ನೆಲ್ಯಾಡಿ ಪೇಟೆಯಲ್ಲಿ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ-ನಾಳೆ ಮೌನ ಪ್ರತಿಭಟನೆ, ಸಂಸದರಿಗೆ ಮನವಿ

0

ನೆಲ್ಯಾಡಿ: ಬಿ.ಸಿ.ರೋಡ್-ಅಡ್ಡಹೊಳೆ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಈ ಸಂದರ್ಭ ನೆಲ್ಯಾಡಿ ಪೇಟೆಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಿರುವುದರಿಂದ ಸಾರ್ವಜನಿಕರಿಗೆ ಆಗಿರುವ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಜು.22ರಂದು ಮಧ್ಯಾಹ್ನ ನೆಲ್ಯಾಡಿ ಪೇಟೆಯಲ್ಲಿ ಮೌನ ಪ್ರತಿಭಟನೆ, ಸಂಸದರಿಗೆ ಮನವಿಗೆ ನಿರ್ಧರಿಸಲಾಗಿದೆ.

ನೆಲ್ಯಾಡಿ ಪೇಟೆಯ ಮಧ್ಯಭಾಗ ಗೋಡೆ ನಿರ್ಮಿಸಿ ಎರಡೂ ಬದಿ ಕಾಣದಂತೆ ರಸ್ತೆ ನಿರ್ಮಿಸಲಾಗಿದೆ. ಇಂತಹ ಅವೈಜ್ಞಾನಿಕ ಕಾಮಗಾರಿ ನೆಲ್ಯಾಡಿಯ ಭವಿಷ್ಯಕ್ಕೆ ಮಾರಕವಾಗಿದೆ. ಈ ರೀತಿಯ ಕಾಮಗಾರಿಯಿಂದ ವರ್ತಕರು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಈ ವಿಚಾರವನ್ನು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಸದರ ಗಮನಕ್ಕೆ ತರಲಾಗಿದ್ದು ಈ ಹಿನ್ನೆಲೆಯಲ್ಲಿ ಕಾಮಗಾರಿ ವೀಕ್ಷಣೆಗೆ ಸಂಸದರಾದ ನಳಿನ್‌ಕುಮಾರ್ ಕಟೀಲ್ ಹಾಗೂ ಹೆದ್ದಾರಿ ಪ್ರಾಽಕಾರದ ಅಽಕಾರಿಗಳು ಜು.22ರಂದು ಮಧ್ಯಾಹ್ನ 12 ಗಂಟೆಗೆ ನೆಲ್ಯಾಡಿಗೆ ಆಗಮಿಸಲಿದ್ದಾರೆ.

ಹೆದ್ದಾರಿ ಕಾಮಗಾರಿ ವೀಕ್ಷಣೆ ಬಳಿಕ ಅಪರಾಹ್ನ 2 ಗಂಟೆಗೆ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯುವ ಸಭೆಯಲ್ಲಿ ರಸ್ತೆ ಕಾಮಗಾರಿಯನ್ನು ಎರಡು ಬದಿಯಿಂದಲೂ ಪೇಟೆ ಕಾಣುವ ರೀತಿ ಪಿಲ್ಲರ್ ಹಾಕಿ ಮಾಡುವಂತೆ ಸಂಸದರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಽಕಾರದ ಅಧಿಕಾರಿಗಳಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆ ತನಕ ಎಲ್ಲಾ ವರ್ತಕರು ಅಂಗಡಿಗಳನ್ನು ಮುಚ್ಚಿ ಹಾಗೂ ಆಟೋ ಚಾಲಕ-ಮಾಲಕರು, ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮೌನ ಪ್ರತಿಭಟನೆ ಮಾಡಿ, ಸಂಸದರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ನೆಲ್ಯಾಡಿ ವರ್ತಕ ಹಾಗೂ ಕಟ್ಟಡ ಮಾಲಕರ ಸಂಘದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here