ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ರೂ 3,78,197.43 ನಿವ್ವಳ ಲಾಭ
ಲೀಟರ್‌ಗೆ 31 ಪೈಸೆ ಬೋನಸ್
ಶೇ 10 ಡಿವಿಡೆಂಡ್

ಕಾಣಿಯೂರು: ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲುರವರ ಅಧ್ಯಕ್ಷತೆಯಲ್ಲಿ ಪುಣ್ಚತ್ತಾರು ಶ್ರೀ ಹರಿ ಭಜನಾ ಮಂದಿರದಲ್ಲಿ ಜು.31ರಂದು ನಡೆಯಿತು. 2022-23ನೇ ಸಾಲಿನಲ್ಲಿ ಸಂಘಕ್ಕೆ ಲೆಕ್ಕಪರಿಶೋಧನೆಯಲ್ಲಿ ‘ಎ’ ಗ್ರೇಡ್ ಬಂದಿದ್ದು ರೂ 3,78,197.43 ನಿವ್ವಳ ಲಾಭಗಳಿಸಿದೆ. ಲೀಟರ್‌ಗೆ 31 ಪೈಸೆ ಬೋನಸ್ ಹಾಗೂ ಶೇ 10 ಡಿವಿಡೆಂಡ್ ಸದಸ್ಯರಿಗೆ ನೀಡುವುದಾಗಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಗೌಡರವರು ಘೋಷಿಸಿದರು.

ವರದಿ ವಾಚಿಸಿದ ಸಂಘದ ಸಿಬ್ಬಂದಿ ಮನೋರಮಾರವರು 2022-23 ನೇ ಸಾಲಿನಲ್ಲಿ ಸಂಘವು ಒಟ್ಟು ರೂ 8,82,79,300.92 ವ್ಯವಹಾರ ನಡೆಸಿದ್ದು, ಉತ್ಪಾದಕರಿಗೆ ರೂ 1,82,37,372.22 ಪಾವತಿಸಲಾಗಿದೆ. 1,95,70,102.13 ರೂ ಹಾಲನ್ನು ದ.ಕ ಒಕ್ಕೂಟಕ್ಕೂ, 4,96,144.00 ರೂಪಾಯಿಯ ಹಾಲನ್ನು ಸ್ಥಳೀಯವಾಗಿಯೂ, 93,901.67 ರೂಪಾಯಿ ಮಾದರಿ ಹಾಲು ಮತ್ತು ಪಶು ಆಹಾರ ಮಾರಾಟದಿಂದಲೂ 39,95,200.00 ರೂಪಾಯಿ ಲವಣ ಮಿಶ್ರಣದಿಂದ ಮಾರಾಟ ಆಗಿ 1,13,300.00 ರೂಪಾಯಿ ಲಾಭ ಬಂದಿದ್ದು, ಒಟ್ಟು ರೂ 3,78,197.43 ನಿವ್ವಳ ಲಾಭ ಬಂದಿರುತ್ತದೆ ಎಂದರು.

ಸಂಘದ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಬೇಕು- ರಾಮಣ್ಣ ಗೌಡ ಮೂಡೈಮಜಲು:
ಸಂಘದ ಅಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಸದಸ್ಯರ ಸಹಕಾರದಿಂದ ಸಂಘಕ್ಕೆ ‘ಎ’ ಗ್ರೇಡ್ ಲಭಿಸಿದೆ. ಈ ಆಡಳಿತ ಮಂಡಳಿಯ ಕೊನೆಯ ಅವಧಿಯಲ್ಲಿzವೆ. ಸಂಘದ ಸಾಕಷ್ಟು ಅಭಿವೃದ್ಧಿಗಳನ್ನು ಮಾಡಿವೆ. ಸಂಘದ ಮುಂದಿನ ಅಭಿವೃದ್ಧಿಗೆ ಸಹಕಾರಿಯಾಗಬೇಕೆಂಬ ದೃಷ್ಠಿಯನ್ನು ಇಟ್ಟುಕೊಂಡು ಸಂಘದ ಪ್ರಧಾನ ಕಚೇರಿಯಲ್ಲಿ ವಿಸ್ತೃತ ಕಟ್ಟಡ ನಿರ್ಮಿಸಲಾಗಿದೆ. ಶುದ್ಧ ಮತ್ತು ಸ್ವಚ್ಚತ್ತೆಯ ಕಡೆಗೆ ಹೆಚ್ಚಿನ ಗಮನಕೊಟ್ಟು, ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ಪೂರೈಕೆ ಮಾಡುವುದರ ಮೂಲಕ ಸಂಘದ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಬೇಕು. ಮುಖ್ಯವಾಗಿ ದನಗಳಿಗೆ ಇನ್ಸೂರೆನ್ಸ್ ಮಾಡಬೇಕಾಗುತ್ತದೆ. ಸಂಘಕ್ಕೆ ಸದಸ್ಯರಿಂದ ಉತ್ತಮ ಸಹಕಾರ, ಗುಣಮಟ್ಟದ ಹಾಲು ಪೂರೈಕೆ, ಸಂಘದ ಅಭೂತಪೂರ್ವ ಸಾಧನೆಗೆ ಕಾರಣವಾಗುತ್ತದೆ ಎಂದರು.

ಸಂಘವು ತನ್ನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ- ಡಾ.ಸತೀಶ್ ರಾವ್:
ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್ ಮಾತನಾಡಿ, ಸಣ್ಣ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘವು ಇದೀಗ ಉತ್ತಮ ಸಾಧನೆ ಮಾಡುತ್ತಿದ್ದು, ಸದಸ್ಯರಿಂದ ಸಂಘಕ್ಕೆ ಗುಣಮಟ್ಟದ ಹಾಲು ಪೂರೈಕೆಯಾಗುತ್ತಿದ್ದು, ಸದಸ್ಯರು ಸಂಘದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ ಕಾರಣ ಸಂಘ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ ಎಂದರು.

ಹಾಲಿನ ಗುಣಮಟ್ಟ ಅತ್ಯವಶ್ಯಕ- ನಾಗೇಶ್:
ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್ ಮಾತನಾಡಿ, ಒಕ್ಕೂಟದಿಂದ ಸಿಗುವಂತಹ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡಾಗ ಲಾಭದಾಯವಾಗುತ್ತದೆ. ಹಾಲಿನ ಗುಣಮಟ್ಟ ಅತ್ಯವಶ್ಯಕ, ಈ ನಿಟ್ಟಿನಲ್ಲಿ ಸಂಘದ ಪ್ರತಿಯೊಬ್ಬ ಸದಸ್ಯರೂ ಕೂಡ ಹಾಲಿನ ನಿಗದಿತ ಕನಿಷ್ಠವಾದರೂ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ಜೊತೆಗೆ ಹಾಲಿನ ನಿರ್ವಹಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿಕೊಳ್ಳಬೇಕು ಎಂದರು.

ಸಂಘದ ಮಾಜಿ ಅಧ್ಯಕ್ಷ ಶೇಷಪ್ಪ ಗೌಡ ಬೆದ್ರಂಗಳ ಸಂಘದ ಪ್ರಧಾನ ಕಚೇರಿಯ ವಿಸ್ತೃತ ಕಟ್ಟಡದ ಉದ್ಘಾಟನೆ ಮತ್ತು ಮಹಾಸಭೆಯನ್ನು ಒಟ್ಟಿಗೆ ಮಾಡಬಹುದಿತ್ತು. ಇದರಿಂದ ಖರ್ಚು ಕೂಡ ಕಡಿಮೆ ಆಗುತ್ತಿತ್ತು. ಅಲ್ಲದೇ ಕಟ್ಟಡ ಉದ್ಘಾಟನೆಗೊಂಡು ವರ್ಷ ತಲುಪುತ್ತಿದ್ದರೂ ಯಾರು ಬಾಡಿಗೆದಾರರು ಬರಲಿಲ್ಲ ಇದರಿಂದ ಸಂಘಕ್ಕೆ ನಷ್ಟವಲ್ಲವೇ ಎಂದಾಗ, ಪ್ರತಿಕ್ರಿಯಿಸಿದ ಸಂಘದ ಅಧ್ಯಕ್ಷರು ಸಂಘದ ಮುಂದಿನ ಅಭಿವೃದ್ಧಿಯ ದೃಷ್ಠಿಯನ್ನು ಇಟ್ಟುಕೊಂಡು ಸಂಘದ ಪ್ರಧಾನ ಕಚೇರಿಯಲ್ಲಿ ವಿಸ್ತೃತ ಕಟ್ಟಡವನ್ನು ನಿರ್ಮಿಸಿವೆ. ಯಾರೂ ಬಾಡಿಗೆದಾರರು ಬರಲಿಲ್ಲ ಎಂದರು. ಸಂಘದ ಸದಸ್ಯ ಅರವಿಂದ ಪುಣ್ಚತ್ತಾರು ಮಾತನಾಡಿ, ಹೈನುಗಾರಿಕೆಗೆ ಪೂರಕವಾದ ಯೋಜನೆಗಳನ್ನು ಒಕ್ಕೂಟದಿಂದ ಕಾರ್ಯ ರೂಪಕ್ಕೆ ತರುವುದು ಉತ್ತಮ. ಆಗ ಮಾತ್ರ ಸದಸ್ಯರು ಅದರ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೇ ಹಾಲಿನ ಕನಿಷ್ಠ ದರವನ್ನು ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ವಿಸ್ತರಣಾಧಿಕಾರಿ ನಾಗೇಶ್, ಸರಕಾರದ ಆದೇಶದಂತೆ ಒಕ್ಕೂಟ ಕಾರ್ಯನಿರ್ವಹಿಸುತ್ತಿದೆ. ಹಾಲಿನ ದರವು ರೂ 3 ಏರಿಕೆಯಾಗಿದೆ ಎಂದರು. ಹಾಲಿನ ಖರೀದಿ ಸಮಯವನ್ನು ವಿಸ್ತರಿಸಬೇಕೆಂದು ಜಿನ್ನಪ್ಪ ಗೌಡ ಸಭೆಯ ಗಮನಕ್ಕೆ ತಂದರು.

ಸಂಘದ ನಿರ್ದೇಶಕರಾದ ಅನಂತರಾಮ ಉಪಾಧ್ಯಾಯ ತುಂಬ್ಯ, ರಾಮಣ್ಣ ಗೌಡ ಮುಗರಂಜ, ಚಂದ್ರಯ್ಯ ಆಚಾರ್ಯ ಅಬೀರ, ರಾಜೇಶ್ ಗೌಡ ಮೀಜೆ, ರಾಮಣ್ಣ ನಾಯ್ಕ ಬೇಂಗಡ್ಕ, ಮಾಯಿಲಪ್ಪ ಪೂಜಾರಿ ಬೇಂಗಡ್ಕ, ಪದ್ಮಯ್ಯ ಗೌಡ ಅಬೀರ, ಸೌಮ್ಯ ಪಿ.ಪೈಕ, ಹೇಮಾವತಿ ಎಂ.ಎಲ್.ಮುಗರಜ, ಸೀತಮ್ಮ ಅಜಿರಂಗಳ ಉಪಸ್ಥಿತರಿದ್ದರು. ನಿರ್ದೇಶಕಿ ಸೌಮ್ಯ ಪಿ.ಪೈಕ ಪ್ರಾರ್ಥಿಸಿದರು. ನಿರ್ದೇಶಕ ರಾಮಣ್ಣ ಗೌಡ ಮುಗರಂಜ ಸಾಮಾನ್ಯ ಸಭೆಯ ನೋಟಿಸ್ ಓದಿದರು. ಸಹಾಯಕ ಚಂದ್ರಶೇಖರ ಗೌಡ ಬೈತಡ್ಕರವರು ಹಿಂದಿನ ಸಾಮಾನ್ಯ ಸಭೆಯ ನಡವಳಿಕೆಗಳನ್ನು ಓದಿದರು. ಸಂಘದ ಅಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ರಾಜೇಶ್ ಮುಂಡಾಲ ವಂದಿಸಿದರು. ರವಿಶಂಕರ್ ಎನ್.ಟಿ ನಾವೂರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಹಾಯಕರಾದ ಚಂದ್ರಶೇಖರ ಗೌಡ ಬೈತಡ್ಕ, ಪುಷ್ಪಾ, ಮನೋರಮಾ, ಸೀತಾರಾಮ ಅನಿಲ ಸಹಕರಿಸಿದರು.

ಸನ್ಮಾನ:
ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಉತ್ತಮ ಜಿ ಅವರ ಪರವಾಗಿ, ಅವರ ತಂದೆ ಪದ್ಮನಾಭ ಗುಂಡಿಗದ್ದೆಯವರನ್ನು ಸನ್ಮಾನಿಸಲಾಯಿತು.

2023-24ನೇ ಸಾಲಿನ ಯೋಜನೆಗಳು:
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಗೌಡರವರು 2023-24ನೇ ಸಾಲಿನ ಯೋಜನೆಗಳಾದ ಕ್ಲಸ್ಟರ್ ಮತ್ತು ಸಂಘದ ಮುಖಾಂತರ ಶುದ್ಧ ಹಾಲು ಉತ್ಪಾದನಾ ಮಾಹಿತಿ ಶಿಬಿರ, ರಾಸುಗಳಿಗೆ ಬಂಜೆತನ ಶಿಬಿರ ಕಾರ್ಯಕ್ರಮ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ, ಸಂಘಕ್ಕೆ ಹಾಲು ಹಾಕುವ ಸದಸ್ಯರ ಮಕ್ಕಳ ಗುರುತಿಸುವಿಕೆ, ಸಿ.ಸಿ ಟಿ.ವಿ ಅಳವಡಿಕೆಯ ಬಗ್ಗೆ ವಿವರಿಸಿದರು.

ಪ್ರಾಯಕ್ಕೆ ಬಂದ ದನಗಳನ್ನು ಗೋಶಾಲೆಗಳಿಗೆ ಕಳುಹಿಸುವ ವ್ಯವಸ್ಥೆಯಾಗಬೇಕು:
ಪ್ರಾಯಕ್ಕೆ ಬಂದ, ಅನುಪಯುಕ್ತವಾದಂತಹ ದನಗಳು ಹಾಗೂ ಗಂಡು ಕರುಗಳನ್ನು ವಿಲೇವಾರಿ ಮಾಡಲು ಕಷ್ಟಸಾಧ್ಯವಾಗುತ್ತಿದ್ದು, ಈ ನಿಟ್ಟಿನಲ್ಲಿ ಸಂಘದ ಹಾಗೂ ಒಕ್ಕೂಟದ ಮುಖಾಂತರ ಗೋ ಶಾಲೆಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಬೇಕು ಎಂದು ದಿನೇಶ್ ಪೈಕರವರು ಲಿಖಿತವಾಗಿ ನೀಡಿದ ಮನವಿಯನ್ನು ಸಭೆಯ ಗಮನಕ್ಕೆ ತರಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ವಿಸ್ತರಣಾಧಿಕಾರಿ ನಾಗೇಶ್‌ರವರು, ಇದರ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ. ಒಕ್ಕೂಟದ ಕಳೆದ ಸಾಮಾನ್ಯ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆಯಾಗಿದೆ. ಆದರೆ ಇದಕ್ಕೆ ಪರಿಹಾರವೇನೆಂಬುದನ್ನು ಸರಕಾರದ ಮಟ್ಟದಲ್ಲಿ ವ್ಯವಸ್ಥೆ ಮಾಡಬೇಕೆ ಹೊರತು ಸಂಘದ ವತಿಯಿಂದ ಕಷ್ಟ. ಗೋಶಾಲೆಗಳಿಗೆ ಸಾಗಿಸುವ ಕೆಲಸವನ್ನು ಸಂಘದ ವತಿಯಿಂದ ಮಾಡಬಹುದು. ಆದರೆ ಗೋಶಾಲೆಗಳಲ್ಲಿ ಅದರ ನಿರ್ವಹಣೆಯ ಖರ್ಚನ್ನು ಕೊಡಬೇಕಾಗುತ್ತದೆ. ಈ ಬಗ್ಗೆ ಆಡಳಿತ ಮಂಡಳಿ ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಬಹುದು ಎಂದರು.

LEAVE A REPLY

Please enter your comment!
Please enter your name here