9.64 ಲಕ್ಷ ನಿವ್ವಳ ಲಾಭ, ಶೇ.22.50 ಡಿವಿಡೆಂಟ್ ಘೋಷಣೆ
ಉಪ್ಪಿನಂಗಡಿ: ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ ಎಲ್ಲಾ ವ್ಯವಹಾರಗಳಿಂದ 9,64,076.87 ರೂ. ನಿವ್ವಳ ಲಾಭ ಗಳಿಸಿದ್ದು, ಲಾಭಾಂಶದಲ್ಲಿ ಸದಸ್ಯರಿಗೆ ಶೇ.22.50 ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಜಗದೀಶ ರಾವ್ ಮಣಿಕ್ಕಳ ತಿಳಿಸಿದರು.
ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಸಭಾಂಗಣದಲ್ಲಿ ನಡೆದ ಸಂಘದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರ್ಷಾಂತ್ಯಕ್ಕೆ ಒಟ್ಟು 402 ಸದಸ್ಯರ ಸಂಖ್ಯೆಯಿದ್ದು, ಸಂಘವು ಹಾಲು ಮಾರಾಟದಿಂದ 14,99,869.63 ರೂ. ಲಾಭ ಬಂದಿದ್ದು, ಪ್ಯಾಕೆಟ್ ಲವಣ ಮಿಶ್ರಣ, ಕರುಗಳ ಪಶು ಆಹಾರ ಮಾರಾಟ, ಗೋಧಾರ ಶಕ್ತಿ ಪೌಡರ್ ಮಾರಾಟದಿಂದ 45,360 ರೂ. ಲಾಭ ಬಂದಿದೆ. ಇತರೆ ಆದಾಯಗಳಿಂದ 3,06,441.78 ರೂ. ಲಾಭ ಬಂದಿದೆ. ಆಡಿಟ್ ವರ್ಗೀಕರಣದಲ್ಲಿ ಸಂಘವು ‘ಎ’ ಗ್ರೇಡ್ ಪಡೆದಿರುತ್ತದೆ ಎಂದು ತಿಳಿಸಿದರು.
ಸಂಘವು ಹಾಲಿನ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, 5,98,458.87 ಲೀ. ಹಾಲನ್ನು ರೈತರಿಂದ ಖರೀದಿ ಮಾಡಿ ಸದಸ್ಯರಿಗೆ ಗುಣಮಟ್ಟದ ಆಧಾರದ ಮೇಲೆ ಪ್ರತಿ ಲೀಟರ್ಗೆ 31.91ರಂತೆ ಪಾವತಿಸಲಾಗಿರುತ್ತದೆ. ಪ್ರಸ್ತುತ ಸಂಘದಲ್ಲಿ 1640 ಲೀ. ದಿನವಹಿ ಸಂಗ್ರಹವಾಗುತ್ತದೆ. 2021-22ನೇ ಸಾಲಿನಲ್ಲಿ ತಾಲೂಕಿನಲ್ಲಿ ದ್ವಿತೀಯ ಸಂಘ ಪ್ರಶಸ್ತಿಯನ್ನು ನಮ್ಮ ಸಂಘ ಪಡೆದುಕೊಂಡಿದೆ. ಸಂಘದ ಈ ಪ್ರಗತಿಗೆ ಎಲ್ಲಾ ಹಾಲು ಉತ್ಪಾದಕರ ಸದಸ್ಯರು, ಆಡಳಿತ ಮಂಡಳಿ ಮತ್ತು ಸೇವಾ ಮನೋಭಾವನೆಯಿಂದ ದುಡಿದ ಸಿಬ್ಬಂದಿ ಕಾರಣವಾಗಿದ್ದು, ಅವರಿಗೆ ಧನ್ಯವಾದ ತಿಳಿಸಿದರು.
ವರದಿ ವರ್ಷದಲ್ಲಿ ಸಂಘಕ್ಕೆ ಹೆಚ್ಚಿನ ಹಾಲು ಪೂರೈಸಿದ ವಸಂತ ಕುಂಟಿನಿ ಅವರಿಗೆ ಪ್ರಥಮ, ಪರಮೇಶ್ವರ ಕಂಪ ಅವರಿಗೆ ದ್ವಿತೀಯ, ಸದಾನಂದ ಶೆಟ್ಟಿ ಕಿಂಡೋವು ಅವರಿಗೆ ತೃತೀಯ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಎಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಗಲಿದ ಸದಸ್ಯರಿಗೆ ಸಭೆಯಲ್ಲಿ ಐದು ನಿಮಿಷ ಮೌನ ಪ್ರಾರ್ಥನೆ ನಡೆಸಿ, ಶೃದ್ಧಾಂಜಲಿ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಜಯಂತ ಪೊರೋಳಿ, ಸತೀಶ ರಾವ್, ಪ್ರಶಾಂತ, ಈಶ್ವರ ನಾಯಕ್, ದೇರಣ್ಣ ಗೌಡ, ಸುಮತಿ, ವನಿತಾ, ಬಾಲಚಂದ್ರ ಕೆ., ಸದಾನಂದ ಶೆಟ್ಟಿ, ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ, ಪಶು ವೈದ್ಯಾಧಿಕಾರಿ ಡಾ. ಜಿತೇಂದ್ರ ಪ್ರಸಾದ್ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಶೀನಪ್ಪ ಗೌಡ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ಮಧುಷಾ ವರದಿ ಮಂಡಿಸಿದರು. ಸಿಬ್ಬಂದಿಗಳಾದ ಗಣೇಶ್ ಕೆ. ವಂದಿಸಿದರು. ಸುರೇಶ್ ಜಿ. ಕಾರ್ಯಕ್ರಮ ನಿರೂಪಿಸಿದರು. ಚೆನ್ನಯ ಪಿ., ಲಕ್ಷ್ಮೀಶ ಮರುವೇಲು ಸಹಕರಿಸಿದರು.