ರಕ್ತದಾನ ಎಂದರೆ ಅದು ಜೀವದಾನವಾಗಿದೆ: ಒಡಿಯೂರು ಶ್ರೀ
ವಿಟ್ಲ: ರಾಷ್ಟ್ರೀಯ ಆದರ್ಶ ಸೇವೆ ಮತ್ತು ತ್ಯಾಗ. ತ್ಯಾಗ ತುಂಬಿದ ಸೇವೆ ಭಗವಂತನಿಗೆ ಪ್ರಿಯವಾದುದು. ಜನಪರ ಸೇವೆಗಳು ರೂಪುಗೊಂಡಾಗ ಹಲವರಿಗೆ ಉಪಕಾರಿಯಾಗುತ್ತದೆ. ಸೇವಾ ಮನೋಭಾವನೆ ಎಲ್ಲರಲ್ಲೂ ಮೂಡಿಬರಬೇಕಿದೆ. ರಕ್ತದಾನ ಎಂದರೆ ಅದು ಜೀವದಾನವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವ 2023ರ ಪ್ರಯುಕ್ತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ., ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ಯುವ ಸೇವಾ ಬಳಗ ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ವತಿಯಿಂದ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು, ಒನ್ಸೈಟ್ ಎಸ್ಸಿಲಾರ್ ಲಕ್ಸೋಟಿಕಾ ಫೌಂಡೇಶನ್, ಬೆಂಗಳೂರು, ನೇತ್ರಜ್ಯೋತಿ ಚ್ಯಾರಿಟೇಬಲ್ ಟ್ರಸ್ಟ್, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆಯುಷ್ ಇಲಾಖೆ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ), ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಮಂಗಳೂರು ಸಹಯೋಗದಲ್ಲಿ ಜು.16ರಂದು ಸಂಸ್ಥಾನದಲ್ಲಿ ನಡೆದ ಬೃಹತ್ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ, ಉಚಿತ ಕನ್ನಡಕ ವಿತರಣೆ – ಬೃಹತ್ ರಕ್ತದಾನ ಶಿಬಿರ – ಆಯುರ್ವೇದಿಕ್ ಆರೋಗ್ಯ ತಪಾಸಣೆ – ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಾಮಾಜಕ್ಕಾಗಿ ನಮ್ಮನ್ನು ತೊಡಗಿಸಿಕೊಳ್ಳುವ ಕೆಲಸವಾಗಬೇಕು. ನಗುಮುಖದ ಸೇವೆ ನಮ್ಮಲ್ಲಿರಬೇಕು. ಇಂತಹ ಕಾರ್ಯಕ್ರಮಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೊಂಡಾಗ ಶಿಬಿರ ಸಾರ್ಥಕವಾಗುತ್ತದೆ. ಸಂಸ್ಕಾರ ಇದ್ದರೆ ದೇಶವನ್ನು ಗೆಲ್ಲಬಹುದು. ರೋಗ ಬಂದ ಮೇಲೆ ಔಷದಿ ಹುಡುಕುವ ಮೊದಲು ರೋಗ ಬರುವ ಮೊದಲೇ ಔಷಧಿ ಹುಡುಕಬೇಕು. ಮನಸ್ಸು ಎಲ್ಲದಕ್ಕೂ ಕಾರಣವಾಗಿದೆ. ಬಂಧನದ ಬಿಡುಗಡೆಗೆ ಅಧ್ಯಾತ್ಮ ಪ್ರಮುಖ ಪಾತ್ರ ವಹಿಸುತ್ತದೆ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕಾರ್ಯಕ್ರಮ ನಮ್ಮದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥಾನದಲ್ಲಿ ಆ.8ರಂದು ನಡೆಯಲಿರುವ ಶ್ರೀಗಳ ಜನ್ಮದಿನೋತ್ಸವ , ಗ್ರಾಮೋತ್ಸವ-2023ರ ಆಮಂತ್ರಣ ಪತ್ರವನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಮಂಗಳೂರು ವೆನ್ ಲಾಕ್ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ವಿಭಾಗದ ಮುಖ್ಯಸ್ಥರಾದ ಡಾ. ಶರತ್ ಕುಮಾರ್ ರಾವ್ ಜೆ., ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಡಾ.ಕೆ.ಆರ್ ಕಾಮತ್, ಆಯುಷ್ ಆರೋಗ್ಯದ ವೈದ್ಯಾಧಿಕಾರಿ ಡಾ.ಹೇಮವಾಣಿ, ಪ್ರಸಾದ್ ನೇತ್ರಾಲಯದ ಡಾ.ವೃಂದ, ವೆನ್ಲಾಕ್ ಆಸ್ಪತ್ರೆಯ ವಿಕಲಚೇತನದ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಎನ್.ಬಿ.ಬಸವರಾಜ್, ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಉಝ್ಮ ಫಾತಿಮಾ ಜಾಫರ್, ಬೆಂಗಳೂರು ಒನ್ ಸೈಟ್ ಎಸ್ಸಿಲಾರ್ ಲಕ್ಸೋಟಿಕ್ ಫೌಂಡೇಶನ್ ನ ಮುಖ್ಯ ವ್ಯವಸ್ಥಾಪಕರಾದ ಧರ್ಮಪ್ರಸಾದ್ ರೈ, ಒಡಿಯೂರು ಶ್ರೀ ವಿವಿದೋದ್ಧೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾದ ಎ. ಸುರೇಶ್ ರೈ, ಒಡಿಯೂರು ಗ್ರಾಮವಿಕಾಸ ಯೋಜನೆಯ ಯೋಜನಾಧಿಕಾರಿ ಕಿರಣ್ ಉರ್ವ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೇಣುಕಾ ಎಸ್. ರೈ ಪ್ರಾರ್ಥಿಸಿದರು. ಯಶವಂತ ವಿಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಾಂತೇಶ್ ಭಂಡಾರಿ ವಂದಿಸಿದರು.