ಅವರು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ನ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ಒಡಿಯೂರು ಗ್ರಾಮ ವಿಕಾಸದ ಮೇಲ್ವಿಚಾರಕಿ ಸವಿತಾ ರೈ, ಕಾರ್ಯಕ್ರಮ ಸಂಯೋಜಕ ವಿಕ್ಟರ್ ಮಾರ್ಟಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಡಿಯೂರು ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಕೇಶವ ನಾಕ್ ವಂದಿಸಿದರು. ಪ್ಯಾಟ್ರಿಕ್ ಸಿಪ್ರಿಯನ್ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್‌ನ ಗೋಪಿನಾಥ ಶೆಟ್ಟಿ, ಗುರುದೇವ ಸೇವಾ ಬಳಗದ ಉಪಾಧ್ಯಕ್ಷ ವಿಶ್ವನಾಥ ರೈ, ಒಡಿಯೂರು ಗ್ರಾಮ ವಿಕಾಸದ ಸುನಂದಾ ರೈ ಬನ್ನೂರು, ಶಶಿ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮ್ಹಾಲಕ ಸಂಘದ ತಾರಾನಾಥ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮ್ಹಾಲಕ ಸಂಘದ ಸದಸ್ಯರು ಹಾಗೂ ಸೆವೆನ್ ಸೈಂಡ್ ವಾಲಿಬಾಲ್ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು ಸೇರಿದಂತೆ ಹಲವು ಮಂದಿ ರಕ್ತದಾನದಲ್ಲಿ ಸಹಕರಿಸಿದರು.