ನೆಲ್ಯಾಡಿ-ರಾಮನಗರ: ನೂತನ ಧ್ವಜಸ್ತಂಭ ಉದ್ಘಾಟನೆ, ಧ್ವಜಾರೋಹಣ

0

ನೆಲ್ಯಾಡಿ: ನೆಲ್ಯಾಡಿ ಗ್ರಾಮದ ರಾಮನಗರ ಶ್ರೀ ರಾಮಮಂದಿರದ ವಠಾರದಲ್ಲಿ ನಿರ್ಮಾಣಗೊಂಡ ನೂತನ ಧ್ವಜಸ್ತಂಭದ ಉದ್ಘಾಟನೆ ಮತ್ತು ಧ್ವಜಾರೋಹಣ ಕಾರ್ಯಕ್ರಮ ಆ.15ರಂದು ನಡೆಯಿತು.


ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಅಮೆತ್ತಿಮಾರುಗುತ್ತು ಹೊಸಮನೆಯವರು ತನ್ನ ತಂದೆ ಕಳ್ಳಿಗೆ ಬೀಡು ದಿ.ವಾಸಪ್ಪ ಶೆಟ್ಟಿ ಮತ್ತು ಕೊಂಬಿಲ ದಿ.ಕಲ್ಯಾಣಿ ಶೆಟ್ಟಿಯವರ ಸ್ಮರಣಾರ್ಥ ನಿರ್ಮಿಸಿದ ನೂತನ ಧ್ವಜ ಸ್ತಂಭವನ್ನು ಶ್ರೀರಾಮ ಮಂದಿರಕ್ಕೆ ಹಸ್ತಾಂತರಿಸಲಾಯಿತು. ಗಂಗಾಧರ ಶೆಟ್ಟಿಯವರ ಹಿರಿಯ ಸಹೋದರಿ ಪುಷ್ಪ ಬಾಲಕೃಷ್ಣ ರೈ ಸೊರಕೆಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ನೂತನ ಧ್ವಜಸ್ತಂಭಕ್ಕೆ ತೆಂಗಿನ ಕಾಯಿ ಒಡೆದು ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದ ಶ್ರೀ ರಾಮ ಕುಂಜೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಬಲ್ಯರವರು ಮಾತನಾಡಿ, ನೂತನ ಧ್ವಜಸ್ತಂಭದ ಕೊಡುಗೆ ಅತ್ಯಂತ ಶ್ರೇಷ್ಠವಾದ ಕೊಡುಗೆಯಾಗಿದೆ. ರಾಷ್ಟ್ರ ಪ್ರೇಮವನ್ನು ಅರಳಿಸುವ ಮತ್ತು ರಾಷ್ಟ್ರ ಪ್ರೇಮದ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಕೊಡಲ್ಪಟ್ಟ ಈ ರಾಷ್ಟ್ರಧ್ವಜದ ಮೂಲಕ ನಾವೆಲ್ಲ ದೇಶಭಕ್ತಿಯನ್ನು ಜಾಗೃತಿಗೊಳಿಸಬೇಕಾಗಿದೆ. ಅಮೆತ್ತಿಮಾರುಗುತ್ತು ಮನೆತನದ ನನ್ನ ಶಿಷ್ಯ ಗಂಗಾಧರ ಶೆಟ್ಟಿ ಮತ್ತು ಸಹೋದರಿಯರು ಮಾಡಿದ ಈ ಪುಣ್ಯಕಾರ್ಯ ಶ್ಲಾಘನೀಯವಾಗಿದೆ ಎಂದರು.ನಿವೃತ್ತ ಪೊಲೀಸ್ ಅಧಿಕಾರಿ ಕರಂಬಳ್ಳಿ ಭಾಸ್ಕರ್ ಶೆಟ್ಟಿ, ನೆಲ್ಯಾಡಿ ಗ್ರಾ.ಪಂ.ಸದಸ್ಯ ರವಿಪ್ರಸಾದ್ ಶೆಟ್ಟಿ, ಸೊರಕೆ ಬಾಲಕೃಷ್ಣ ರೈ, ಶ್ರೀ ವಿನಾಯಕ ಭಜನಾ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ರೈ ರಾಮನಗರ, ವಿನಾಯಕ ಯಕ್ಷಗಾನ ಮಂಡಳಿಯ ಅಧ್ಯಕ್ಷ ಜಯರಾಮಗೌಡ ನಾಲ್ಗುತ್ತು, ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಕೋಶಾಧಿಕಾರಿ ಸೀತಾರಾಮ ಗೌಡ ಕಾನಮನೆ, ಭಜನಾ ಮಂಡಳಿಯ ಕಾರ್ಯದರ್ಶಿ ರಾಧಾಕೃಷ್ಣ ಗೌಡ ಹುಣಸೆಬೆಟ್ಟು, ಪ್ರಗತಿಪರ ಕೃಷಿಕ ರಮೇಶ ಗೌಡ ನಾಲ್ಗುತ್ತು, ಧಾರ್ಮಿಕ ಮುಂದಾಳು ಶೀನಪ್ಪ ಗೌಡ ಬರೆಮೇಲು, ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಅಮ್ಮಿ ಗೌಡ ನಾಲ್ಗುತ್ತು, ರಾಮನಗರ ಫ್ರೆಂಡ್ಸ್ ಅಧ್ಯಕ್ಷ ಮೌನೇಶ ಗೌಡ ಬಾರಿಕೆ, ಕಾರ್ಯದರ್ಶಿ ರಿಷಬ್ ಶೆಟ್ಟಿ, ರಾಮನಗರ ಫ್ರೆಂಡ್ಸ್‌ನ ಸದಸ್ಯರು, ಭಜನಾ ಮಂಡಳಿಯ ಸದಸ್ಯರು, ಊರಿನ ಹಿರಿಯರು ಉಪಸ್ಥಿತರಿದ್ದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಗಂಗಾಧರ ಶೆಟ್ಟಿಯವರು, ನನ್ನ ತಂದೆ ಮತ್ತು ತಾಯಿಯ ಸ್ಮರಣಾರ್ಥ ದೇಶಪ್ರೇಮದ ಸಂಕೇತವಾಗಿ ಕೊಡಲ್ಪಟ್ಟ ಈ ಧ್ವಜಸ್ತಂಭದ ಉದ್ಘಾಟನಾ ಸಮಾರಂಭ ನನ್ನ ಜೀವನದ ಪರಮ ಯೋಗವಾಗಿದೆ. ಈ ಪುಣ್ಯ ಕಾರ್ಯದ ಮೂಲಕ ಸಿಗುವ ಭಾರತಮಾತೆಯ ಆಶೀರ್ವಾದ ನಮ್ಮೆಲ್ಲರ ಮೇಲೆ ಇರಲಿ. ದೇಶ ಪ್ರೇಮ ಪ್ರತಿ ಹಳ್ಳಿಗಳಿಂದ ಪ್ರತಿ ಮನೆ ಮನೆಗಳಿಂದ ಪ್ರಾರಂಭವಾಗಬೇಕು ಎಂದು ಹೇಳಿದರು.
ಧ್ವಜಾರೋಹಣ:
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣವನ್ನು ಶ್ರೀರಾಮ ಮಂದಿರದ ಅಧ್ಯಕ್ಷರಾದ ಚಂದ್ರಶೇಖರ ರೈ ರಾಮನಗರ ನೆರವೇರಿಸಿದರು ಅಮ್ಮಿ ಗೌಡ ಕಾರ್ಯಕ್ರಮ ನಿರೂಪಿಸಿದರು. ಶೀನಪ್ಪ ಗೌಡ ಬರೆಮೇಲು ವಂದಿಸಿದರು. ನಂತರ ಸಿಹಿ ತಿಂಡಿ ವಿತರಣೆ ನೆರವೇರಿತು. ಭಜನಾಮಂದಿರದ ಅರ್ಚಕ ಮತ್ತು ಮಾಜಿ ಅಧ್ಯಕ್ಷ ವಿಶ್ವನಾಥ ಗೌಡ ದೇವರಿಗೆ ಪೂಜೆಯನ್ನು ಮಾಡಿ ಪ್ರಸಾದ ವಿತರಿಸಿದರು. ಶಾಸ್ತಾರೇಶ್ವರ ದೇವಸ್ಥಾನದ ಕೋಶಾಧಿಕಾರಿ ಸೀತಾರಾಮ ಗೌಡ ಕಾನಮನೆಯವರು ಮಾತನಾಡಿ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಗಂಗಾಧರ ಶೆಟ್ಟಿಯವರು ಕೊಡುಗೆಯಾಗಿ ನೀಡಿದ ನೂತನ ಧ್ವಜಸ್ತಂಭ ಈ ಧಾರ್ಮಿಕ ಕೇಂದ್ರಕ್ಕೆ ಕಳಶಪ್ರಾಯವಾಗಿದೆ. ಇದನ್ನು ಸಂರಕ್ಷಿಸಿ ಈ ಪುಣ್ಯ ಶ್ರದ್ಧಾ ಕೇಂದ್ರದ ಮೂಲಕ ಮಕ್ಕಳಲ್ಲಿ ದೇವರು, ಹಿರಿಯರ ಬಗ್ಗೆ ಭಕ್ತಿ ಮತ್ತು ದೇಶಭಕ್ತಿಯನ್ನು ಬೆಳೆಸಬೇಕಾಗಿದೆ ಎಂದರು. ನೂತನ ಧ್ವಜಸ್ತಂಭದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ವಿನಾಯಕ ಯಕ್ಷಗಾನ ಮಂಡಳಿಯ ಕಾರ್ಯದರ್ಶಿ ಕಿರಣ್ ಗೌಡ ಪುತ್ತಿಲ ಮತ್ತು ಧಾರ್ಮಿಕ ಮುಂದಾಳುಗಳಾದ ನಿತಿನ್ ಮಾರ್ಲ, ಜಗದೀಶ್ ಮಾರ್ಲ, ಜನಾರ್ದನ ಗೌಡ ಹೊಸಮನೆ, ಸಂಪತ್ ಕುಮಾರ್ ಶೆಟ್ಟಿ ರಾಮನಗರ, ಮೋನಪ್ಪ ರಾಮನಗರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here