ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಸಹಕಾರಿ ರಂಗದ ಉದ್ಯೋಗ ಮಾರ್ಗದರ್ಶನ ಕಮ್ಮಟ

0

ರಾಮಕುಂಜ: ಜೊತೆಯಾಗಿ ಕಾರ್ಯನಿರ್ವಹಿಸುವುದೇ ಸಹಕಾರಿ ರಂಗದ ಪ್ರಮುಖ ಧ್ಯೇಯ, ಒಂದು ಗ್ರಾಮದಲ್ಲಿ ಒಂದು ಸಹಕಾರಿ ಸಂಘ ಇದೆ ಎಂದರೆ ಆ ಗ್ರಾಮ ಆರ್ಥಿಕವಾಗಿ ಸುಸ್ಥಿರವಾಗಿದೆ ಎಂದು ಅರ್ಥ. ನಮ್ಮ ಕಸುಬುಗಳನ್ನು ಮಾಡುವ ಬಗ್ಗೆ ಯಾವತ್ತೂ ಕೀಳಾಗಿ ಗಣಿಸಬಾರದು, ನಾವು ನಡೆದು ಬಂದ ದಾರಿಯನ್ನು ಎಂದಿಗೂ ಮರೆಯಬಾರದು,
ಸಮಾನತೆ, ಆರ್ಥಿಕ ಬೆಳವಣಿಗೆ ಹಾಗೂ ಶಾಂತಿಯುತ ಜೀವನ ನಡೆಸಲು ಅನುಕೂಲ ಮಾಡಿಕೊಡುವುದು ಸಹಕಾರಿ ರಂಗದ ಉದ್ದೇಶ ಎಂದು ಪುತ್ತೂರು ಉಪವಿಭಾಗದ ಸಹಕಾರಿ ಸಂಘಗಳ ನಿಬಂಧಕಿ ತ್ರಿವೇಣಿ ರಾವ್ ಹೇಳಿದರು.


ಅವರು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸಹಕಾರಿ ರಂಗ ಉದ್ಯೋಗ ಮಾರ್ಗದರ್ಶನ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಕಮ್ಮಟವನ್ನು ಉಪ್ಪಿನಂಗಡಿ ಸಿ.ಎ.ಬ್ಯಾಂಕಿನ ಅಧ್ಯಕ್ಷ ಕೆ.ವಿ. ಪ್ರಸಾದ್ ಉದ್ಘಾಟಿಸಿ ಮಾತನಾಡಿ, ಸಹಕಾರಿ ರಂಗದಲ್ಲಿ ಉದ್ಯೋಗದ ಅವಕಾಶಗಳು ಅಧಿಕವಾಗಿವೆ. ಪದವೀಧರರು ತಮ್ಮ ತಿಳುವಳಿಕೆ, ಕೌಶಲಗಳನ್ನು ಹೆಚ್ಚಿಸಿಕೊಂಡು ಇಂತಹ ಅವಕಾಶಗಳನ್ನು ಪಡೆದು ಸ್ವಂತ ಊರಲ್ಲೇ ಬೆಳೆಯಲು ಯತ್ನಿಸಬಹುದು ಎಂದರು.
ಆಲಂಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲರಾವ್ ಕಜೆ, ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಂದರ ಶೆಟ್ಟಿಯವರು ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್. ವಹಿಸಿ ಮಾತನಾಡಿ, ನಮ್ಮ ಅರ್ಹತೆಗಳನ್ನು ಹೆಚ್ಚಿಕೊಳ್ಳುತ್ತಲೇ ಉದ್ಯೋಗಗಳನ್ನು ಪಡೆಯಲು ಯತ್ನಿಸಬೇಕು. ಇಂದಿನ ಜಾಗತಿಕ ಬೆಳವಣಿಗೆಯೊಂದಿಗೆ ನಾವೂ ಬೆಳೆದಾಗ, ಸಾರ್ವಜನಿಕರೊಂದಿಗೆ ಹಿತವಾಗಿ ಸ್ಪಂದಿಸಲು ಕಲಿತುಕೊಂಡಾಗ ಇಂತಹ ಸೇವಾರಂಗದಲ್ಲಿ ನಾವು ಬೆಳೆಯುತ್ತೇವೆ ಎಂದರು. ವೇದಿಕೆಯಲ್ಲಿ ಆಡಳಿತಮಂಡಳಿ ಸದಸ್ಯ ಕೆ. ಲಕ್ಷ್ಮೀನಾರಾಯಣ ರಾವ್ ಉಪಸ್ಥಿತರಿದ್ದರು.


ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ದಯಾನಂದ ವಂದಿಸಿದರು. ಉಪನ್ಯಾಸಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಪ್ರತೀಕ್ಷಾ, ಮೋಕ್ಷಿತಾ, ರಚನಾ ಪ್ರಾರ್ಥನೆಗೀತೆ ಹಾಡಿದರು. ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here