ವೇಳಾಪಟ್ಟಿ ನಿಗದಿಪಡಿಸಿ ಮೈಸೂರು ಪ್ರಾಂತ ಜಂಟಿ ನಿಬಂಧಕರ ಆದೇಶ
ಹಾಲಿ ಸಂಘಗಳಿಂದ ಗ್ರಾಮಗಳ ಬಿಡುಗಡೆಗೆ ಆ.25- ನೂತನ ಸಂಘ ರಚನೆಗೆ ಷೇರು ಸಂಗ್ರಹಣೆಗೆ ಅನುಮತಿಗೆ ಸೆ.6 -ನೂತನ ಸಂಘ ನೋಂದಾಯಿಸಲು ಸೆ..16-ನೂತನ ಸಂಘದ ಆಡಳಿತ ಮಂಡಳಿ ರಚನೆಗೆ ಅ.31 ಕಡೆ ದಿನ
ಪುತ್ತೂರು:ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳನ್ನು ಒಳಗೊಂಡಂತೆ ಮೈಸೂರು ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಾರ್ಯವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ರಚಿಸುವಂತೆ ಜಂಟಿ ನಿಬಂಧಕರು ಅದೇಶ ಹೊರಡಿಸಿದ್ದಾರೆ.ಇದರಿಂದಾಗಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು ಒಂದಕ್ಕಿಂತ ಹೆಚ್ಚು ಗ್ರಾಮ ಪಂಚಾಯತ್ ವ್ಯಾಪ್ತಿ ಹೊಂದಿರುವ ಸಹಕಾರ ಸಂಘಗಳು ಅಂತಹ ಗ್ರಾಮಗಳನ್ನು ತಮ್ಮ ಕಾರ್ಯನಿರ್ವಹಣೆ ವ್ಯಾಪ್ತಿಯಿಂದ ಬಿಡುಗಡೆಗೊಳಿಸುವುದು ಅನಿವಾರ್ಯವಾಗಿರುವುದರಿಂದರಿಂದ ಸಮಸ್ಯೆ ಎದುರಿಸಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ.
ರಾಜ್ಯ ಸಹಕಾರಿ ಸಚಿವರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಗ್ರಾಮ ಪಂಚಾಯತ್ಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸ್ಥಾಪಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ನಿರ್ದೇಶಿಸಲಾಗಿತ್ತು.ಮೈಸೂರು ಪ್ರಾಂತದ ಸಹಕಾರಿ ಸಂಘಗಳ ಜಂಟಿ ನಿಬಂಧಕರ ವ್ಯಾಪ್ತಿಯಲ್ಲಿರುವ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ೬೪೬ ಗ್ರಾಮ ಪಂಚಾಯತ್ಗಳು ಕಾರ್ಯನಿರ್ವಹಿಸುತ್ತಿದ್ದು ಮುಂದೆ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಪ್ರತ್ಯೇಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವನ್ನು ರಚಿಸುವಂತೆ ಜಂಟಿ ನಿಬಂಧಕರು ಆದೇಶಿಸಿರುತ್ತಾರೆ.ಅದರಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಹೊಂದಿರುವ ಪುತ್ತೂರು,ಮೈಸೂರು, ಹುಣಸೂರು, ಚಾಮರಾಜನಗರ, ಮಂಡ್ಯ, ಪಾಂಡವಪುರ, ಹಾಸನ, ಸಕಲೇಶಪುರ, ಚಿಕ್ಕಮಗಳೂರು, ತರೀಕೆರೆ, ಮಡಿಕೇರಿ, ಮಂಗಳೂರು ಹಾಗೂ ಕುಂದಾಪುರ ಉಪ ವಿಭಾಗದಲ್ಲಿರುವ ಪ್ರತಿ ಗ್ರಾಮ ಪಂಚಾಯತ್ಗಳಲ್ಲಿ ಪ್ರತ್ಯೇಕ ಸಹಕಾರಿ ಸಂಘಗಳ ರಚನೆಯಾಗುವುದು ಅನಿವಾರ್ಯವಾಗಲಿದೆ.
ವೇಳಾಪಟ್ಟಿ ರಚನೆ: ಗ್ರಾಮ ಪಂಚಾಯತ್ಗೊಂದು ಪ್ರತ್ಯೇಕ ಸಹಕಾರಿ ಸಂಘವನ್ನು ಸ್ಥಾಪಿಸುವ ನಿಟ್ಟಿನಲ್ಲಿ ವೇಳಾ ಪಟ್ಟಿಯನ್ನೂ ಸಿದ್ದಪಡಿಸಿ ಆದೇಶಿಸಲಾಗಿದೆ.ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಗ್ರಾಮಗಳನ್ನು ಬಿಡುಗಡೆ ಮಾಡಲು ಆ.25 ಅಂತಿಮ ದಿನವಾಗಿರುತ್ತದೆ.ಬಿಡುಗಡೆಗೊಂಡ ಗ್ರಾ.ಪಂ.ವ್ಯಾಪ್ತಿಯಲ್ಲಿ ನೂತನವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ರಚನೆಗೆ ಷೇರು ಸಂಗ್ರಹಣೆಗೆ ಪ್ರಸ್ತಾವನೆ ಪಡೆದು ಅನುಮತಿ ನೀಡಲು ಸೆ.6 ಅಂತಿಮ ದಿನವಾಗಿದೆ.ನೊಂದಣಿಗೆ ಪ್ರಸ್ತಾವನೆ ಪಡೆದು ನೂತನ ಸಂಘ ನೋಂದಾಯಿಸಲು ಸೆ.16 ಅಂತಿಮ ದಿನವಾಗಿದೆ.ನೂತನವಾಗಿ ರಚನೆಯಾದ ಸಹಕಾರಿ ಸಂಘಗಳ ಆಡಳಿತ ಮಂಡಳಿ ರಚಿಸಲು ಅಕ್ಟೋಬರ್ 31 ಅಂತಿಮ ದಿನವಾಗಿದೆ.
ಅತಂತ್ರದಲ್ಲಿ ಸಹಕಾರಿ ಸಂಘ: ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಗೊಂದು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಸ್ಥಾಪನೆ ಕುರಿತು ಮೈಸೂರು ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕರು ಹೊರಡಿಸಿರುವ ಆದೇಶದಿಂದ, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ವಿಭಜನೆಯಾಗಲಿವೆ.ಎರಡು, ಮೂರು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟು ಬ್ಯಾಂಕಿಂಗ್ ಸ್ವರೂಪದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಸಂಘಗಳು ಅತಂತ್ರ ಸ್ಥಿತಿ ಎದುರಿಸುವ ಭೀತಿಗೆ ಒಳಗಾಗಲಿರುವ ಕುರಿತು ಈಗಾಗಲೇ ಆಡಳಿತ ಮಂಡಳಿಯವರು ಆತಂಕ ವ್ಯಕ್ತಪಡಿಸಿದ್ದಾರೆ.ಸಂಘಗಳ ಆಸ್ತಿಯೂ ವಿಂಗಡಣೆಯಾಗುವುದರಿಂದ ಗೊಂದಲ ಸೃಷ್ಟಿಯಾಗಲಿದೆ.ಹಲವು ಗ್ರಾಮಗಳನ್ನು ಒಳಗೊಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಗಳನ್ನು ಗ್ರಾ.ಪಂ.ವಾರು ವಿಭಜಿಸುವುದು ಸುಲಭವಲ್ಲ. ಇದು ವ್ಯವಹಾರಾತ್ಮಕವಾಗಿಯೂ ಸಮಸ್ಯೆ ಉಂಟು ಮಾಡುವ ಸಾಧ್ಯತೆಯಿದೆ.ಚಿನ್ನಾಭರಣಗಳ ಅಡಮಾನ ಸಾಲ ನೀಡುತ್ತಿರುವ ಸಂಘಗಳು ಭದ್ರತಾ ಕೊಠಡಿಗಳನ್ನು ಒಳಗೊಂಡ ಸುಭದ್ರ ಕಟ್ಟಡಗಳನ್ನು ಹೊಂದಬೇಕಾಗಿದ್ದು, ಇಷ್ಟೊಂದು ಅಲ್ಪ ಸಮಯದಲ್ಲಿ ಇದು ಅಸಾಧ್ಯದ ಮಾತು ಎಂಬ ಅಭಿಪ್ರಾಯಗಳು ಸಹಕಾರಿ ವಲಯದಿಂದ ವ್ಯಕ್ತವಾಗಿದೆ.
ಬೈಫರ್ಗೇಶನ್ ಅಗತ್ಯವಿಲ್ಲ
1975ರಲ್ಲಿಯೂ ಪ್ರತಿ ಗ್ರಾಮಕ್ಕೊಂದು ಸಹಕಾರಿ ಸಂಘಗಳನ್ನು ಹೊಂದಿತ್ತು.ಆರ್ಥಿಕ ನಷ್ಟ ಹೊಂದಿದ ಕಾರಣ ಅದನ್ನು ತಿದ್ದುಪಡಿ ಮಾಡಿ ಇತರ ಸಂಘಗಳೊಂದಿಗೆ ವಿಲೀನ ಮಾಡಿಕೊಂಡು ಸಂಘಗಳಿಗೆ ಶಕ್ತಿ ತುಂಬಲಾಗಿದೆ.ಈಗಿರುವ ಸಹಕಾರಿ ಸಂಘಗಳ ಮೂಲಕ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಖೆಗಳನ್ನು ಹೊಂದಿದ್ದು ಅದರ ಮೂಲಕ ಸರಕಾರ ಹಾಗೂ ಸಹಕಾರಿ ಸಂಘದಲ್ಲಿ ದೊರೆಯುವ ಎಲ್ಲಾ ರೀತಿಯ ಸೇವೆಗಳನ್ನು ಉತ್ತಮ ರೀತಿಯಲ್ಲಿ ನೀಡಲಾಗುತ್ತಿದೆ.ಬೈಫರ್ಗೇಶನ್ ಮಾಡುವ ಅವಶ್ಯಕತೆಯಿಲ್ಲ.ಮಾಡಿದರೆ ಈಗಿರುವ ಸಂಘಗಳ ಶಕ್ತಿ ಕುಂಠಿತಗೊಳ್ಳಲಿದೆ.ಅಲ್ಲದೆ ನಿರೀಕ್ಷಿಸಿದಷ್ಟು ಸೌಲಭ್ಯಗಳು ದೊರೆಯಲು ಸಾಧ್ಯವಿಲ್ಲ. ಪುತ್ತೂರು ಸೇರಿದಂತೆ ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಉತ್ತಮ ಸೇವೆ ನೀಡುತ್ತಿದ್ದು ಮುಂದೆಯೂ ಇನ್ನಷ್ಟು ಉತ್ತಮ ಸೇವೆ ನೀಡಲಿದೆ.
-ನನ್ಯ ಅಚ್ಚುತ ಮೂಡೆತ್ತಾಯ, ಅಧ್ಯಕ್ಷರು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ