ವಿಟ್ಲ: ಬೇಸಿಗೆಯ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆ. ಬತ್ತಿ ಹೋದ ಕೊಳವೆಬಾವಿಯನ್ನು ಕೊರೆಯಲಾಗಿದೆ ಮತ್ತು ಕೆಟ್ಟು ಹೋಗಿರುವ ಮೋಟಾರ್ ಮತ್ತು ಪಂಪು ಗಳನ್ನು ದುರಸ್ತಿಗೊಳಿಸಿ ಕುಡಿಯುವ ನೀರಿನ ಪೂರೈಕೆ ಮಾಡಲಾಗಿದೆ. ಕೊಳವೆ ಬಾವಿಗಳಿಗೆ ಮತ್ತು ಪಂಪು ದುರಸ್ತಿಗಳ ಬಿಲ್ಲನ್ನು ಪ್ರಸ್ತುತ ಅರ್ಥಿಕ ವರ್ಷದಲ್ಲಿನ ಕ್ರಿಯಾ ಯೋಜನೆಯಲ್ಲಿ ಅಳವಡಿಸಿ ಪಾವತಿಸಬೇಕಾಗಿದೆ. ಪ್ರಸ್ತುತ ಈಗಲೂ ನೀರು ಸರಬರಾಜು ನಿಗದಿತ ಸಮಯಕ್ಕಿಂತಲೂ ಹೆಚ್ಚಾಗಿ ಪೋಲಾಗುತ್ತಿದೆ. ಅದ್ದರಿಂದ ಎಲ್ಲಾ ಪಂಪು ಚಾಲಕರಿಗೆ ಸಮಯ ಪಾಲನೆ ಮಾಡುವಂತೆ ಹಾಗೂ ನಿರ್ವಹಣೆ ಮಾಡುವಂತೆ ಪಂಪು ಚಾಲಕರಿಗೆ ಸೂಚನೆ ನೀಡುವಂತೆ ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ.ಸುಧೀರ್ ಕುಮಾರ್ ಶೆಟ್ಟಿಯವರು ಸೂಚಿಸಿದರು. ಅವರು ಇಡ್ಕಿದು ಗ್ರಾ.ಪಂ. ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ವರ್ಷವು ಅಂತರ್ಜಲದ ಮಟ್ಟವು ಕುಸಿಯುತ್ತಿದ್ದು ನೀರು ನಿರ್ವಹಣೆಯಲ್ಲಿ ಯೋಚಿಸಬೇಕಾಗಿದೆ. ಎಲ್ಲಾ ಮನೆಗಳಲ್ಲಿ ಜಲ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ತಮ್ಮ ಮನೆಗಳಲ್ಲಿ ವಾರ್ಡುಗಳಲ್ಲಿ ಮಳೆ ನೀರು ಕೊಯ್ಲು ಮಾಡುವಂತೆ ಸೂಚನೆ ನೀಡಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ನೀರು ಚರಂಡಿಯ ಕೆಲಸವು ಈಗಾಗಲೇ ಪ್ರಗತಿಯಲ್ಲಿದ್ದು ಕೆಲವೊಂದು ಕಡೆಗಳಲ್ಲಿ ಬಾಕಿ ಇರುವ ಬಗ್ಗೆ ಸದಸ್ಯರು ತಿಳಿಸಿದಾಗ ಕೂಡಲೇ ಅವುಗಳನ್ನು ಪೂರ್ಣಗೊಳಿಸಲು ಅಧ್ಯಕ್ಷರು ಗುತ್ತಿಗೆದಾರರಿಗೆ ಸೂಚಿಸಿದರು. ಕಟ್ಟಡ ಪರವಾನಿಗೆ ಮತ್ತು ಕಟ್ಟಡ ಸಂಖ್ಯೆ 9 ಮತ್ತು 11ಎ ಗೆ ಸಂಬಂದಿಸಿದಂತೆ ಎಲ್ಲಾ ದಾಖಲೆಗಳನ್ನು ನೀಡಿದಲ್ಲಿ ಪರಿಶೀಲನೆ ನಡೆಸಿ ಯಾವುದೇ ದೂರುಗಳು ಕಾನೂನಾತ್ಮಕ ತೊಂದರೆಯಿಲ್ಲದೇ ಇದ್ದಲ್ಲಿ ನೀಡಲು ನಿರ್ಣಯಿಸಲಾಯ್ತು. ಶೇ.25 ರ ಅನುದಾನದ ವೆಚ್ಚಕ್ಕೆ ಅರ್ಹ ಪಲಾನುಭವಿಗಳ ಪಟ್ಟಿಯನ್ನು ನೀಡಲು ಅಧ್ಯಕ್ಷರು ಸೂಚಿಸಿದರು.
ಗ್ರಾಮ ಪಂಚಾಯತ್ ನಲ್ಲಿ ೨೫ ವರ್ಷಗಳಿಂದ ಗುಮಾಸ್ತ ಹುದ್ದೆಯಲ್ಲಿದ್ದು ಲೆಕ್ಕಸಹಾಯಕರಾಗಿ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮ ಪಂಚಾಯತ್ಗೆ ಭಡ್ತಿ ಹೊಂದಿದ ಸೂರಪ್ಪ ಕೆ ರವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಗ್ರಾ. ಪಂ.ಉಪಾಧ್ಯಕ್ಷರಾದ ಯಶೋಧ, ಸದಸ್ಯರಾದ ಚಿದಾನಂದ.ಪಿ, ರಮೇಶ ಪೂಜಾರಿ, ಸಂಜೀವ, ತಿಲಕ್ರಾಜ್ ಶೆಟ್ಟಿ, ಪದ್ಮನಾಭ, ಸಿದ್ದಿಕ್ ಆಲಿ ಪುರುಷೋತ್ತಮ, ಶೋಭಾ, ಭಾಗೀರಥಿ, ಪುಷ್ಪಾ, ಜಯಂತಿ, ಲಲಿತಾ, ಮೋಹಿನಿ, ಗೀತಾಂಜಲಿ, ಗುಲ್ಶನ್ ಮೊದಲಾದವರು ಉಪಸ್ಥಿತರಿದ್ದರು. ಪಂ.ಸಿಬ್ಬಂದಿ ಭವ್ಯ , ಪೂರ್ಣಿಮಾ, ಸಾವಿತ್ರಿ, ಸುನೀತಾ, ಲೆಕ್ಕಸಹಾಯಕಿ ರಾಜೇಶ್ವರಿ ಸಹಕರಿಸಿದರು. ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಗೋಕುಲ್ದಾಸ್ ಭಕ್ತ ಸ್ವಾಗತಿಸಿ, ವಂದಿಸಿದರು.