ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಮಾಂತೂರಿನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕೆಯೊಬ್ಬರಿಗೆ ಕಾರಿನಲ್ಲಿ ಬಂದ ವ್ಯಕ್ತಿಗಳು ಬೆದರಿಕೆಯೊಡ್ಡಿ, ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಪೊಲೀಸರು ಇನ್ನೂ ಕೂಡಾ ಬಂಧಿಸಿಲ್ಲ. ಆರೋಪಿಗಳನ್ನು 15 ದಿನದೊಳಗೆ ಬಂಧಿಸಿದ್ದರೆ ಡಿವೈಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಎಚ್ಚರಿಕೆ ನೀಡಿದೆ.
ಪುತ್ತೂರಿನಲ್ಲಿ ಪ್ರತಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಅವರು ಮಾತನಾಡಿ ಪುಣ್ಚಪ್ಪಾಡಿ ಗ್ರಾಮದ ಮಾಂತೂರಿನಲ್ಲಿ ನಾಗರತ್ನಮ್ಮ ಎಂಬವರ ಜಮೀನಿನಲ್ಲಿ ಪುಷ್ಪ ಎಂಬವರು ಕೂಲಿ ಕಾರ್ಮಿಕೆಯಾಗಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಆ.16ರಂದು ಕಾರಿನಲ್ಲಿ ಬಂದ ವೆಂಕಟ್ರಮಣ ಭಟ್ ಮತ್ತು ಅವರ ಮಗ ನರೇಶ್ ಭಟ್ ಅವರು ಕೂಲಿ ಕಾರ್ಮಿಕೆ ಪುಷ್ಪ ಅವರಿಗೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿ, ಜಾತಿ ನಿಂದನೆ ಮಾಡಿದ್ದಾರೆ. ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಈ ತನಕ ಆರೋಪಿಗಳನ್ನು ಬಂಧಿಸಿಲ್ಲ. ಆರೋಪಿಗಳನ್ನು 15 ದಿನದೊಳಗೆ ಬಂಧಿಸಿ, ಕೃತ್ಯಕ್ಕೆ ಬಳಸಿದ ಕಾರನ್ನು ಮುಟ್ಟುಗೋಲು ಹಾಕಬೇಕು. ಇಲ್ಲವಾದಲ್ಲಿ ಪುತ್ತೂರು ಡಿವೈಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ ಬೆದ್ರಕಾಡು, ಪುತ್ತೂರಿನ ದಲಿತ ಮುಖಂಡ ಅಭೀಷೇಕ್ ಬೆಳ್ಳಿಪ್ಪಾಡಿ, ಸಂತ್ರಸ್ಥೆ ಪುಷ್ಪಾ, ಅಚ್ಚುತ ಉಪಸ್ಥಿತರಿದ್ದರು.