ನೆಲ್ಯಾಡಿ: ಪತಿಗೆ ವಿಷ ಜಂತು ಕಡಿತಗೊಂಡ ಸುದ್ದಿಯಿಂದ ಅಘಾತಗೊಂಡ ಪತ್ನಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆಯೊಂದು ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದಲ್ಲಿ ನಡೆದಿದೆ.
ಕೌಕ್ರಾಡಿ ಗ್ರಾಮದ ತೋಟ ಮನೆ ನಿವಾಸಿ, ಅಂಚೆ ಇಲಾಖೆಯ ನಿವೃತ್ತ ಸಿಬ್ಬಂದಿ ಪದ್ಮಯ್ಯ ಗೌಡರವರ ಪತ್ನಿ ದೇವಕಿ(ಸೇಸಮ್ಮ)(60ವ.) ಹೃದಯಾಘಾತಕ್ಕೊಳಗಾಗಿ ಮೃತಪಟ್ಟವರಾಗಿದ್ದಾರೆ. ಪದ್ಮಯ್ಯ ಗೌಡ(66ವ.)ರವರು ಆ.5ರಂದು ಬೆಳಿಗ್ಗೆ 11 ಗಂಟೆಯ ವೇಳೆಗೆ ತಮ್ಮ ತೋಟದಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ವಿಷಜಂತುವೊಂದು ಕಡಿತಗೊಂಡಿತ್ತು. ಅವರು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಅಘಾತಗೊಂಡ ಅವರ ಪತ್ನಿ ದೇವಕಿಯವರು ಅದೇ ದಿನ ರಾತ್ರಿ 12 ಗಂಟೆ ವೇಳೆಗೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಎದೆನೋವು ಕಾಣಿಸಿಕೊಂಡಿದ್ದ ದೇವಕಿಯವರನ್ನು ಮನೆಯವರು ತಕ್ಷಣ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಕರೆತಂದರಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ.
ಆ.7ರಂದು ಅಂತ್ಯಕ್ರಿಯೆ:
ಪದ್ಮಯ್ಯ ಗೌಡರವರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಎರಡು ದಿನದ ಬಳಿಕ ದೇವಕಿಯವರ ಅಂತ್ಯಕ್ರಿಯೆ ಮಾಡಲಾಗಿದೆ. ಚಿಕಿತ್ಸೆಯಲ್ಲಿದ್ದ ಪದ್ಮಯ್ಯ ಗೌಡರವರು ತುಸು ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆ.7ರಂದು ಬೆಳಿಗ್ಗೆ ಆಸ್ಪತ್ರೆಯಿಂದ ಮನೆಗೆ ಕರೆತಂದು ದೇವಕಿಯವರ ಅಂತ್ಯಕ್ರಿಯೆ ನಡೆಸಲಾಗಿದೆ. ದೇವಕಿಯವರ ಮೃತದೇಹವನ್ನು ಶವಾಗಾರದಲ್ಲಿಡಲಾಗಿತ್ತು. ಅಂತ್ಯಕ್ರಿಯೆ ಬಳಿಕ ಪದ್ಮಯ್ಯ ಗೌಡರವರು ಚಿಕಿತ್ಸೆಗಾಗಿ ರಾತ್ರಿ ವೇಳೆ ಮತ್ತೆ ಎ.ಜೆ.ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತ ದೇವಕಿಯವರು ಪತಿ ಪದ್ಮಯ್ಯ ಗೌಡ, ಪುತ್ರರಾದ ಹರೀಶ, ಶೇಖರ, ಶಶಿಧರ ಗೌಡ, ಪುತ್ರಿ ಪುಷ್ಪಲತಾ, ಮೈದುನ ರಾಘವ, ಸಹೋದರಿ ವಿಜಯ, ಕಾರ್ತಿಕ, ಕಲ್ಪನಾ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.