ನೀರಿನ ಬಗ್ಗೆ ಮನೆ ಮನೆಗಳಲ್ಲಿ ಎಚ್ಚರ ಪ್ರಾರಂಭವಾಗಬೇಕು : ಶ್ರೀಪಡ್ರೆ
ಪುತ್ತೂರು: ನೀರಿನ ಬಗ್ಗೆ ಮನೆ ಮನೆಗಳಲ್ಲಿ ಎಚ್ಚರ ಪ್ರಾರಂಭವಾಗಬೇಕು. ನೀರಿನ ಪೋಲು ಸಮಾಜ ದ್ರೋಹ. ಮಳೆಯ ಲೆಕ್ಕಾಚಾರ ಹಾಕುವುದು ತುಂಬಾ ಅಗತ್ಯ. ಇದು ಕೂಡ ಸಾಕ್ಷರತೆಯ ಒಂದು ಭಾಗ. ನೀರನ್ನು ಎಚ್ಚರಿಕೆಯಿಂದ ಉಪಯೋಗಿಸಬೇಕು. ಬೀಳುವ ಮಳೆಯನ್ನು ಓಡಲು ಬಿಡದೆ ತಡೆಯೊಡ್ಡಿ, ಮಳೆಯ ನೀರು ಇಂಗಿಸುವ ಕಾರ್ಯಗಳಾಗಬೇಕು ಎಂದು ಹಿರಿಯ ಪತ್ರಕರ್ತ ಶ್ರೀಪಡ್ರೆ ಹೇಳಿದರು.
ಅವರು ನಗರದ ನಟ್ಟೋಜ ಪೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಆಯೋಜಿಸಲಾದ ಮಳೆಕೊಯ್ಲು – ಜಲಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.
ಕೆರೆಗಳನ್ನು ಮುಚ್ಚುವುದಲ್ಲ, ಉಳಿಸಿಕೊಂಡು ನೀರಿನ ಮಟ್ಟ ಹೆಚ್ಚಿಸಿಕೊಳ್ಳಬೇಕು. ನೀರು, ಮಣ್ಣು ಮತ್ತು ಕಾಡುಗಳ ಸಂರಕ್ಷಣೆ ಅತೀ ಅಗತ್ಯ. ಬೋಳು ಗುಡ್ಡದ ಮೇಲೆ ಹಸಿರು ಕೊಡೆ ನಿರ್ಮಿಸಬೇಕು. ಎಲ್ಲಿ ಮರ ಇದೆಯೋ ಅಲ್ಲಿ ಬರ ಇಲ್ಲ. ನಲ್ಲಿ ನೀರನ್ನು ತೆರೆದಿಟ್ಟು ಪೋಲುಮಾಡುವವರು ಜಲ ಸಾಕ್ಷರರಲ್ಲ. ಉಳಿಸಿದ ನೀರು ಗಳಿಸಿದ್ದಕ್ಕೆ ಸಮ. ಓಡುವ ನೀರನ್ನು ತೆವಳುವಂತೆ ಮಾಡಿ, ತೆವಳುವ ನೀರನ್ನು ನಿಲ್ಲಿಸಿ, ನಿಂತ ನೀರನ್ನು ಇಂಗಿಸಿ ಭೂಮಿಯಲ್ಲಿನ ನೀರಿನ ಸಂಪತ್ತನ್ನು ವೃದ್ಧಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸ ವೃಂದಕ್ಕೆ ನೀರಿನ ಪ್ರಜ್ಞೆಯನ್ನು ತಿಳಿಸಿಕೊಟ್ಟರು. ಜಲಮಟ್ಟವನ್ನು ರಕ್ಷಿಸಿಕೊಳ್ಳಲು ಇರುವ ಇಂಗುಬಾವಿ ನಿರ್ಮಾಣ, ಕಟ್ಟಡಗಳಿಂದ ಜಲಸಂರಕ್ಷಣೆ, ಕೆರೆಗಳ ಮಹತ್ವ, ಅಡ್ಡಬೋರು ತಂತ್ರಜ್ಞಾನ, ಗುಡ್ಡದ ಎತ್ತರ ಭಾಗದಲ್ಲಿ ನೀರು ಇಂಗಿಸುವಿಕೆ, ಮುಂತಾದುವುಗಳ ಬಗ್ಗೆ ವಿವರಣೆ ಇತ್ತರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಸಮಾಜದ ಸಂಪತ್ತನ್ನು ಎಲ್ಲರೂ ಉಳಿಸಿಕೊಳ್ಳಬೇಕು, ನೀರು ವ್ಯರ್ಥವಾಗದಂತೆ ಜಾಗೃತೆ ವಹಿಸಬೇಕಾದದ್ದು ಪ್ರತಿಯೊಬ್ಬನ ಹೊಣೆಗಾರಿಕೆ ಎಂದು ನುಡಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವರಲಕ್ಷ್ಮಿ ಪ್ರಾರ್ಥಿಸಿದರು. ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿದರು. ವಿದ್ಯಾರ್ಥಿ ಕಿರಣ್ ಅಥಿತಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ನಿಶಾಂತ್ ವಂದಿಸಿದರು.