ಯೂಸುಫ್ ರೆಂಜಲಾಡಿ
ಪುತ್ತೂರು: ಕರ್ನಾಟಕ-ಕೇರಳ ಗಡಿ ಪ್ರದೇಶವಾಗಿರುವ ಗಾಳಿಮುಖದಿಂದ ಕುಟುಂಬವೊಂದು ದೇಶ ಪರ್ಯಟನೆಗೆ ಹೊರಟಿದೆ.
ಆ.20ರಂದು ಮಹಿಂದ್ರಾ ಥಾರ್ ಜೀಪ್ ಮೂಲಕ ಗಾಳಿಮುಖದಿಂದ ದೇಶ ಪರ್ಯಟನೆ ಹೊರಟಿರುವ ಕುಟುಂಬ ನೇಪಾಲ ಹಾಗೂ ಭೂತಾನ್ಗೂ ಹೋಗಲಿದ್ದಾರೆ. ಗಾಳಿಮುಖ ನಿವಾಸಿ ಮಹಮ್ಮದ್ ಸಿಂಸಾರ್ ಹಾಗೂ ಅವರ ಪತ್ನಿ ಅಶ್ಪಾನ, ಮಗು ಮತ್ತು ಸಹೋದರಿ ಖದೀಜತ್ ಶಾಝ ಮೊದಲಾದವರು ಯಾತ್ರಾ ತಂಡದಲ್ಲಿದ್ದು ದೇಶದ ವಿವಿಧ ಪ್ರದೇಶಗಳ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಅಧ್ಯಯನ ಮಾಡಲು ದೇಶ ಪರ್ಯಟನೆಗೆ. ಹೊರಟಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದೇಶ, ವಿದೇಶ ಪರ್ಯಟನೆ ಮಾಡುವುದು ಹೆಚ್ಚಳಗೊಂಡಿದೆಯಾದರೂ ಕುಟುಂಬ ಸಮೇತರಾಗಿ ದೇಶ ಪರ್ಯಟನೆ ಮಾಡುವುದು ಒಂದು ರೀತಿಯ ಸಾಹಸ ಎನ್ನಬಹುದಾಗಿದೆ.
ದೇಶ ಪರ್ಯಟನೆಗೆ ಮೊದಲೇ ಪ್ಲಾನ್ ಹಾಕಿಕೊಂಡಿದ್ದ ಇವರು ತಮ್ಮ ಯಾತ್ರೆಯ ವೇಳಾ ಪಟ್ಟಿಯನ್ನು ಕೂಡಾ ಸಿದ್ದಪಡಿಸಿಕೊಂಡಿದ್ದಾರೆ.
ಮೂರು ತಿಂಗಳ ಪಯಣ: ಕುಟುಂಬ ಮೂರು ತಿಂಗಳುಗಳ ಕಾಲ ಯಾತ್ರೆ ಮಾಡಲು ಪ್ಲಾನ್ ಹಾಕಿಕೊಂಡಿದೆ. ಮೊದಲಿಗೆ ಕಾಸರಗೋಡಿಗೆ ತೆರಳಿ ಆ ಬಳಿಕ ಅಲ್ಲಿಂದ ಪ್ರಯಾಣ ಆರಂಭಿಸಿದ್ದಾರೆ. ತಮ್ಮ ಯಾತ್ರೆಯುದ್ದಕ್ಕೂ ವಿವಿಧ ಪ್ರದೇಶಗಳ ಸಂಸ್ಕೃತಿ, ವೈವಿಧ್ಯತೆ, ಆಚಾರ ವಿಚಾರಗಳನ್ನು ಇವರು ಅಧ್ಯಯನ ನಡೆಸಲಿದ್ದಾರೆ. ಇವರು ಭೇಟಿ ನೀಡುವ ಸ್ಥಳಗಳಲ್ಲಿ ವಿಡಿಯೋ ಮಾಡಿ ಅದನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಕೂಡ ಮಾಡಲಿದ್ದಾರೆ.
`ಟಾಕೀಸ್ ವ್ಲಾಗ್’ ಮೂಲಕ ಮಾಹಿತಿ: ಮಹಮ್ಮದ್ ಸಿಂಸಾರ್ ಮತ್ತು ಕುಟುಂಬ ತಮ್ಮ ಯಾತ್ರೆಯ ವೇಳೆ ಸಂದರ್ಶಿಸುವ ಸ್ಥಳಗಳನ್ನು, ಅಲ್ಲಿನ ವಿಶೇಷತೆಗಳನ್ನು ಮತ್ತು ಅಲ್ಲಿನ ಜನತೆಯ ಜೊತೆ ನಡೆಸುವ ಮಾತುಕತೆಗಳನ್ನು ತಮ್ಮ ಟಾಕೀಸ್ ವ್ಲಾಗ್ ಎನ್ನುವ ಯೂಟ್ಯೂಬ್ ಚಾನೆಲ್ಗೆ ಅಪ್ಲೋಡ್ ಮಾಡಲಿದ್ದು ಅದರ ಮೂಲಕ ಜನರಿಗೂ ಅದನ್ನು ತೋರಿಸುವ ಪ್ರಯತ್ನ ಮಾಡಲಿದ್ದಾರೆ. ತಾವು ಸಂದರ್ಶಿಸುವ ಸ್ಥಳಗಳನ್ನು ಊರಿನ ಜನರಿಗೂ ತಿಳಿಯಪಡಿಸಬೇಕೆನ್ನುವುದು ಇವರ ಉದ್ದೇಶವಾಗಿದ್ದು ಅದಕ್ಕೆ ಬೇಕಾದ ಕ್ಯಾಮರಾವನ್ನು ಕೂಡಾ ಸಿದ್ದಪಡಿಸಿಕೊಂಡಿದ್ದಾರೆ.
ಸಂಪ್ಯ ಎಸ್ಸೈಯಿಂದ ಶುಭ ಹಾರೈಕೆ: ಆ.20ರಂದು ಗಾಳಿಮುಖದಲ್ಲಿ ಸಂಪ್ಯ ಪೊಲೀಸ್ ಠಾಣಾ ಎಸ್ಸೈ ಧನಂಜಯ ಬಿ.ಸಿ ಅವರು ಧ್ವಜ ನೀಡುವ ಮೂಲಕ ಚಾಲನೆ ದೇಶ ಪರ್ಯಟನೆಗೆ ಚಾಲನೆ ನೀಡಿ ಶುಭ ಹಾರೈಸಿದರು. ಸಾಮಾಜಿಕ ಮುಂದಾಳು ಅಶ್ರಫ್ ಕೊಟ್ಯಾಡಿ, ನೆ.ಮುಡ್ನೂರು ಗ್ರಾ.ಪಂ ಸದಸ್ಯ ಮಹಮ್ಮದ್ ರಿಯಾಝ್ ಸಹಿತ ಮಹಮ್ಮದ್ ಸಿಂಸಾರ್ ಕುಟುಂಬಸ್ಥರು, ಸ್ನೇಹಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಸ್ಕೃತಿ, ಸಂಸ್ಕಾರ ತಿಳಿಯುವ ಉದ್ದೇಶ:
ನಾನು, ನನ್ನ ತಂಗಿ, ಪತ್ನಿ ಮತ್ತು ಮಗುವಿನೊಂದಿಗೆ ಭಾರತ ಮತ್ತು ನೇಪಾಳ ಯಾತ್ರೆಗೆ ಹೊರಟಿದ್ದು ಮೂರು ತಿಂಗಳು ನಮ್ಮ ಯಾತ್ರೆ ಮುಂದುವರಿಯಲಿದೆ. ಯಾತ್ರೆಯ ವಿಚಾರವಾಗಿ ಎಲ್ಲ ಸಿದ್ದತೆಗಳನ್ನು ವ್ಯವಸ್ಥಿತವಾಗಿ ಮಾಡಿಕೊಂಡಿದ್ದೇವೆ. ದೇಶದ ಎಲ್ಲಾ ರಾಜ್ಯಗಳ ಸಂಸ್ಕೃತಿ, ಸಂಸ್ಕಾರ, ವೈವಿಧ್ಯತೆಗಳನ್ನು ಅಧ್ಯಯನ ಮಾಡುವುದು ನಮ್ಮ ಉದ್ದೇಶ. ಕುಟುಂಬಕ್ಕೂ ಅವೆಲ್ಲವನ್ನೂ ತೋರಿಸುವ ಉದ್ದೇಶಕ್ಕೆ ಫ್ಯಾಮಿಲಿ ಜೊತೆ ಹೊರಟಿದ್ದೇವೆ. ನಮ್ಮ `ಟಾಕೀಸ್ ವ್ಲಾಗ್’ ಎನ್ನುವ ಯೂಟ್ಯೂಬ್ ಚಾನೆಲ್ ಮೂಲಕ ನಮ್ಮ ದೇಶ ಪರ್ಯಟನೆಯ ಎಲ್ಲ ವಿವರಗಳನ್ನು ಜನರಿಗೆ ತಿಳಿಯಪಡಿಸುತ್ತೇವೆ.
-ಮಹಮ್ಮದ್ ಸಿಂಸಾರ್, ದೇಶ ಪರ್ಯಟನೆ ಹೊರಟವರು
ಸಂಪ್ಯ ಎಸ್ಸೈಯಿಂದ ಶುಭ ಹಾರೈಕೆ:
ನಮ್ಮ ದೇಶ ವಿವಿಧತೆಯಿಂದ ಕೂಡಿದ ಏಕತೆಯ ದೇಶ. ಆಯಾ ರಾಜ್ಯಕ್ಕೆ ಸಂಬಂಧಿಸಿದ ವ್ಯವಸ್ಥೆ, ಜೀವನ ವಿಧಾನ, ಆಹಾರ ಪದ್ದತಿ, ವಾತಾವರಣ, ವಿಶೇಷತೆಗಳನ್ನು ಹೊಂದಿದ್ದು ಅದನ್ನು ತಮ್ಮ ಟಾಕೀಸ್ ವ್ಲಾಗ್’ ಎನ್ನುವ ಯೂಟ್ಯೂಬ್ ಚಾನೆಲ್ ಮುಖಾಂತರ ಜನರಿಗೆ ತಿಳಿಸುವ ಉದ್ದೇಶವನ್ನು ಇವರು ಹೊಂದಿದ್ದಾರೆ.ದೇಶ ಸುತ್ತು ಕೋಶ ಓದು’ ಎನ್ನುವಂತೆ ಜ್ಞಾನವನ್ನು ಹೆಚ್ಚಿಸಿಕೊಂಡು ಅದನ್ನು ಜನರಿಗೆ ತಿಳಿಯಪಡಿಸುವಂತಾಗಲಿ. ನಿಮ್ಮ ಆರೋಗ್ಯ ಕಾಪಾಡಿಕೊಂಡು ಸುರಕ್ಷಿತವಾಗಿ ವಾಪಸ್ ಬನ್ನಿ, ಯಶಸ್ವಿ ಪ್ರಯಾಣ ನಿಮ್ಮದಾಗಲಿ.
-ಧನಂಜಯ ಬಿ.ಸಿ,
ಎಸ್ಸೈ ಸಂಪ್ಯ ಪೊಲೀಸ್ ಠಾಣೆ