ನಮ್ಮಲ್ಲಿರುವ ಒಳ್ಳೆಯ ಭಾವನೆಯಿಂದ ಒಳಿತಾಗುತ್ತದೆ : ಮಾಣಿಲ ಶ್ರೀ
ನಮ್ಮ ವೃತ್ತಿಯಲ್ಲಿ ನಿಷ್ಠೆ ಪ್ರಾಮಾಣಿಕತೆ ಅಗತ್ಯ: ಡಾ.ಶ್ರೀರಾಮ ಭಟ್
ವಿಟ್ಲ: ದೇಶ, ರಾಷ್ಟ್ರ ಅಭಿವೃದ್ಧಿ ಹೊಂದಲು ಮಕ್ಕಳ ಭವಿಷ್ಯ ಚೆನ್ನಾಗಿರಬೇಕು. ಜಗತ್ತಿನ ಶಕ್ತಿ ಮಕ್ಕಳಲ್ಲಿದೆ. ದುರಾಭ್ಯಾಸ ನಮ್ಮಲ್ಲಿರಕೂಡದು. ಮಕ್ಕಳಲ್ಲಿ ಸಂಸ್ಕೃತಿಯನ್ನು ಹುಟ್ಟಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕಿದೆ. ನಾವು ನಡೆದು ಬಂದ ಹಾದಿಯ ಬಗ್ಗೆ ನಮಗೆ ಅರಿವಿರಬೇಕು. ಪ್ರೀತಿ ಭಾವೈಕ್ಯತೆ ನಮ್ಮಲ್ಲಿದ್ದರೆ ಜೀವನ ಪಾವನ ಎಂದು ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಾಲಕ್ಷ್ಮೀ ವ್ರತಾಚರಣೆ ಬೆಳ್ಳಿಹಬ್ಬ ಮಹೋತ್ಸವದ ಅಂಗವಾಗಿ 48 ದಿನಗಳ ಕಾಲ ನಡೆಯುವ ಸಾಮೂಹಿಕ ಶ್ರೀಲಕ್ಷ್ಮೀ ಪೂಜೆಯ 36ನೇ ದಿನವಾದ ಆ.20ರಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಧಾರ್ಮಿಕ ಭಾವನೆಗಳು ನಮ್ಮಲ್ಲಿ ಮೂಡಬೇಕು. ಉಪಕಾರ ಸ್ಮರಣೆ, ಮಾನವೀಯತೆ ನಮ್ಮಲ್ಲಿರಬೇಕು. ಸಮಾಜ ಎಚ್ಚೆತ್ತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಗತ್ತಿನಲ್ಲಿ ಸಾಮರಸ್ಯ ಮೊಳಗಬೇಕು. ನಮ್ಮಲ್ಲಿ ಬಾಲಭೋಜನದಲ್ಲಿ ಪಾಲ್ಗೊಂಡ ಮಕ್ಕಳು ಸುಸಂಸ್ಕೃತರಾಗಿ ಉನ್ನತ ಹುದ್ದೆಗಳಲ್ಲಿದ್ದಾರೆ. ಭಾಲಭೋಜನ ಕಾರ್ಯಕ್ರಮ ಮನೆಮನೆಗಳಲ್ಲಿ ನಿತ್ಯ ನಿರಂತರವಾಗಿ ನಡೆಯಬೇಕಿದೆ ಎಂದರು.
ಮಂಗಳೂರು ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಡಾ.ಶ್ರೀರಾಮ ಭಟ್ ರವರು ಮಾತನಾಡಿ, ಕರ್ಮ ಎಲ್ಲರೂ ಮಾಡಬೇಕು ಅದು ದೈವಸಂಕಲ್ಪ. ನಮ್ಮ ವೃತ್ತಿಯಲ್ಲಿ ನಿಷ್ಠೆ ಪ್ರಾಮಾಣಿಕತೆ ಅಗತ್ಯ. ವೃತ್ತಿಯನ್ನು ಪರಿಶ್ರಮದಿಂದ ಮಾಡಿದಾಗ ಯಶಸ್ಸು ಸಾಧ್ಯ. ಅವರವರ ವೃತ್ತಿ ಅವರವರಿಗೆ ಶ್ರೇಷ್ಠ. ದೈವ – ದೇವರ, ಗುರುಗಳ ಮೇಲೆ ನಂಬಿಕೆ ಮುಖ್ಯ. ನಂಬಿಕೆ ಒಂದಿದ್ದರೆ ಯಾವುದನ್ನೂ ಸಾಧಿಸಲು ಸಾಧ್ಯ ಎಂದರು.
ಮಂಗಳೂರಿನ ಮಹಿಳಾ ವೈದ್ಯೆ ಡಾ.ಮೀರಾ ಶ್ರೀರಾಮ್ ಭಟ್, ಸಾಮಾಜಿಕ ಕಾರ್ಯಕರ್ತರಾದ ಶಿವಕಾಮತ್, ಸುರೇಶ್ ಕುಲಾಲ್ ಕನ್ಯಾನ, ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಸ್ವಾಗತಿಸಿದರು. ಅಶ್ವಿತ್ ಕುಲಾಲ್ ಪಡಂಗಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.