ಅಪ್ಪೆಕೂಟದ ನೆಲೆಯಲ್ಲಿ ಅಪ್ಪೆ ಭಾಷೆ ಬೆಳೆಯಲಿ – ಒಡಿಯೂರು ಶ್ರೀ
ಪುತ್ತೂರು: ಅಪ್ಪೆಕೂಟ ಅನ್ನುವುದು ಅಪ್ಪೆ ಭಾಷೆಗೆ ಹತ್ತಿರದ ನಂಟನ್ನು ಕಲ್ಪಿಸುತ್ತದೆ. ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜೊತೆಗೆ ಅಪ್ಪೆಕೂಟದ ತುಳು ಭಾಷೆ ರಾರಾಜಿಸುತ್ತಿರುವಂತೆ ಕಾಣುತ್ತಿದೆ. ಅಪ್ಪೆ ಕೂಟದ ಮೂಲಕವೂ ನಮ್ಮ ತುಳುವರ ಧ್ವನಿ ರಾಜ್ಯ, ರಾಷ್ಟ್ರಮಟ್ಟಕ್ಕೆ ಮುಟ್ಟಿ ತುಳು ಭಾಷೆ ಮೆರೆಯಲಿ ಎಂದು ಒಡಿಯೂರು ಗುರುದೇವಾನಂದ ಸ್ವಾಮೀಜಿ ನುಡಿದರು.
ತುಳು ನಾಡು, ನುಡಿ, ಸಂಸ್ಕೃತಿ, ಸಂಪ್ರದಾಯದ ಆಚರಣೆ ಮತ್ತು ಉಳಿವಿಗೆ ಶ್ರಮಿಸುವ ಮಹಿಳೆಯರ ಸಂಘಟನೆಯಾದ ತುಳು ಅಪ್ಪೆ ಕೂಟ ಪುತ್ತೂರಿನ ಉದ್ಘಾಟನೆ, ಸನ್ಮಾನ ಮತ್ತು ಪಂಚಮಿನದನ ಕಾರ್ಯಕ್ರಮದ ಕರೆಯೋಲೆ ಮತ್ತು ತುಳು ಅಪ್ಪೆ ಕೂಟದ ಲೋಗೋ ಬಿಡುಗಡೆ ಮಾಡಿ ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಸಾಧ್ವಿ ಮಾತಾನಂದಮಯೀ ಆಶೀರ್ವಚನ ನೀಡಿದರು.
ತುಳುನಾಡ ಮೊದಲ ಮಹಿಳಾ ತುಳುಕೂಟ ಎನ್ನುವ ನೆಗಳ್ತೆಗೆ ಪಾತ್ರವಾದ ತುಳು ಅಪ್ಪೆ ಕೂಟದ ಉದ್ಘಾಟನೆ ಆ.27ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಲಕ್ಷ್ಮೀ ಬಳ್ಳಕ್ಕುರಾಯ (ನಾಟಿವೈದ್ಯೆ, ಸಾಹಿತ್ಯ) ಕರ್ನಾಟಕ ಕಲಾರತ್ನ, ವಿದುಷಿ ನಯನಾ ವಿ ರೈ ಕುದ್ಕಾಡಿ (ಆರ್ಯಭಟ ಪ್ರಶಸ್ತಿ ಪುರಸ್ಕೃತ ಭರತನಾಟ್ಯ ಕಲಾವಿದೆ), ಪ್ರೇಮಲತಾ ರಾವ್ (ಸಂಘಟನೆ, ಮಾಜಿ ಸದಸ್ಯರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ), ವಿದುಷಿ ಅಪರ್ಣಾ ಕೊಡೆಂಕಿರಿ (ಸಂಗೀತ, ಭರತನಾಟ್ಯ ಕಲಾವಿದೆ, ಭಗವದ್ಗೀತೆಯನ್ನು ತುಳು ಲಿಪಿಯಲ್ಲಿ ಬರೆದವರು), ಪ್ರೇಮಲತಾ ಮಾಧವ ಬಂಗೇರ (ಹೈನುಗಾರಿಕೆ, ಕೃಷಿ) ರವರಿಗೆ ಸನ್ಮಾನ ನಡೆಯಲಿದೆ.
ಉದ್ಘಾಟನೆಯ ಬಳಿಕ ನಡೆಯುವ ಪಂಚ ಮಿನದನ ಕಾರ್ಯಕ್ರಮದಲ್ಲಿ ತುಳು ನಾಡು, ನುಡಿ, ಸಂಸ್ಕೃತಿ, ಆಚಾರ ವಿಚಾರಕ್ಕೆ ಸಂಬಂಧಪಟ್ಟ ಅಪ್ಪೆ ಮಣ್ಣ ಕಮ್ಮೆನ – ತುಳು ಕವಿಗೋಷ್ಠಿ ನಡೆಯಲಿದೆ. ಜೋಕುಲೆ ತೆಲಿಕೆ ನಲಿಕೆ ಪದರಂಗೀತೊ ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳ ಮತ್ತು ಅಪ್ಪೆಕೂಟದ ತಾಯಂದಿರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಭಾರತೀಯ ದುತ್ತೈತೊಡು ಪೊಂಜೋವುಲೆ ಒಯ್ಯಾರೋಪಸಾಲೆ ಅನ್ನುವ ಅಶಯದಲ್ಲಿ ಸಾಂಪ್ರದಾಯಿಕ ತುತ್ತೈತೊ ತೂಪರಿಕೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲಿ ಒಬ್ಬರಿಗೆ ಪೊಲ್ಸುದ ಪೊದಿಕೆ /ಅದೃಷ್ಟ ವ್ಯಕ್ತಿ ಪ್ರಶಸ್ತಿ ನೀಡಲಾಗುವುದು. ಚಹಾ ತಿಂಡಿ ಊಟದ ಜೊತೆಗೆ ತುಳು ಅಪ್ಪೆಕೂಟದ ಕಾರ್ಯಕ್ರಮ ನಡೆಯಲಿದೆಯೆಂದು ತುಳು ಅಪ್ಪೆ ಕೂಟದ ಅಧ್ಯಕ್ಷರಾದ ಹರಿಣಾಕ್ಷಿ ಜೆ ಶೆಟ್ಟಿ, ಕಾರ್ಯದರ್ಶಿ ವಿದ್ಯಾಶ್ರೀ ಎಸ್ ತುಳುನಾಡ್, ಕೋಶಾಧಿಕಾರಿ ಭಾರತಿ ವಸಂತ್ ತಿಳಿಸಿದರು. ತುಳು ಅಪ್ಪೆ ಕೂಟದ ಕರೆಯೋಲೆ ಮತ್ತು ಲೋಗೋ ಬಿಡುಗಡೆಯಲ್ಲಿ ಒಡಿಯೂರು ತುಳುಕೂಟದ ಅಧ್ಯಕ್ಷರಾದ ಯಶವಂತ್ ವಿಟ್ಲ, ತುಳು ಅಪ್ಪೆ ಕೂಟದ ಅಧ್ಯಕ್ಷರಾದ ಹರಿಣಾಕ್ಷಿ ಜೆ ಶೆಟ್ಟಿ, ಗೌರವಾಧ್ಯಕ್ಷರಾದ ಪ್ರೇಮಲತಾ ರಾವ್, ಗೌರವ ಸಲಹೆಗಾರರಾದ ವಸಂತಲಕ್ಷ್ಮೀ ಪುತ್ತೂರು, ಕೋಶಾಧಿಕಾರಿ ಭಾರತಿ ವಸಂತ್, ಸದಸ್ಯರಾದ ಅಂಬಿಕಾ ರಮೇಶ್ ಉಪಸ್ಥಿತರಿದ್ದರು.